ADVERTISEMENT

ಪ್ರಾಗ್ ಟೆನಿಸ್‌ ಟೂರ್ನಿ | ಭಾರತದ ಸವಾಲು ಅಂತ್ಯ: ದಿವಿಜ್‌, ಸುಮಿತ್‌ಗೆ ಸೋಲು

ಪಿಟಿಐ
Published 21 ಆಗಸ್ಟ್ 2020, 18:06 IST
Last Updated 21 ಆಗಸ್ಟ್ 2020, 18:06 IST
ಸುಮಿತ್‌ ನಗಾಲ್‌–ಪಿಟಿಐ ಚಿತ್ರ
ಸುಮಿತ್‌ ನಗಾಲ್‌–ಪಿಟಿಐ ಚಿತ್ರ   

ಪ್ರಾಗ್, ಜೆಕ್‌ ಗಣರಾಜ್ಯ‌: ದಿವಿಜ್‌ ಶರಣ್‌, ಎನ್‌ ಶ್ರೀರಾಮ್‌ ಬಾಲಾಜಿ ಹಾಗೂ ಸುಮಿತ್ ನಗಾಲ್‌ ಅವರು ಸೋಲು ಕಾಣುವ ಮೂಲಕ ಎಟಿಪಿ ಚಾಲೆಂಜರ್‌ ಪ್ರಾಗ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಭಾರತದ ಸವಾಲು ಕೊನೆಗೊಂಡಿತು.

ಅಗ್ರಶ್ರೇಯಾಂಕ ಪಡೆದಿದ್ದ ದಿವಿಜ್‌ – ನೆದರ್ಲೆಂಡ್ಸ್‌ನ ರಾಬಿನ್‌ ಹಾಸ್‌ ಜೋಡಿಯು ಕ್ವಾರ್ಟರ್‌ಫೈನಲ್‌ನಲ್ಲಿಗುರುವಾರ 3–6, 6–7ರಿಂದ ಜಿರಿ ಲೆಹೆಕ್ಕಾ ಹಾಗೂ ಥಾಮಸ್‌ ಮ್ಯಾಕ್‌ಹಾಕ್‌ ಅವರಿಗೆ ಮಣಿಯಿತು.

ಮತ್ತೊಂದು ಪಂದ್ಯದಲ್ಲಿ ಎನ್.‌ ಶ್ರೀರಾಮ್‌– ಬೆಲ್ಜಿಯಂನ ಕಿಮ್ಮರ್‌ ಕೊಪ್ಪೆಜಾನ್ಸ್‌ ಜೋಡಿಯು 4–6, 3–6 ಸೆಟ್‌ಗಳಿಂದ ಸ್ಟೀವನ್‌ ಡೈಜ್‌ ಹಾಗೂ ಬ್ಲಾಜ್‌ ರೋಲಾ ಅವರಿಗೆ ಸೋತರು.

ADVERTISEMENT

ಸಿಂಗಲ್ಸ್‌ ವಿಭಾಗದಲ್ಲಿ ಸುಮಿತ್‌ ನಗಾಲ್‌ ಅವರು ವಿಶ್ವದ 17ನೇ ರ‍್ಯಾಂಕಿನ ಆಟಗಾರ ಹಾಗೂ ಮೂರು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ವಿಜೇತ ಸ್ಟ್ಯಾನ್‌ ವಾವ್ರಿಂಕಾ ಅವರಿಗೆ ಸೋತಿದ್ದು, ಡಬಲ್ಸ್‌ನಲ್ಲೂ ಎಡವಿದರು.

ನಗಾಲ್‌ ಹಾಗೂ ಬೆಲಾರಸ್‌ನ ಇಲ್ಯಾ ಇವಾಷ್ಕಾ ಅವರು 2–6, 4–6 ಸೆಟ್‌ಗಳಿಂದ ಪಿಯರ್‌ ಹಗ್ಯೂಸ್‌ ಹರ್ಬರ್ಟ್‌–ಅರ್ಥರ್‌ ರಿಂಡ್‌ರ್ಕನೆಚ್‌ ಎದುರು ಮಣಿಯಿತು.

ಕೋವಿಡ್‌ ಪಿಡುಗಿನ ಹಿನ್ನೆಲೆಯಲ್ಲಿ ಮಾರ್ಚ್‌ನಿಂದ ಟೆನಿಸ್‌ ಟೂರ್ನಿಗಳು ಸ್ಥಗಿತಗೊಂಡ ಬಳಿಕ ಭಾರತದ ಈ ಮೂವರು ಆಟಗಾರರು ಕಣಕ್ಕಿಳಿದ ಮೊದಲ ಟೂರ್ನಿ ಇದಾಗಿತ್ತು.

ನಗಾಲ್ ಛಲದ ಆಟ: 127ನೇ ಕ್ರಮಾಂಕದ ಸುಮಿತ್‌ ನಗಾಲ್‌ ಅವರು ವಾವ್ರಿಂಕಾ ಎದುರು ನಡೆದ ಎಂಟರ ಘಟ್ಟದ ಪಂದದಲ್ಲಿ ವೀರೋಚಿತ ಹೋರಾಟ ನೀಡಿದರು. ಮೊದಲು ಸೆಟ್‌ಅನ್ನು 6–2ರಿಂದ ಗೆದ್ದು ಸ್ವಿಟಜರ್ಲೆಂಡ್‌ ಆಟಗಾರನಿಗೆ ಸೋಲಿನ ಭೀತಿ ಮೂಡಿಸಿದ್ದರು. ಆದರೆ ತಿರುಗೇಟು ನೀಡಿದ ವಾವ್ರಿಂಕಾ ಎರಡು ಮತ್ತು ಮೂರನೇ ಸೆಟ್‌ಗಳನ್ನು 6–0, 6–1ರಿಂದ ವಶಪಡಿಸಿಕೊಂಡು ಪಂದ್ಯವನ್ನೂ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.