ADVERTISEMENT

ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿ: ಫೆಡರರ್‌ ಮಣಿಸಿದ ನಡಾಲ್‌ ಫೈನಲ್‌ ಪ್ರವೇಶ

ಬಾರ್ಟಿ–ವೊಂಡ್ರೊಸೊವಾ ಫೈನಲ್‌ ಹಣಾಹಣಿ

ರಾಯಿಟರ್ಸ್
Published 7 ಜೂನ್ 2019, 14:29 IST
Last Updated 7 ಜೂನ್ 2019, 14:29 IST
ಸ್ಪೇನ್‌ ಆಟಗಾರ ರಫೆಲ್‌ ನಡಾಲ್‌
ಸ್ಪೇನ್‌ ಆಟಗಾರ ರಫೆಲ್‌ ನಡಾಲ್‌   

ಪ್ಯಾರಿಸ್: ಟೆನಿಸ್ ದಂತಕತೆ ರೋಜರ್‌ ಫೆಡರರ್‌ ಅವರಿಗೆ ಸೋಲುಣಿಸಿದ ಪರಿಣತ ಸ್ಪೇನ್‌ನ ಆಟಗಾರ ರಫೆಲ್‌ ನಡಾಲ್‌ ಶುಕ್ರವಾರ 12ನೇ ಬಾರಿ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ಗೆ ಪ್ರವೇಶಿಸಿದರು.

6–3, 6–4, 6–2 ಸೆಟ್‌ಗಳ ಸುಲಭದ ಜಯವನ್ನು ಅವರು ಸಂಪಾದಿಸಿದರು. ಇಡೀ ಪಂದ್ಯ 2 ಗಂಟೆ 25 ನಿಮಿಷಗಳಲ್ಲಿ ಕೊನೆಯಾಯಿತು.ಈ ಹಿಂದಿನ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಐದು ಪಂದ್ಯಗಳಲ್ಲಿ ಫೆಡರರ್‌ ಎದುರು ನಡಾಲ್‌ ಸೋಲು ಕಂಡಿಲ್ಲ.

ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಅಮಂಡಾ ಅನಿಸಿಮೊವಾ ಸವಾಲನ್ನು ಮೀರಿದ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಅವರು ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟರು. ಶುಕ್ರವಾರ ನಡೆದ ಪಂದ್ಯದಲ್ಲಿ 6–7 (4), 6–3, 6–3 ಸೆಟ್‌ಗಳಿಂದ ಬಾರ್ಟಿ ಗೆದ್ದರು.

ADVERTISEMENT

ಎಂಟನೇ ಶ್ರೇಯಾಂಕದ ಬಾರ್ಟಿ ಅವರು ಸ್ಯಾಮ್‌ ಸ್ಟೋಸರ್‌ ನಂತರಫ್ರೆಂಚ್‌ ಓಪನ್ ಟೂರ್ನಿಯ ಫೈನಲ್‌ ತಲುಪಿದ ಮೊದಲ ಆಟಗಾರ್ತಿಯಾಗಿದ್ದಾರೆ. 2010ರಲ್ಲಿ ಸ್ಟೋಸರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ಶನಿವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ಮರ್ಕೆಟಾ ವೊಂಡ್ರೊಸೊವಾ ಅವರನ್ನು ಬಾರ್ಟಿ ಎದುರಿಸಲಿದ್ದಾರೆ.

ಆ್ಯಶ್ಲೆ ಬಾರ್ಟಿ

ಇನ್ನೊಂದೆಡೆ ಶ್ರೇಯಾಂಕರಹಿತ ಆಟಗಾರ್ತಿ ಮರ್ಕೆಟಾ ವೊಂಡ್ರೊಸೊವಾ ಅವರು ಜೊಹಾನ್ನಾ ಕೊಂತಾ ಎದುರು 7–5, 7–6 (2) ಸೆಟ್‌ಗಳಿಂದ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು. ಕೊಂತಾ ಈ ಪಂದ್ಯದಲ್ಲಿ ಗೆದ್ದಿದ್ದರೆ 1977ರ ಬಳಿಕ ಗ್ರ್ಯಾನ್‌ಸ್ಲಾಮ್‌ವೊಂದರ ಫೈನಲ್ ತಲುಪಿದ ಮೊದಲ ಬ್ರಿಟಿಷ್‌ ಆಟಗಾರ್ತಿ ಎನಿಸಿಕೊಳ್ಳುತ್ತಿದ್ದರು.

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಅಲೆಕ್ಸಾಂಡರ್‌ ಜ್ವೆರೆವ್‌ ಅವರನ್ನು 7–5, 6–2, 6–2 ಸೆಟ್‌ಗಳಿಂದ ಮಣಿಸಿದ್ದ ನೊವಾಕ್‌ ಜೊಕೊವಿಚ್‌ ಕೂಡ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು. ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಒಂಬತ್ತನೆ ಬಾರಿ ಸೆಮಿಫೈನಲ್‌ ತಲುಪಿದ ಸಾಧನೆಗೆ ಅವರು ಪಾತ್ರರಾದರು. ನಾಲ್ಕರ ಘಟ್ಟದ ಪಂದ್ಯದಲ್ಲಿ ‌ಅವರು ಡೊಮಿನಿಕ್‌ ಥೀಮ್‌ ಅವರನ್ನು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.