ADVERTISEMENT

2ನೇ ಬಾರಿಗೆ ವೀಸಾ ರದ್ದು: ಆಸ್ಟ್ರೇಲಿಯಾ ವಿರುದ್ಧ ಜೊಕೊವಿಚ್ ಮತ್ತೆ ಕಾನೂನು ಹೋರಾಟ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 2:42 IST
Last Updated 15 ಜನವರಿ 2022, 2:42 IST
ನೊವಾಕ್ ಜೊಕೊವಿಚ್
ನೊವಾಕ್ ಜೊಕೊವಿಚ್   

ಸಿಡ್ನಿ: ಎರಡನೇ ಬಾರಿಗೆ ತಮ್ಮ ವೀಸಾವನ್ನು ಹಿಂತೆಗೆದುಕೊಂಡ ನಂತರ ಜಗತ್ತಿನ ನಂ. 1 ಟೆನಿಸ್‌ ಆಟಗಾರ ನೊವಾಕ್ ಜೊಕೊವಿಚ್ ಮತ್ತೆ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದು, ಆಸ್ಟ್ರೇಲಿಯಾ ಓಪನ್‌ನಲ್ಲಿ ಸ್ಪರ್ಧಿಸುವ ಅವಕಾಶವನ್ನು ಉಳಿಸಿಕೊಳ್ಳುವ ಕೊನೆಯ ಪ್ರಯತ್ನದಲ್ಲಿ ತೊಡಗಿದ್ದಾರೆ.

ನೊವಾಕ್ ಪರ ವಕೀಲರು ಶನಿವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸಂಕ್ಷಿಪ್ತ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಧೀಶ ಡೇವಿಡ್ ಒ ಕಲ್ಲಘನ್ ಅವರು ಜೊಕೊವಿಚ್ ಅವರ ಮೇಲ್ಮನವಿಯ ವಿಚಾರಣೆಯನ್ನು ಭಾನುವಾರ ಬೆಳಿಗ್ಗೆ 9:30ಕ್ಕೆ ಮುಂದೂಡಿದ್ದು, ನ್ಯಾಯಾಲಯಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಎರಡೂ ಕಡೆಯವರಿಗೆ ಸೂಚಿಸಿದ್ದಾರೆ.

ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಂಡಿರುವ ಪುರಾವೆಗಳನ್ನು ನೀಡದ ಹಿನ್ನೆಲೆಯಲ್ಲಿ ಜೊಕೊವಿಚ್ ವೀಸಾ ರದ್ದಾಗಿದ್ದು, ಲಸಿಕೆ ಪಡೆಯದ ಅವರು ಸಮುದಾಯಕ್ಕೆ ಅಪಾಯವನ್ನು ತಂದೊಡ್ಡಬಹುದು ಎಂಬ ಕಾರಣವನ್ನು ಆಸ್ಟ್ರೇಲಿಯಾ ಸರ್ಕಾರ ನೀಡಿದೆ.

ADVERTISEMENT

ಜೊಕೊವಿಚ್ ಅವರನ್ನು ಗಡಿ ಕಾವಲು ಪಡೆಗಳು ಮಧ್ಯಾಹ್ನ 2 ಗಂಟೆಯವರೆಗೆ ಅವರ ವಕೀಲರ ಕಚೇರಿಯಲ್ಲಿ ಇರಿಸಿಕೊಳ್ಳಲು ನ್ಯಾಯಾಧೀಶರು ಆದೇಶ ಹೊರಡಿಸಿದ್ದರು. ಆದರೆ, ಶನಿವಾರ ಟೆನಿಸ್ ತಾರೆಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅವರು ಬೆಳಿಗ್ಗೆ 8 ಗಂಟೆಗೆ ವಲಸೆ ಅಧಿಕಾರಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದರು.

ಒಬ್ಬ ನ್ಯಾಯಾಧೀಶರ ಬದಲಿಗೆ ಪೂರ್ಣ ನ್ಯಾಯಾಧೀಶರ ಸಮಿತಿಯು ಪ್ರಕರಣದ ವಿಚಾರಣೆ ನಡೆಸುವಂತೆ ಜೊಕೊವಿಚ್ ಅವರ ಕಾನೂನು ತಂಡವು ಮನವಿ ಮಾಡಿದೆ. ಆದರೆ, ವಲಸೆ ಸಚಿವರ ಪರ ವಕೀಲರು ಈ ಪ್ರಸ್ತಾವನೆಯನ್ನು ವಿರೋಧಿಸಿದರು. ಈ ಕುರಿತಂತೆ ತನ್ನ ನಿರ್ಧಾರವನ್ನು ಶನಿವಾರದ ನಂತರ ತಿಳಿಸುವುದಾಗಿ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಶುಕ್ರವಾರ, ಫೆಡರಲ್ ಸರ್ಕ್ಯೂಟ್ ಮತ್ತು ಫ್ಯಾಮಿಲಿ ಕೋರ್ಟ್‌ನ ನ್ಯಾಯಾಧೀಶ ಆಂಥೋನಿ ಕೆಲ್ಲಿ ಅವರು ಜೊಕೊವಿಚ್ ಅವರ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಅವರನ್ನು ಗಡೀಪಾರು ಮಾಡದಂತೆ ಸರ್ಕಾರಕ್ಕೆ ಆದೇಶಿಸಿದ್ದರು. ಇದಕ್ಕೂ ಕೆಲ ಗಂಟೆಗಳ ಹಿಂದಷ್ಟೆ, ವಲಸೆ ಸಚಿವ ಅಲೆಕ್ಸ್ ಹಾಕ್ ಅವರು ‘ಆರೋಗ್ಯ ಮತ್ತು ಸುವ್ಯವಸ್ಥೆ’ಆಧಾರದ ಮೇಲೆ ಜೊಕೊವಿಚ್ ಅವರ ವೀಸಾವನ್ನು ಹಿಂತೆಗೆದುಕೊಂಡಿದ್ದರು. ಈ ಕ್ರಮವು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ್ದಾಗಿದೆ ಎಂದು ಹೇಳಿದ್ದರು.

ಈ ಮಧ್ಯೆ, ಸೋಮವಾರ ಬೆಳಿಗ್ಗೆ ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯಾವಳಿ ಪ್ರಾರಂಭವಾಗುತ್ತದೆ. ಜೊಕೊವಿಚ್ ಅವರು ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ದಾಖಲೆಯ ಒಂಬತ್ತು ಬಾರಿ ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.