ADVERTISEMENT

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಫೈನಲ್‌ನಲ್ಲಿ ಜೊಕೊವಿಚ್‌ ವಿರುದ್ಧ ಅಲ್ಕರಾಜ್‌ಗೆ ಗೆಲುವು

ರಾಯಿಟರ್ಸ್
Published 17 ಜುಲೈ 2023, 2:23 IST
Last Updated 17 ಜುಲೈ 2023, 2:23 IST
ಕಾರ್ಲೋಸ್ ಅಲ್ಕರಾಜ್ ಜಯದ ಸಂಭ್ರಮ 
ಕಾರ್ಲೋಸ್ ಅಲ್ಕರಾಜ್ ಜಯದ ಸಂಭ್ರಮ     –ಎಎಫ್‌ಪಿ ಚಿತ್ರ

ಲಂಡನ್‌: ಅನುಭವಿ ಆಟಗಾರ ನೊವಾಕ್‌ ಜೊಕೊವಿಚ್‌ ಅವರನ್ನು ಐದು ಸೆಟ್‌ಗಳ ಮ್ಯಾರಥಾನ್‌ ಹಣಾಹಣಿಯಲ್ಲಿ ಮಣಿಸಿದ ಸ್ಪೇನ್‌ನ ಯುವ ಪ್ರತಿಭೆ ಕಾರ್ಲೊಸ್‌ ಅಲ್ಕರಾಜ್, ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಕಿರೀಟ ಮುಡಿಗೇರಿಸಿಕೊಂಡರು.

ಆಲ್‌ ಇಂಗ್ಲೆಂಡ್‌ ಕ್ಲಬ್‌ನ ಸೆಂಟರ್‌ ಕೋರ್ಟ್‌ನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಏಳು ಬಾರಿಯ ಚಾಂಪಿಯನ್‌ ಜೊಕೊವಿಚ್‌ ಒಡ್ಡಿದ ಸವಾಲನ್ನು ಅಲ್ಕರಾಜ್ 1–6, 7–6, 6–1, 3–6, 6–4 ರಿಂದ ಬದಿಗೊತ್ತಿದ್ದರು.

ನಾಲ್ಕು ಗಂಟೆ 42 ನಿಮಿಷ ನಡೆದ ಸೆಣಸಾಟ, ಟೆನಿಸ್‌ ಪ್ರೇಮಿಗಳಿಗೆ ರಸದೌತಣ ಉಣಬಡಿಸಿತು. ಇಬ್ಬರೂ ಪಟ್ಟುಬಿಡದೆ ಪೈಪೋಟಿ ನಡೆಸಿದ್ದರಿಂದ ಆರಂಭದಿಂದ ಕೊನೆಯವರೆಗೂ ಪಂದ್ಯವು ರೋಚಕತೆಯನ್ನು ಉಳಿಸಿಕೊಂಡಿತು. 20 ವರ್ಷದ ಅಲ್ಕರಾಜ್‌, ವಯಸ್ಸಿನಲ್ಲಿ ತನಗಿಂತ 16 ವರ್ಷ ಹಿರಿಯನಾಗಿರುವ ಜೊಕೊವಿಚ್‌ ಅವರನ್ನು ವೇಗದ ಸರ್ವ್‌, ನಿಖರ ರಿಟರ್ನ್‌ ಗಳ ಮೂಲಕ ನಿಬ್ಬೆರಗಾಗಿಸಿದರು.

ADVERTISEMENT

ಅಪಾರ ಅನುಭವ ಜೊಕೊವಿಚ್‌ ಅವರ ‘ಬಲ’ ಎನಿಸಿದ್ದರೂ, ಅಲ್ಕರಾಜ್‌ ತಮ್ಮಲ್ಲಿರುವ ಶಕ್ತಿ ಮತ್ತು ವೇಗವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಸ್ಪೇನ್‌ ಆಟಗಾರನ ಕೆಲವೊಂದು ಸರ್ವ್‌ಗಳು ಗಂಟೆಗೆ 130 ಮೈಲು ವೇಗದಲ್ಲಿದ್ದರೆ, ಫೋರ್‌ಹ್ಯಾಂಡ್‌ ರಿಟರ್ನ್‌ಗಳ ವೇಗ ಗಂಟೆಗೆ 100 ಮೈಲು ಗಡಿ ತಲುಪಿದ್ದವು.

