ADVERTISEMENT

ಪ್ರೆಂಚ್ ಓಪನ್ ಟೆನಿಸ್ ಟೂರ್ನಿ:: ಮೆಡ್ವೆಡೆವ್‌ ಮೂರನೇ ಸುತ್ತು ಪ್ರವೇಶ

ಮಹಿಳಾ ವಿಭಾಗದಲ್ಲಿ ಬಡೋಸ ಜಯಭೇರಿ

ರಾಯಿಟರ್ಸ್
Published 26 ಮೇ 2022, 13:48 IST
Last Updated 26 ಮೇ 2022, 13:48 IST
ಡ್ಯಾನಿಯಲ್ ಮೆಡ್ವೆಡೆವ್ –ಎಎಫ್‌ಪಿ ಚಿತ್ರ
ಡ್ಯಾನಿಯಲ್ ಮೆಡ್ವೆಡೆವ್ –ಎಎಫ್‌ಪಿ ಚಿತ್ರ   

ಪ್ಯಾರಿಸ್ (ಎಎಫ್‌ಪಿ): ಎದುರಾಳಿಯನ್ನು ಸುಲಭವಾಗಿ ಮಣಿಸಿದ ರಷ್ಯಾದ ಡ್ಯಾನಿಯಲ್ ಮೆಡ್ವೆಡೆವ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಮೂರನೇ ಸುತ್ತು ಪ್ರವೇಶಿಸಿದರು.

ಫಿಲಿಪ್ ಚಾರ್ಟರ್‌ ಅಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಸರ್ಬಿಯಾದ ಲಾಸ್ಲೊ ಜೇರೆ ವಿರುದ್ಧ ಅವರು 6-3, 6-4, 6-3ರಲ್ಲಿ ಜಯ ಗಳಿಸಿದರು. ಸತತ ನಾಲ್ಕು ವರ್ಷ ಮೊದಲ ಸುತ್ತಿನಲ್ಲಿ ಹೊರಬಿದ್ದಿದ್ದ ಮೆಡ್ವೆಡೆವ್ ಕಳೆದ ವರ್ಷದ ಆವೃತ್ತಿಯಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದ್ದರು.

ಎರಡನೇ ಸುತ್ತಿನ ಹಣಾಹಣಿಯ ಆರಂಭದಲ್ಲಿ ಕೊಂಚ ಹಿನ್ನಡೆ ಅನುಭವಿಸಿದರೂ ನಂತರ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಆಟದ ಮೂಲಕ ಮಿಂಚಿ ಗೆಲುವಿನ ಹಾದಿಯಲ್ಲಿ ಮುನ್ನಡೆದರು. ಸರ್ಬಿಯಾದ ಮಿಯೋಮಿರ್ ಕೆಸ್ಮನೊವಿಚ್ ವಿರುದ್ಧ ಅವರು ಮುಂದಿನ ಸುತ್ತಿನಲ್ಲಿ ಸೆಣಸುವರು.

ADVERTISEMENT

ಪೌಲಾ ಬಡೋಸಗೆ ಗೆಲುವು

ರೋಚಕ ಹೋರಾಟದಲ್ಲಿ ಪ್ರಾಬಲ್ಯ ಮೆರೆದ ಪೌಲಾ ಬಡೋಸಾ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದ ಮೂರನೇ ಸುತ್ತು ಪ್ರವೇಶಿಸಿದರು. ಗುರುವಾರ ನಡೆದ ಪಂದ್ಯದಲ್ಲಿ ಸ್ಪೇನ್‌ನ ಪೌಲಾ7-5, 3-6, 6-2ರಲ್ಲಿ ಸ್ಲೊವೇನಿಯಾದ ಕಾಜಾ ಜುವಾನ್ ವಿರುದ್ಧ ಗೆದ್ದರು.

ಫ್ರೆಂಚ್ ಓಪನ್‌ನ ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದ ಪೌಲಾ ಪಂದ್ಯದ ಆರಂಭದಲ್ಲಿ 3–0ಯಿಂದ ಮುನ್ನಡೆ ಸಾದಿಸಿದ್ದರು. ಆದರೆ ನಂತರ ಜುವಾನ್ ಪ್ರಬಲ ಪೈಪೋಟಿ ನೀಡಿದರು. 24 ವರ್ಷದ ಪೌಲಾ ಪಟ್ಟು ಬಿಡದೆ ಆಡಿ 5–2ರಿಂದ ಮುನ್ನಡೆದರು. ಆದರೆ ಸಮಬಲ ಸಾಧಿಸುವಲ್ಲಿ ಸ್ಲೊವೇನಿಯಾ ಆಟಗಾರ್ತಿ ಯಶಸ್ವಿಯಾದರು. ಬೇಸ್‌ನೈನ್‌ನಿಂದ ಭರ್ಜರಿ ಹೊಡೆತಳೊಂದಿಗೆ ಮಿಂಚಿದ ಪೌಲಾ ನಂತರ ಡ್ರಾಪ್ ಶಾಟ್‌ಗಳ ಮೂಲಕ ಎದುರಾಳಿಯನ್ನು ಕಾಡಿದರು.

ಎರಡನೇ ಸೆಟ್‌ನಲ್ಲಿ ಜುವಾನ್ ತಿರುಗೇಟು ನೀಡಿದರು. ಆದರೆ ನಿರ್ಣಾಯಕ ಮೂರನೇ ಸೆಟ್‌ ಗೆದ್ದು ಪೌಲಾ ಅವರು ಪಂದ್ಯ ತಮ್ಮದಾಗಿಸಿಕೊಂಡರು.

ಬೋಪಣ್ಣ ಜೋಡಿ ಪ್ರೀ ಕ್ವಾರ್ಟರ್‌ ಫೈನಲ್‌ಗೆ

ಭಾರತದ ರೋಹನ್ ಬೋಪಣ್ಣ ಮತ್ತು ನೆದರ್ಲೆಂಡ್ಸ್‌ನ ಮಟ್ವೆ ಮಿಡೆಲ್‌ಕೂಪ್ ಪುರುಷರ ಡಬಲ್ಸ್‌ನ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಗುರುವಾರ ನಡೆದ ಪಂದದಲ್ಲಿ ಅವರು ಆ್ಯಂಡ್ರೆ ಗೊಲುಬೆ ಮತ್ತು ಫ್ಯಾಬ್ರಿಸ್ ಮಾರ್ಟಿನ್ ವಿರುದ್ಧ 6-3, 6-4ರಲ್ಲಿ ಜಯ ಗಳಿಸಿದರು.

ಒಂದು ತಾಸು ಆರು ನಿಮಿಷ ನಡೆದ ಪಂದ್ಯದಲ್ಲಿ 16ನೇ ಶ್ರೇಯಾಂಕದ ಭಾರತ–ನೆದರ್ಲೆಂಡ್ಸ್ ಜೋಡಿಗೆ ಕಜಕಸ್ತಾನ ಮತ್ತು ಫ್ರಾನ್ಸ್‌ ಜೋಡಿ ಆರಂಭದಲ್ಲಿ ಪ್ರತಿರೋಧ ಒಡ್ಡಿ 4–4ರ ಸಮಬಲ ಸಾಧಿಸಿತು. ನಂತರ ಬೋಪಣ್ಣ ಮತ್ತು ಮಿಡೆಲ್‌ಕೂಪ್ ಪಾರಮ್ಯ ಮೆರೆದರು. ಬೋಪಣ್ಣ 2011, 2016, 2018 ಮತ್ತು 2021 ಫ್ರೆಂಚ್ ಓಪನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.