ADVERTISEMENT

ಕಜಕಸ್ತಾನದಲ್ಲಿ ಭಾರತ–ಪಾಕ್‌ ಪೈಪೋಟಿ

ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿ: ಅನಿಶ್ಚಿತತೆಗೆ ಕೊನೆಹಾಡಿದ ಐಟಿಎಫ್‌

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 20:30 IST
Last Updated 19 ನವೆಂಬರ್ 2019, 20:30 IST
ಜೀಶನ್‌ ಅಲಿ
ಜೀಶನ್‌ ಅಲಿ   

ನವದೆಹಲಿ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯ ಕಜಕಸ್ತಾನದ ರಾಜಧಾನಿ ನೂರ್‌ ಸುಲ್ತಾನ್‌ನಲ್ಲಿ ನಿಗದಿಯಾಗಿದೆ.

ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌) ಮಂಗಳವಾರ ಈ ವಿಷಯ ತಿಳಿಸಿದೆ.

ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿದ್ದ ಪಂದ್ಯವನ್ನು ಬೇರೆಡೆ ಸ್ಥಳಾಂತರಿಸುವಂತೆ ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ), ಐಟಿಎಫ್‌ಗೆ ಮನವಿ ಮಾಡಿತ್ತು.

ADVERTISEMENT

ಆಟಗಾರರು, ಪಂದ್ಯದ ಅಧಿಕಾರಿಗಳು ಮತ್ತು ಪ್ರೇಕ್ಷಕರ ಸುರಕ್ಷತೆಯ ದೃಷ್ಟಿಯಿಂದ ಐಟಿಎಫ್‌, ಪಂದ್ಯವನ್ನು ತಟಸ್ಥ ಸ್ಥಳದಲ್ಲಿ ನಡೆಸಲು ತೀರ್ಮಾನಿಸಿತ್ತು. ಇದಕ್ಕೆ ಪಾಕಿಸ್ತಾನ ಟೆನಿಸ್‌ ಫೆಡರೇಷನ್‌ (ಪಿಟಿಎಫ್‌) ತೀವ್ರ ವಿರೋಧ ವ್ಯಕ್ತಪಡಿಸಿತ್ತು.

‘ನೂರ್‌ ಸುಲ್ತಾನ್‌ನಲ್ಲಿ ಪಂದ್ಯ ನಡೆಸಲು ನಿರ್ಧರಿಸಿರುವುದಾಗಿ ಐಟಿಎಫ್‌ ಸೋಮವಾರ ರಾತ್ರಿ ನಮಗೆ ಮಾಹಿತಿ ನೀಡಿದೆ’ ಎಂದು ಎಐಟಿಎ ಸಿಇಒ ಅಖುವೊರಿ ವಿಶ್ವದೀಪ್‌ ತಿಳಿಸಿದ್ದಾರೆ.

ನೂರ್‌ ಸುಲ್ತಾನ್‌ನಲ್ಲಿ ವಿ‍ಪರೀತ ಚಳಿ ಇರುವುದರಿಂದ ಒಳಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

‘ಒಳಾಂಗಣದಲ್ಲಿ ಪಂದ್ಯಗಳು ಆಯೋಜನೆಯಾಗಿರುವುದರಿಂದ ನಮ್ಮ ಆಟಗಾರರಿಗೆ ಹೆಚ್ಚು ಲಾಭವಾಗಲಿದೆ. ಶೀತ ವಾತಾವರಣಕ್ಕೆ ಹೊಂದಿಕೊಳ್ಳುವುದು ತುಸು ಕಷ್ಟವಾಗಬಹುದು. ಡಬಲ್ಸ್‌ ವಿಭಾಗದ ಆಟಗಾರ ರೋಹನ್‌ ಬೋಪಣ್ಣ ಗಾಯದ ಕಾರಣ ಈ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಜೀವನ್‌ ನೆಡುಂಚೆಳಿಯನ್‌ ತಂಡ ಸೇರಿಕೊಂಡಿದ್ದಾರೆ. ಅವರು ಡವಲ್ಸ್‌ನಲ್ಲಿ ಅನುಭವಿ ಆಟಗಾರ ಲಿಯಾಂಡರ್‌ ಪೇಸ್‌ ಜೊತೆ ಅಂಗಳಕ್ಕಿಳಿಯಲಿದ್ದಾರೆ’ ಎಂದು ಭಾರತ ತಂಡದ ಕೋಚ್‌ ಜೀಶನ್‌ ಅಲಿ ಹೇಳಿದ್ದಾರೆ.

‘ರಾಮಕುಮಾರ್‌ ರಾಮನಾಥನ್‌ ಸೇರಿದಂತೆ ತಂಡದಲ್ಲಿರುವ ಕೆಲ ಆಟಗಾರರು ಸಿಂಗಲ್ಸ್‌ ಜೊತೆಗೆ ಡಬಲ್ಸ್‌ನಲ್ಲೂ ಆಡಬಲ್ಲರು. ಇದು ನಮಗೆ ವರವಾಗಿ ಪರಿಣಮಿಸಲಿದೆ. ಪಾಕಿಸ್ತಾನಕ್ಕೆ ಹೋಲಿಸಿದರೆ ನಾವು ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದ್ದೇವೆ. ಹಾಗಂತ ಎದುರಾಳಿಗಳನ್ನು ಲಘುವಾಗಿ ಪರಿಗಣಿಸುವುದಿಲ್ಲ. ಪಂದ್ಯದ ದಿನ ಏನಾದರೂ ಆಗಬಹುದು’ ಎಂದಿದ್ದಾರೆ.

‘ಡೇವಿಸ್‌ ಕ‍ಪ್‌ನಲ್ಲಿ ಆಡುವಾಗ ಆಟಗಾರರು ಸ್ವ ಪ್ರತಿಷ್ಠೆ ಬದಿಗೊತ್ತಿ ದೇಶಕ್ಕಾಗಿ ಹೋರಾಡಬೇಕಾಗುತ್ತದೆ. ಹೀಗಾಗಿ ಸಹಜವಾಗಿಯೇ ಒತ್ತಡ ಇರುತ್ತದೆ. ಪಾಕಿಸ್ತಾನ ಎದುರು ಗೆಲ್ಲುವುದು ನಮ್ಮ ಗುರಿ. ಅದಕ್ಕಾಗಿ ಶಕ್ತಿಮೀರಿ ಪ್ರಯತ್ನಿಸುತ್ತೇವೆ’ ಎಂದೂ ನುಡಿದಿದ್ದಾರೆ.

ಭಾರತ ಮತ್ತು ಪಾಕ್‌ ನಡುವಣ ಹಣಾಹಣಿಯು ಇದೇ ತಿಂಗಳ 29 ಮತ್ತು 30 ರಂದು ಆಯೋಜನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.