ADVERTISEMENT

ಡೇವಿಸ್‌ ಕಪ್‌: ಭಾರತಕ್ಕೆ ಮುನ್ನಡೆ

ಪಿಟಿಐ
Published 12 ಸೆಪ್ಟೆಂಬರ್ 2025, 22:38 IST
Last Updated 12 ಸೆಪ್ಟೆಂಬರ್ 2025, 22:38 IST
   

ಬೀಲ್‌ (ಸ್ವಿಟ್ಜರ್ಲೆಂಡ್‌): ಯುವ ಟೆನಿಸ್‌ ಆಟಗಾರ ದಕ್ಷಿಣೇಶ್ವರ ಸುರೇಶ್ ಅವರು ತಮಗಿಂತ ಮೇಲಿನ ಕ್ರಮಾಂಕದ ಜೆರೋಮ್ ಕಿಮ್ ಅವರಿಗೆ ನೇರ ಸೆಟ್‌ಗಳಿಂದ ಆಘಾತ ನೀಡಿ, ಸ್ವಿಟ್ಜರ್ಲೆಂಡ್ ವಿರುದ್ಧದ ಡೇವಿಸ್‌ ಕಪ್‌ ವಿಶ್ವ ಗುಂಪು 1ರ ಪಂದ್ಯದಲ್ಲಿ ಭಾರತಕ್ಕೆ 1–0 ಮುನ್ನಡೆ ಒದಗಿಸಿದರು.

ಎಟಿಪಿ ಕ್ರಮಾಂಕದಲ್ಲಿ 626ನೇ ಸ್ಥಾನದಲ್ಲಿರುವ ನೀಳಕಾಯದ ದಕ್ಷಿಣೇಶ್ವರ ಅವರು ಮೊದಲ ಸಿಂಗಲ್ಸ್‌ ಸ್ಪರ್ಧೆಯಲ್ಲಿ 7-6 (4) 6-3ಯಿಂದ 155ನೇ ಕ್ರಮಾಂಕದ ಆಟಗಾರನನ್ನು ಹಿಮ್ಮೆಟ್ಟಿಸಿದರು.
ಈ ಮೂಲಕ ಭಾರತ ತಂಡದ ನಾಯಕ ರೋಹಿತ್‌ ರಾಜಪಾಲ್‌ ಅವರು ತಮ್ಮ ಮೇಲೆ ಇಟ್ಟಿದ್ದ ಭರವಸೆಯನ್ನೂ ದಕ್ಷಿಣೇಶ್ವರ ಉಳಿಸಿಕೊಂಡರು. ಡೇವಿಸ್‌ ಕಪ್‌ನಲ್ಲಿ ಚೊಚ್ಚಲ ಅವಕಾಶ ಪಡೆದಿರುವ ಮದುರೈ ಮೂಲದ ದಕ್ಷಿಣೇಶ್ವರ ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ.

ಪಂದ್ಯದ ಮೊದಲ ಗೇಮ್‌ನಲ್ಲಿ ಭಾರತದ ಆಟಗಾರ ಕೆಲವೊಂದು ತಪ್ಪುಗಳನ್ನು ಎಸಗಿದ್ದರಿಂದ (0–40) ಎದುರಾಳಿ ಆಟಗಾರ ಮೇಲುಗೈ ಸಾಧಿಸುವ ಮುನ್ಸೂಚನೆ ಗೋಚರಿಸಿತು. ಆದರೆ, ನಂತರ ಸತತ ಐದು ಪಾಯಿಂಟ್ಸ್‌ ಬಾಚಿಕೊಂಡ ದಕ್ಷಿಣೇಶ್ವರ ಅವರು ಲಯ ಕಂಡುಕೊಂಡರು. 

ADVERTISEMENT

ಮೊದಲ ಸೆಟ್‌ ಅನ್ನು ಟೈಬ್ರೇಕರ್‌ನಲ್ಲಿ ಗಳಿಸಿದ ದಕ್ಷಿಣೇಶ್ವರ ಅವರು ಎರಡನೇ ಸೆಟ್‌ನಲ್ಲೂ ಹಿಡಿತ ಮುಂದುವರಿಸಿದರು. ಆಗಾಗ ಬಿರುಸಿನ ಹೊಡೆತ ಮತ್ತು ಭರ್ಜರಿ ಸರ್ವ್‌ಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

‘ಮೊದಲ ಬಾರಿಗೆ ದೇಶಕ್ಕಾಗಿ ಆಡುತ್ತಿರುವುದ ರಿಂದ ಸಾಕಷ್ಟು ಒತ್ತಡವಿತ್ತು. ಆದರೆ, ಪರಿಸ್ಥಿತಿಯನ್ನು ಸಂಯಮದಿಂದ ನಿಭಾಯಿಸಿದೆ. ನನ್ನ ನೈಜ ಆಟದ ಪ್ರದರ್ಶನಕ್ಕೆ ಅವಕಾಶ ಸಿಕ್ಕಿತು’ ಎಂದು ಗೆಲುವಿನ ಬಳಿಕ ದಕ್ಷಿಣೇಶ್ವರ ಪ್ರತಿಕ್ರಿಯಿಸಿದರು.

2023ರಲ್ಲಿ ಮೊರಾಕೊ ವಿರುದ್ಧದ ಪಂದ್ಯದ ನಂತರ ಡೇವಿಸ್ ಕಪ್‌ಗೆ ಮರಳಿರುವ 290ನೇ ಕ್ರಮಾಂಕದ ಸುಮಿತ್ ನಗಾಲ್ ಅವರು ಮತ್ತೊಂದು ಸಿಂಗಲ್ಸ್‌ ಪಂದ್ಯದಲ್ಲಿ ತನಗಿಂತ 68 ಸ್ಥಾನ ಮೇಲಿರುವ ಮಾರ್ಕ್ ಆ್ಯಂಡ್ರಿಯಾ ಹ್ಯೂಸ್ಲರ್ ಅವರನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.