ADVERTISEMENT

12ನೇ ಪ್ರಶಸ್ತಿಯತ್ತ ನಡಾಲ್‌ ಚಿತ್ತ

ಇಂದಿನಿಂದ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಫೆಡರರ್, ಜೊಕೊವಿಚ್‌ ಆಕರ್ಷಣೆ

ರಾಯಿಟರ್ಸ್
Published 25 ಮೇ 2019, 16:03 IST
Last Updated 25 ಮೇ 2019, 16:03 IST
ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಶನಿವಾರ ಅಭ್ಯಾಸ ನಡೆಸಿದರು –ರಾಯಿಟರ್ಸ್‌ ಚಿತ್ರ
ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಶನಿವಾರ ಅಭ್ಯಾಸ ನಡೆಸಿದರು –ರಾಯಿಟರ್ಸ್‌ ಚಿತ್ರ   

ಪ್ಯಾರಿಸ್‌: ‘ಕ್ಲೇ ಕಿಂಗ್‌’ ರಫೆಲ್‌ ನಡಾಲ್‌ ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆ ಮಾಡಿಕೊಳ್ಳಲು ಸಜ್ಜಾಗಿದ್ದಾರೆ.

ಭಾನುವಾರದಿಂದ ನಡೆಯುವ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸ್ಪೇನ್‌ನ ಆಟಗಾರ 12ನೇ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲಿದ್ದಾರೆ. ‘ರಫಾ’, ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಈಗಾಗಲೇ 11 ಕಿರೀಟಗಳನ್ನು ಮುಡಿಗೇರಿಸಿಕೊಂಡು ಹೊಸ ಭಾಷ್ಯ ಬರೆದಿದ್ದಾರೆ. ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಅತೀ ಹೆಚ್ಚು ಪ್ರಶಸ್ತಿ ಜಯಿಸಿದ ಹಿರಿಮೆ ಅವರದ್ದಾಗಿದೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ನಡಾಲ್‌, ಹೋದ ವಾರ ನಡೆದಿದ್ದ ಇಟಾಲಿಯನ್ ಓಪನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಇದು ಅವರ ಮನೋಬಲ ಹೆಚ್ಚುವಂತೆ ಮಾಡಿದೆ.

ADVERTISEMENT

ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಮತ್ತು ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಕೂಡಾ ಪ್ರಶಸ್ತಿಯ ತವಕದಲ್ಲಿದ್ದಾರೆ. 32 ವರ್ಷ ವಯಸ್ಸಿನ ಜೊಕೊವಿಚ್‌ ಗ್ರ್ಯಾನ್‌ಸ್ಲಾಮ್‌ನಲ್ಲಿ 17 ಟ್ರೋಫಿ ಗೆದ್ದಿದ್ದಾರೆ. ಫೆಡರರ್‌ ಅವರು ದಾಖಲೆಯ 20 ಪ್ರಶಸ್ತಿ ಜಯಿಸಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಫೆಡರರ್‌, ಭಾನುವಾರ ನಡೆಯುವ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ಇಟಲಿಯ ಲೊರೆಂಜೊ ಸೊನೆಗೊ ಎದುರು ಸೆಣಸಲಿದ್ದಾರೆ.

ಜಪಾನ್‌ನ ಕೀ ನಿಶಿಕೋರಿ, ಥಾಮಸ್‌ ಫಾಬಿಯಾನೊ, ಡೇವಿಡ್‌ ಗೊಫಿನ್, ಅವರೂ ಮೊದಲ ದಿನ ಕಣಕ್ಕಿಳಿಯಲಿದ್ದಾರೆ.

ಮಹಿಳಾ ಸಿಂಗಲ್ಸ್‌ನಲ್ಲಿ ಸಿಮೊನಾ ಹಲೆಪ್‌ ಎಲ್ಲರ ಆಕರ್ಷಣೆಯಾಗಿದ್ದಾರೆ. ರುಮೇನಿಯಾದ ಸಿಮೊನಾ, ಹೋದ ವರ್ಷ ಇಲ್ಲಿ ಪ್ರಶಸ್ತಿ ಗೆದ್ದಿದ್ದರು.

ಅಮೆರಿಕದ ಸಹೋದರಿಯರಾದ ಸೆರೆನಾ ಮತ್ತು ವೀನಸ್‌ ವಿಲಿಯಮ್ಸ್‌, ಜಪಾನ್‌ನ ನವೊಮಿ ಒಸಾಕ, ಸ್ಪೇನ್‌ನ ಗಾರ್ಬೈನ್‌ ಮುಗುರುಜಾ, ಸ್ಲೋನ್ ಸ್ಟೀಫನ್ಸ್‌, ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಅವರೂ ಮಿಂಚುವ ವಿಶ್ವಾಸದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.