ADVERTISEMENT

ಫ್ರೆಂಚ್ ಓಪನ್ ಟೆನಿಸ್: ಸತತ 2ನೇ ವರ್ಷ ಅಲ್ಕರಾಜ್‌ಗೆ ಕಿರೀಟ

ಏಜೆನ್ಸೀಸ್
Published 9 ಜೂನ್ 2025, 3:57 IST
Last Updated 9 ಜೂನ್ 2025, 3:57 IST
<div class="paragraphs"><p>ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾನುವಾರ ಪುರುಷರ ಸಿಂಗಲ್ಸ್‌ನಲ್ಲಿ ಟ್ರೋಫಿ ಜಯಿಸಿದ ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌</p></div>

ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾನುವಾರ ಪುರುಷರ ಸಿಂಗಲ್ಸ್‌ನಲ್ಲಿ ಟ್ರೋಫಿ ಜಯಿಸಿದ ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌

   

-‘ಎಕ್ಸ್‌’ ಚಿತ್ರ

ಪ್ಯಾರಿಸ್‌: ದಾಖಲೆ ಅವಧಿಯ ಫೈನಲ್‌ ಪಂದ್ಯದಲ್ಲಿ, ಭಾನುವಾರ ಅಮೋಘವಾಗಿ ಪ್ರತಿ ಹೋರಾಟ ತೋರಿದ ಹಾಲಿ ಚಾಂಪಿ ಯನ್‌ ಕಾರ್ಲೋಸ್‌ ಅಲ್ಕರಾಜ್‌ ಅವರು 4-6, 6-7 (4–7), 6–4, 7–6 (7–3), 7–6 (10–2)ರಿಂದ ಅಗ್ರ ಶ್ರೇಯಾಂಕದ ಯಾನಿಕ್‌ ಸಿನ್ನರ್‌ ಅವರನ್ನು ಸೋಲಿಸಿ, ಫ್ರೆಂಚ್ ಓಪನ್ ಟೆನಿಸ್ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು.

ADVERTISEMENT

ಮೊದಲೆರಡು ಸೆಟ್‌ ಕಳೆದುಕೊಂಡ ಸ್ಪೇನ್‌ನ ಆಟಗಾರ ನಂತರ ಮೂರು ಬಾರಿ ಮ್ಯಾಚ್‌ ಪಾಯಿಂಟ್‌ ರಕ್ಷಿಸಿ ಸೋಲಿನಂಚಿನಿಂದ ಪಾರಾದರು. ಬಳಿಕ, ದಿಟ್ಟ ಆಟವಾಡಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಈ ಪಂದ್ಯ 5 ಗಂಟೆ 29 ನಿಮಿಷ ನಡೆದಿದ್ದು, ಫ್ರೆಂಚ್‌ ಓಪನ್‌ ಟೂರ್ನಿಯ ಓಪನ್‌ ಯುಗದ ದಾಖಲೆಯಾಗಿದೆ.

1982ರ ಫೈನಲ್‌ನಲ್ಲಿ, ಸ್ವೀಡನ್‌ನ ಮ್ಯಾಟ್ಸ್‌ ವಿಲಾಂಡರ್‌ ಅವರು ಅರ್ಜೆಂಟೀನಾದ ಗಿಲೆರ್ಮೊ ವಿಲಾಸ್ ವಿರುದ್ಧ 4 ಗಂಟೆ 42 ನಿಮಿಷ ನಡೆದಿದ್ದ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಸರ್ಬಿಯಾದ ದಿಗ್ಗಜ ನೊವಾಕ್‌ ಜೊಕೊವಿಚ್‌ ಅವರನ್ನು ಮಣಿಸಿ, ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಮೊದಲ ಬಾರಿ ಫೈನಲ್‌ಗೇರಿದ್ದ ಸಿನ್ನರ್‌ ನಿರಾಶೆ ಅನುಭವಿಸಬೇಕಾಯಿತು. ಅವರು, ಗ್ರಾನ್‌ ಸ್ಲಾಮ್‌ ಫೈನಲ್‌ನಲ್ಲಿ ಇದೇ ಮೊದಲ ಬಾರಿಗೆ ಸೋಲನುಭವಿಸಿದರು.

ರೋಲಂಡ್ ಗ್ಯಾರೋಸ್‌ನಲ್ಲಿ 2024 ರಲ್ಲೂ ಚಾಂಪಿಯನ್‌ ಆಗಿದ್ದ ಅಲ್ಕರಾಜ್‌ಗೆ ಇದು ಐದನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯಾಗಿದೆ.

ಪಾವೊಲಿನಿ ಜೋಡಿಗೆ ಕಿರೀಟ: ಒಲಿಂಪಿಕ್ಸ್ ಚಿನ್ನದ ಪದಕವಿಜೇತ ಆಟಗಾರ್ತಿ ಸಾರಾ ಎರಾನಿ ಮತ್ತು ಜಾಸ್ಮಿನ್ ಪಾವೊಲಿನಿ ಫ್ರೆಂಚ್ ಓಪನ್ ಮಹಿಳಾ ವಿಭಾಗದ ಪ್ರಶಸ್ತಿಯನ್ನು ಮೊದಲ ಸಲ ಗೆದ್ದರು.

