ADVERTISEMENT

ಪ್ರೇಕ್ಷಕರಿಲ್ಲದ ಅಮೆರಿಕ ಓಪನ್ ಟೆನಿಸ್ ಟೂರ್ನಿ ಇಂದಿನಿಂದ

ನೊವಾಕ್ ಜೊಕೊವಿಚ್, ಸೆರೆನಾ ವಿಲಿಯಮ್ಸ್‌ಗೆ ಮಹತ್ವದ ಟೂರ್ನಿ; ನಡಾಲ್ ಅನುಪಸ್ಥಿತಿ

ಏಜೆನ್ಸೀಸ್
Published 30 ಆಗಸ್ಟ್ 2020, 14:54 IST
Last Updated 30 ಆಗಸ್ಟ್ 2020, 14:54 IST
ನೊವಾಕ್ ಜೊಕೊವಿಚ್ –ಎಎಫ್‌ಪಿ ಚಿತ್ರ
ನೊವಾಕ್ ಜೊಕೊವಿಚ್ –ಎಎಫ್‌ಪಿ ಚಿತ್ರ   

ನ್ಯೂಯಾರ್ಕ್‌: ಕೋವಿಡ್–19 ಹಾವಳಿಯ ನಡುವೆಯೇ ಅಮೆರಿಕ ಓಪನ್ ಟೆನಿಸ್ ಟೂರ್ನಿಗೆ ಇಲ್ಲಿನ ಜೀನ್ ಕಿಂಗ್ ರಾಷ್ಟ್ರೀಯ ಟೆನಿಸ್ ಕೇಂದ್ರ ಸಿದ್ಧವಾಗಿದ್ದು ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಪಂದ್ಯಗಳು ನಡೆಯಲಿವೆ. ಕೊರೊನಾ ವೈರಾಣು ಕಾಟದ ನಂತರ ನಡೆಯಲಿರುವ ಮೊದಲ ಗ್ರ್ಯಾನ್‌ಸ್ಲಾಂ ಟೂರ್ನಿ ಇದಾಗಿದ್ದು ಪಂದ್ಯಗಳು ಜೀವ ಸುರಕ್ಷಾ ವಲಯದಲ್ಲಿ ನಡೆಯಲಿವೆ.

ಸರ್ಬಿಯಾದ ನೊವಾಕ್ ಜೊಕೊವಿಚ್ ಮತ್ತು ಅಮೆರಿಕದ ಸೆರೆನಾ ವಿಲಿಯಮ್ಸ್ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಹಾಲಿ ಚಾಂಪಿಯನ್‌ ಸ್ಪೇನ್‌ನ ರಾಫೆಲ್ ನಡಾಲ್ ಮತ್ತು ಮಹಿಳಾ ವಿಭಾಗದ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಆಶ್ಲೆ ಬಾರ್ಟಿ ಕಣಕ್ಕೆ ಇಳಿಯುತ್ತಿಲ್ಲ.

ರಾಷ್ಟ್ರೀಯ ಟೆನಿಸ್ ಕೇಂದ್ರವನ್ನು ತಿಂಗಳುಗಳ ಹಿಂದೆ ಕೊರೊನಾ ಪೀಡಿತರ ಚಿಕಿತ್ಸೆಗಾಗಿ ತುರ್ತು ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿತ್ತು. ಈಗ ಇಡೀ ಪರಿಸರವನ್ನು ‘ಬಯೊ ಬಬಲ್’ ಆಗಿ ಬದಲಿಸಲಾಗಿದೆ. ಹೀಗಾಗಿ ಈ ಬಾರಿ ಟೂರ್ನಿಯಲ್ಲಿ ಪ್ರೇಕ್ಷಕರ ಅಬ್ಬರವಿರುವುದಿಲ್ಲ. ಆಟಗಾರರನ್ನು ಟೂರ್ನಿಯುದ್ದಕ್ಕೂ ಆಗಾಗ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪಾಸಿಟಿವ್ ವರದಿ ಬರುವ ಆಟಗಾರರಿಗೆ ನಂತರ ಯಾವ ಹಂತದಲ್ಲೂ ಆಡಲು ಅವಕಾಶವಿರುವುದಿಲ್ಲ. ಕ್ರೀಡಾಂಗಣ ಮತ್ತು ಉಳಿದುಕೊಳ್ಳುವ ಜಾಗವಲ್ಲದೆ ಬೇರೆ ಎಲ್ಲಿಗೂ ಪ್ರಯಾಣಿಸಲು ಆಟಗಾರರಿಗೆ ಅವಕಾಶವಿಲ್ಲ. ಕ್ರೀಡಾಂಗಣದ ಒಳಗೆ ಪ್ರವೇಶಿಸುವ ಮುನ್ನ ತಾಪಮಾನ ಪರೀಕ್ಷೆ ಕಡ್ಡಾಯವಾಗಿರುತ್ತದೆ.