ಮೊದಲ ಸೆಟ್‌ನಲ್ಲಿ ಎರಡು ಸಲ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿದ ಜೊಕೊವಿಚ್‌, ಉತ್ತಮ ಆರಂಭ ಪಡೆದಿದ್ದರು. ಆದರೆ ಎರಡು ಮತ್ತು ಮೂರನೇ ಸೆಟ್‌ ಜಯಿಸಿದ ಅಲ್ಕರಾಜ್‌ ತಿರುಗೇಟು ನೀಡಿದರು. ಸುಲಭದಲ್ಲಿ ತಲೆಬಾಗಲು ಸಿದ್ಧವಿಲ್ಲದ ಜೊಕೊವಿಚ್‌, ನಾಲ್ಕನೇ ಸೆಟ್‌ ಗೆದ್ದು 2–2 ರಿಂದ ಸಮಬಲ ಸಾಧಿಸಿದರು.

ನಿರ್ಣಾಯಕ ಸೆಟ್‌ನ ಆರಂಭದಲ್ಲೇ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿದ ಅಲ್ಕರಾಜ್‌ ಮೇಲುಗೈ ಪಡೆದರು. ಆ ಬಳಿಕ ತಮ್ಮ ಸರ್ವ್‌ಗಳನ್ನು ಕಾಪಾಡಿಕೊಂಡು ಇಲ್ಲಿ ಚೊಚ್ಚಲ ಪ್ರಶಸ್ತಿಯತ್ತ ಮುನ್ನಡೆದರು. ತಾವು ಸರ್ವ್‌ ಮಾಡಿದ 10ನೇ ಗೇಮ್‌ನಲ್ಲಿ, ಜೊಕೊವಿಚ್‌ ಅವರ ಫೋರ್‌ಹ್ಯಾಂಡ್‌ ರಿಟರ್ನ್‌ನಲ್ಲಿ ಚೆಂಡು ನೆಟ್‌ಗೆ ಬಡಿಯುತ್ತಿದ್ದಂತೆಯೇ, ಅಲ್ಕರಾಜ್‌ ಗೆಲುವಿನ ಸಂಭ್ರಮ ಆಚರಿಸಿದರು.

ಸ್ಪೇನ್‌ನ ಆಟಗಾರನಿಗೆ ದೊರೆತ ಎರಡನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಇದು. ವಿಂಬಲ್ಡನ್‌ ಚಾಂಪಿಯನ್‌ ಆದ ಮೂರನೇ ಅತಿಕಿರಿಯ ಆಟಗಾರ ಎನಿಸಿಕೊಂಡರು. ಅವರು ಕಳೆದ ವರ್ಷ ಅಮೆರಿಕ ಓಪನ್‌ ಜಯಿಸಿದ್ದರು.

ವಿಂಬಲ್ಡನ್‌ನಲ್ಲಿ ಎಂಟು ಸಲ ಚಾಂಪಿಯನ್‌ ಆಗಿರುವ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರ ದಾಖಲೆಯನ್ನು ಸರಿಗಟ್ಟುವ ಜೊಕೊವಿಚ್ ಕನಸು ಭಗ್ನಗೊಂಡಿತು. ಅದೇ ರೀತಿ ಋತುವಿನ ಎಲ್ಲ ನಾಲ್ಕು ಗ್ರ್ಯಾನ್‌ಸ್ಲಾಮ್‌ ಗೆಲ್ಲುವ ಅವಕಾಶವನ್ನೂ ಕಳೆದುಕೊಂಡರು. ಜೊಕೊವಿಚ್‌, ಈ ವರ್ಷ ಆಸ್ಟ್ರೇಲಿಯಾ ಓಪನ್‌ ಮತ್ತು ಫ್ರೆಂಚ್‌ ಓಪನ್‌ ಜಯಿಸಿದ್ದರು.

23 ಗ್ರ್ಯಾನ್‌ಸ್ಲಾಮ್‌ ಜಯಿಸಿರುವ ಜೊಕೊವಿಚ್‌ ಅವರು ಮಾರ್ಗರೆಟ್‌ ಕೋರ್ಟ್‌ ಅವರ 24 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ದಾಖಲೆ ಸರಿಗಟ್ಟುವ ಪ್ರಯತ್ನದಲ್ಲಿದ್ದರು. ಅದಕ್ಕೆ ಅಲ್ಕರಾಜ್ ಅಡ್ಡಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.