ಎರಡನೇ ಶ್ರೇಯಾಂಕದ, ಇಟಲಿಯ ಈ ಜೋಡಿಯು ಹೋದ ವರ್ಷ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ರನ್ನರ್ಸ್‌ ಅಪ್ ಆಗಿತ್ತು. ಈ ಬಾರಿ ಫೈನಲ್‌ನಲ್ಲಿ ಈ ಜೋಡಿಯು 6–4, 2–6, 6–1ರಿಂದ ಆನಾ ಡ್ಯಾನಿಲಿನಾ ಮತ್ತು ಅಲೆಕ್ಸಾಂದ್ರಾ ಕ್ರುನಿಚ್ ಎದುರು ಜಯಿಸಿದರು.

ಎರಾನಿ ಅವರಿಗೆ ಇದು ಫ್ರೆಂಚ್ ಓಪನ್‌ನಲ್ಲಿ ಎರಡನೇ ಪ್ರಶಸ್ತಿಯಾಗಿದೆ. ಒಟ್ಟು ಆರು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಅವರು ಗೆದ್ದಿದ್ದಾರೆ. ಎರಾನಿ ಅವರಿಗೆ ಈ ವರ್ಷದ ಟೂರ್ನಿಯಲ್ಲಿ ಇದು ಎರಡನೇ ಕಿರೀಟ. ಅವರು ಮಿಶ್ರ ಡಬಲ್ಸ್‌ನಲ್ಲಿ ಆ್ಯಂಡ್ರಿಯಾ ವಾವಾಸೊರಿ ಅವರೊಂದಿಗೆ ಟ್ರೋಫಿ ಜಯಿಸಿದ್ದರು.

ಲಿಲ್ಲಿ ಟ್ಯಾಗರ್‌ಗೆ ಜೂನಿಯರ್ ಕಿರೀಟ: ಪ್ಯಾರಿಸ್ (ಎಪಿ): ಆಸ್ಟ್ರಿಯಾದ 17 ವರ್ಷ ವಯಸ್ಸಿನ ಲಿಲ್ಲಿ ಟ್ಯಾಗರ್, ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಜೂನಿಯರ್ ಬಾಲಕಿಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಜಯಿಸಿದರು.

ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಇದೇ ಮೊದಲ ಬಾರಿಗೆ ಲಿಲ್ಲಿ ಆಡಿದ್ದರು. ಫೈನಲ್‌ನಲ್ಲಿ ಅವರು 6–2, 6–0ಯಿಂದ ಬ್ರಿಟನ್‌ನ ಹೆನಾ ಕ್ಲುಗ್‌ಮ್ಯಾನ್ ವಿರುದ್ಧ ಜಯಿಸಿದರು. ಬಾಲಕರ ವಿಭಾಗದ ಫೈನಲ್‌ನಲ್ಲಿ ಜರ್ಮನಿಯ ನೀಲ್ಸ್ ಮೆಕ್‌ಡೊನಾಲ್ಡ್‌ 6–7 (5), 6–0, 6–3ರಿಂದ ತಮ್ಮದೇ ದೇಶದ ಮ್ಯಾಕ್ಸ್‌ ಶೊಯೆನಾಸ್ ವಿರುದ್ಧ ಜಯಿಸಿದರು.

ಡಬಲ್ಸ್‌: ಮಾರ್ಸೆಲ್, ಝೆಬಾಲೊಸ್‌ಗೆ ಕಿರೀಟ

ಪ್ಯಾರಿಸ್ : ಅನುಭವಿ ಆಟಗಾರರಾದ ಮಾರ್ಸೆಲ್ ಗ್ರಾನೊಲರ್ಸ್ ಮತ್ತು ಹೊರೈಸಿಯೊ ಝೆಬಾಲೊಸ್ ಜೋಡಿಯು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿತು.

ಸ್ಪೇನ್ ದೇಶದ 39 ವರ್ಷ ವಯಸ್ಸಿನ ಗ್ರಾನೊಲರ್ಸ್ ಮತ್ತು ಅರ್ಜೆಂಟೀನಾದ 40 ವರ್ಷ ವಯಸ್ಸಿನ ಝೆಬಾಲೊಸ್ ಅವರ ಜೋಡಿಯು ಗ್ರ್ಯಾನ್‌ಸ್ಲಾಮ್‌ನಲ್ಲಿ ನಾಲ್ಕನೇ ಬಾರಿ ಫೈನಲ್ ತಲುಪಿತ್ತು. ಆದರೆ ಮಣ್ಣಿನಂಕಣ ದಲ್ಲಿ ಇವರಿಬ್ಬರಿಗೂ ಇದು ಮೊದಲ ಫೈನಲ್.

ಇದರಲ್ಲಿ ಅವರು 6–0, 6–7(5), 7–5ರಿಂದ ಬ್ರಿಟನ್‌ ಜೋಡಿ ಜೋ ಸಾಲಿಸ್ಬರಿ ಮತ್ತು ನೀಲ್ ಸ್ಕುಪಾಸ್ಕಿ ವಿರುದ್ಧ ಗೆದ್ದರು. ಈ ಟೂರ್ನಿಯಲ್ಲಿ ಗ್ರಾನೊಲರ್ಸ್ ಜೋಡಿಯು ಐದನೇ ಶ್ರೇಯಾಂಕ ಪಡೆದಿತ್ತು. 2019ರಲ್ಲಿ ಅಮೆರಿಕ ಓಪನ್ ಮತ್ತು 2021 ಹಾಗೂ 2023ರಲ್ಲಿ ವಿಂಬಲ್ಡನ್‌ನಲ್ಲಿ ರನ್ನರ್ಸ್ ಅಪ್ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.