ADVERTISEMENT

ಇಂಡಿಯನ್‌ ವೆಲ್ಸ್‌ ಟೆನಿಸ್‌ ಟೂರ್ನಿ: ಸೆಮಿಫೈನಲ್‌ಗೆ ಕೆರ್ಬರ್‌

ವೀನಸ್‌ ವಿಲಿಯಮ್ಸ್‌ಗೆ ನಿರಾಸೆ

ಏಜೆನ್ಸೀಸ್
Published 25 ಮಾರ್ಚ್ 2019, 14:24 IST
Last Updated 25 ಮಾರ್ಚ್ 2019, 14:24 IST
ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದರು. –ಎಎಫ್‌ಪಿ ಚಿತ್ರ
ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದರು. –ಎಎಫ್‌ಪಿ ಚಿತ್ರ   

ಇಂಡಿಯಾನ ವೆಲ್ಸ್‌, ಅಮೆರಿಕ: ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ಏಂಜಲಿಕ್‌ ಕೆರ್ಬರ್‌, ಇಂಡಿಯಾನ ವೆಲ್ಸ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಗುರುವಾರ ರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಜರ್ಮನಿಯ ಕೆರ್ಬರ್‌ 7–6, 6–3 ನೇರ ಸೆಟ್‌ಗಳಿಂದ ಅಮೆರಿಕದ ವೀನಸ್‌ ವಿಲಿಯಮ್ಸ್‌ ಅವರನ್ನು ಮಣಿಸಿದರು.

ಗ್ರ್ಯಾನ್‌ಸ್ಲಾಮ್‌ನಲ್ಲಿ ಏಳು ಪ್ರಶಸ್ತಿ ಗೆದ್ದಿರುವ ವೀನಸ್‌ ಮತ್ತು ಮೂರು ಕಿರೀಟ ಮುಡಿಗೇರಿಸಿಕೊಂಡಿರುವ ಕೆರ್ಬರ್, ಮೊದಲ ಸೆಟ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಇಬ್ಬರೂ ಸರ್ವ್‌ ಉಳಿಸಿಕೊಂಡಿದ್ದರಿಂದ 6–6 ಸಮಬಲ ಕಂಡುಬಂತು. ‘ಟೈ ಬ್ರೇಕರ್‌’ನಲ್ಲಿ ದಿಟ್ಟ ಆಟ ಆಡಿದ ಕೆರ್ಬರ್‌ ಗೆಲುವಿನ ತೋರಣ ಕಟ್ಟಿದರು.

ADVERTISEMENT

ಎರಡನೇ ಸೆಟ್‌ನ ಶುರುವಿನಲ್ಲಿ ನಾಲ್ಕು ಬ್ರೇಕ್‌ ಪಾಯಿಂಟ್ಸ್‌ ಕಾಪಾಡಿಕೊಂಡ ವೀನಸ್‌ 2–2ರಿಂದ ಸಮಬಲ ಸಾಧಿಸಿದರು. ನಂತರ ಸತತ ಎರಡು ಗೇಮ್‌ ಗೆದ್ದ ಕೆರ್ಬರ್‌ 4–2 ಮುನ್ನಡೆ ಪಡೆದು ಗೆಲುವಿನ ಹಾದಿ ಸುಗಮ ಮಾಡಿಕೊಂಡರು. ನಂತರವೂ ಅವರು ದಿಟ್ಟ ಆಟ ಆಡಿ ಸಂಭ್ರಮಿಸಿದರು.

ಸೆಮಿಫೈನಲ್‌ನಲ್ಲಿ ಕೆರ್ಬರ್‌, ಬೆಲಿಂದ ಬೆನ್‌ಸಿಕ್‌ ವಿರುದ್ಧ ಸೆಣಸಲಿದ್ದಾರೆ.

ಎಂಟರ ಘಟ್ಟದ ಇನ್ನೊಂದು ಪೈಪೋಟಿಯಲ್ಲಿ ಸ್ವಿಟ್ಜರ್‌ಲೆಂಡ್‌ನ ಬೆಲಿಂದ 6–3, 4–6, 6–3ರಲ್ಲಿ ಜೆಕ್‌ ಗಣರಾಜ್ಯದ ಐದನೇ ಶ್ರೇಯಾಂಕದ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾಗೆ ಆಘಾತ ನೀಡಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಕೆನಡಾದ ಮಿಲೊಸ್‌ ರಾನಿಕ್‌ 6–3, 6–4ರಲ್ಲಿ ಸರ್ಬಿಯಾದ ಮಿಯೊಮಿರ್‌ ಕೆಸ್ಮಾನೊವಿಚ್‌ ಎದುರು ವಿಜಯಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.