ನವದೆಹಲಿ: ಅನಿಲ್ ಜೈನ್ ಅವರ ಕೆಲವು ಗ್ರ್ಯಾನ್‌ಸ್ಲಾಮ್ ಟೂರ್ನಿ ಪ್ರವಾಸಗಳಿಗೆ ಅಖಿಲ ಭಾರತ ಟೆನಿಸ್ ಫೆಡರೇಷನ್ (ಎಐಟಿಎ) ₹1 ಕೋಟಿಗೂ ಹೆಚ್ಚು ಹಣವನ್ನು ಅನವಶ್ಯಕವಾಗಿ ಖರ್ಚು ಮಾಡಿದೆ ಎಂದು ಫೆಡರೇಷನ್‌ನ ಹಣಕಾಸು ಸಮಿತಿ ಸದಸ್ಯ ಹಿರಣ್ಮೊಯ್ ಚಟರ್ಜಿ ಮಂಗಳವಾರ ಆಪಾದಿಸಿದ್ದಾರೆ.
ಪತ್ನಿ ಜೊತೆಗೂ ಕೆಲವು ಟೂರ್ನಿಗಳಿಗೆ ಜೈನ್ ತೆರಳಿದ್ದರು ಎಂದೂ ಆರೋಪಿಸಿದ್ದಾರೆ. ಆದರೆ ಅವರ ಆರೋಪಗಳನ್ನು ಫೆಡರೇಷನ್ ಅಧ್ಯಕ್ಷ ಅನಿಲ್ ಜೈನ್ ತಳ್ಳಿ ಹಾಕಿದ್ದಾರೆ. ಪತ್ನಿಯ ಜೊತೆ ಪ್ರವಾಸಕ್ಕೆ ತಮಗೆ ಅವಕಾಶ ಇರುವುದಾಗಿ ಹೇಳಿದ್ದಾರೆ.
2024ರ ಸೆಪ್ಟೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಸದಸ್ಯರ ವಿರುದ್ಧವೇ ಎಐಟಿಎ ಅಧ್ಯಕ್ಷರು ಕೆಲಸ ಮಾಡಿದ್ದರು. ಹೀಗಾಗಿ ಐಎಟಿಎ ಅಂಗಸಂಸ್ಥೆಗಳು ಅವರ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿದ್ದವು ಎಂದು ಚಟರ್ಜಿ ಹೇಳಿದ್ದಾರೆ.
ಪದಾಧಿಕಾರಿಗಳ ವಿದೇಶ ಪ್ರವಾಸಗಳಿಗೆ ಭತ್ಯೆಯನ್ನು ವಿತ್ತ ಸಮಿತಿಯು 2022ರ ಮೇ ತಿಂಗಳಲ್ಲಿ ಹೆಚ್ಚಿಸಿತ್ತು. ಆದರೆ ಇದಕ್ಕೆ ಕಾರ್ಯಕಾರಿ ಸಮಿತಿ ಅನುಮೋದನೆಯನ್ನು ಪಡೆದಿರಲಿಲ್ಲ ಎಂದು ಎಐಟಿಎ ಉಪಾಧ್ಯಕ್ಷರೂ (ಕ್ರೀಡೆ) ಆಗಿರುವ ಚಟರ್ಜಿ ಹೇಳಿದ್ದಾರೆ. ಸಮಿತಿ ಸದಸ್ಯರಾಗಿದ್ದರೂ ತಮಗೆ ಆ ಸಭೆಗೆ ಆಹ್ವಾನಿಸಿರಲಿಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.