ADVERTISEMENT

ರಾಜ್ಯದಲ್ಲಿ ಟೆನಿಸ್ ಟೂರ್‌, ಪ‍್ರೊ ಟೂರ್‌ಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 14:46 IST
Last Updated 31 ಡಿಸೆಂಬರ್ 2020, 14:46 IST
ರಾಜ್ಯ ಟೆನಿಸ್ ಸಂಸ್ಥೆಯ ಅಂಗಣ –ಪ್ರಜಾವಾಣಿ ಚಿತ್ರ
ರಾಜ್ಯ ಟೆನಿಸ್ ಸಂಸ್ಥೆಯ ಅಂಗಣ –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಟೆನಿಸ್ ಬೆಳವಣಿಗೆಗೆ ವಿವಿಧ ಯೋಜನೆಗಳನ್ನು ಹಾಕಿಕೊಂಡಿರುವ ರಾಜ್ಯ ಟೆನಿಸ್ ಸಂಸ್ಥೆ ರಾಜ್ಯ (ಕೆಎಸ್‌ಎಲ್‌ಟಿಎ) ರ‍್ಯಾಂಕಿಂಗ್ ಟೂರ್‌ ಆಯೋಜಿಸಲು ಮುಂದಾಗಿದೆ. ಪುರುಷ ಮತ್ತು ಮಹಿಳೆಯರಿಗಾಗಿ ಪ್ರೊ ಟೂರ್ ಕೂಡ ನಡೆಯಲಿದೆ. ಪ್ರತಿ ತಿಂಗಳು ಆಟಗಾರರ ರ‍್ಯಾಂಕಿಂಗ್‌ ನಿಗದಿ ಮಾಡಲಿದ್ದು ವರ್ಷಾಂತ್ಯದಲ್ಲಿ ರಾಜ್ಯ ಚಾಂಪಿಯನ್‌ಷಿಪ್‌ ಆಯೋಜಿಸುವ ಚಿಂತನೆಯೂ ಇದೆ ಎಂದು ಪ್ರಕಟಣೆ ತಿಳಿಸಿದೆ.

ಎಲ್ಲ ವಯೋಮಾನದ ಆಟಗಾರರನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಿಗೆ ಸಜ್ಜುಗೊಳಿಸುವ ಉದ್ದೇಶದಿಂದ ಹೊಸ ವಿಧಾನವನ್ನು ಜಾರಿಗೆ ತರಲು ಸಂಸ್ಥೆ ಮುಂದಾಗಿದೆ. ಜೂನಿಯರ್ ವಿಭಾಗದಲ್ಲಿ 10, 12, 14, 16 ಮತ್ತು 18 ವಯೋಮಾನದ ಒಳಗಿನವರನ್ನು ಸೇರಿಸಲಾಗುತ್ತಿದ್ದು ಸೀನಿಯರ್‌ ಆಟಗಾರರಿಗಾಗಿ ಪ್ರೊ ಟೂರ್ ಆಯೋಜಿಸಲಾಗುವುದು. ಸಬ್‌ ಜೂನಿಯರ್‌ನಿಂದ ವೃತ್ತಿಪರ ಆಟಗಾರರ ವರೆಗಿನ ವಿವಿಧ ಹಂತಗಳನ್ನು ಐದು ಸೀನಿಯರ್ ಟೆನಿಸ್ ವಿಭಾಗಗಳಾಗಿ ವರ್ಗೀಕರಿಸಲಾಗಿದೆ. 35, 45, 55, 65 ಮತ್ತು 75ರ ಮೇಲಿನ ವಯೋಮಾನದವರು ಇದರಲ್ಲಿ ಇರುತ್ತಾರೆ.

ಗಾಳಿಕುರ್ಚಿ ಟೆನಿಸ್ ಬೆಳವಣಿಗೆಗಾಗಿ 18 ವರ್ಷದೊಳಗಿನ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಪ್ರೊ ಸರ್ಕೀಟ್‌ನಲ್ಲಿ ಬಹುಮಾನ ಮೊತ್ತ ₹ 30 ಸಾವಿರದಿಂದ ₹ 2 ಲಕ್ಷದ ವರೆಗೆ ಇರುತ್ತದೆ ಎಂದು ತಿಳಿಸಲಾಗಿದೆ.

ADVERTISEMENT

‘ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಟೂರ್ನಿಗಳನ್ನು ಆಯೋಜಿಸುವ ಚಿಂತನೆ ಇದೆ. ಗ್ರಾಮೀಣ ಪ್ರದೇಶಗಳಲ್ಲೂ ಟೆನಿಸ್ ಬೆಳೆಸಬೇಕು ಎಂಬುದು ನಮ್ಮ ಉದ್ದೇಶ’ ಎಂದು ರಾಜ್ಯ ಟೆನಿಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಮಹೇಶ್ವರ ರಾವ್ ತಿಳಿಸಿದ್ದಾರೆ.

ಆಟಗಾರರು, ಅಕಾಡೆಮಿಗಳು ಮತ್ತು ಕೋಚ್‌ಗಳನ್ನು ಒಂದೇ ಸೂರಿನಡಿಗೆ ತಂದು ಟೆನಿಸ್ ಸಂಸ್ಥೆಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕೂ ಕೆಎಸ್‌ಎಲ್‌ಟಿಎ ಸಿದ್ಧವಾಗಿದೆ. ಇದಕ್ಕಾಗಿ ನೋಂದಣಿ ಅಭಿಯಾನ ಹಮ್ಮಿಕೊಂಡಿದ್ದು ಅಂತರರಾಷ್ಟ್ರೀಯ ಆಟಗಾರ ರೋಹನ್ ಬೋಪಣ್ಣ ಇದಕ್ಕೆ ಚಾಲನೆ ನೀಡಿದರು. ಯಾವುದೇ ವಯೋಮಾನದ ವಿಭಾಗದಲ್ಲಿ ಪಾಲ್ಗೊಳ್ಳುವವರು ಹೆಸರು ನೊಂದಾಯಿಸಿಕೊಳ್ಳುವುದು ಕಡ್ಡಾಯ ಎಂದು ಸೂಚಿಸಲಾಗಿದೆ. ನೋಂದಣಿಗೆ www.kslta.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಮಾಹಿತಿಗೆ 080-22863636ಕ್ಕೆ ಕರೆ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.