ADVERTISEMENT

ಈ ಹಿಂದಿನ ಏಳು ಗ್ರ್ಯಾನ್‌ಸ್ಲಾಂ ಟೂರ್ನಿಗಳ ಪೈಕಿ ಐದರಲ್ಲಿ ಪ್ರಶಸ್ತಿ ಗಳಿಸಿರುವ ಜೊಕೊವಿಚ್‌ ಅಮೆರಿಕ ಓಪನ್‌ನಲ್ಲಿ ನಾಲ್ಕನೇ ಪ್ರಶಸ್ತಿ ಮೇಲೆ ಕಣ್ಣಿಟ್ಟು ಇಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಇಲ್ಲಿ ಚಾಂಪಿಯನ್ ಆದರೆ ಅವರು 18 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯರಾಗಲಿದ್ದಾರೆ. ನಡಾಲ್ 19 ಮತ್ತು ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌ 20 ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಮೊದಲ ದಿನ ಸಂಜೆ ನಡೆಯಲಿರುವ ಮೊದಲ ಸುತ್ತಿನ ಪಂದ್ಯದಲ್ಲಿ ಜೊಕೊವಿಚ್ ರ‍್ಯಾಂಕಿಂಗ್‌ನಲ್ಲಿ 107ನೇ ಸ್ಥಾನದಲ್ಲಿರುವ ಬೋಸ್ನಿಯಾದ ಡಾಮಿರ್ ಜುಮುರ್ ವಿರುದ್ಧ ಸೆಣಸುವರು.

ಸೆರೆನಾಗೆ ದಾಖಲೆ ಸರಿಗಟ್ಟುವ ತವಕ

ಮಹಿಳಾ ಸಿಂಗಲ್ಸ್‌ನಲ್ಲಿ ಸೆರೆನಾ ವಿಲಿಯಮ್ಸ್ ದಾಖಲೆ ಸಮಗಟ್ಟುವ ಕನಸಿನೊಂದಿಗೆ ಆಡಲಿದ್ದರೆ. ಇಲ್ಲಿ ಪ್ರಶಸ್ತಿ ಗೆದ್ದರೆ ಅದು ಅವರ 24ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಆಗಲಿದೆ. ಆಸ್ಟ್ರೇಲಿಯಾದ ಮಾರ್ಗರೆಟ್ ಕೋರ್ಟ್ ಅವರು ಕೂಡ 24 ಬಾರಿಗ್ರ್ಯಾನ್‌ಸ್ಲಾಂ ಚಾಂಪಿಯನ್ ಆಗಿದ್ದಾರೆ.

ಬೆನಾಯ್ಟ್‌ಗೆ ಸೋಂಕು

ಫ್ರಾನ್ಸ್‌ನ ಬೆನಾಯ್ಟ್ ಪೇರ್ ಅವರಿಗೆ ಭಾನುವಾರ ಕೋವಿಡ್ ಸೋಂಕು ದೃಢಪಟ್ಟಿರುವುದು ವರದಿಯಾಗಿದೆ. 17ನೇ ಶ್ರೇಯಾಂಕ ಹೊಂದಿದ್ದ ಅವರು ಪೋಲೆಂಡ್‌ನ ಕಮಿಲ್ ಮಜ್ರಾಕ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.