ADVERTISEMENT

ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟ ಮೆಡ್ವೆಡೆವ್

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಜೊಕೊವಿಚ್ ಎದುರು ಫೈನಲ್‌; ಸ್ಟೆಫನೊಸ್ ಸಿಸಿಪಸ್‌ಗೆ ನಿರಾಸೆ

ಏಜೆನ್ಸೀಸ್
Published 19 ಫೆಬ್ರುವರಿ 2021, 13:26 IST
Last Updated 19 ಫೆಬ್ರುವರಿ 2021, 13:26 IST
ಡ್ಯಾನಿಲ್ ಮೆಡ್ವೆಡೆವ್ ಗೆಲುವಿನ ಸಂಭ್ರಮ –ಎಎಫ್‌ಪಿ ಚಿತ್ರ
ಡ್ಯಾನಿಲ್ ಮೆಡ್ವೆಡೆವ್ ಗೆಲುವಿನ ಸಂಭ್ರಮ –ಎಎಫ್‌ಪಿ ಚಿತ್ರ   

ಮೆಲ್ಬರ್ನ್‌: ಬಲಶಾಲಿ ಹೊಡೆತಗಳು ಮತ್ತು ನಿಖರ ಪ್ಲೇಸಿಂಗ್ ಮೂಲಕ ಗ್ರೀಸ್‌ನ ಸ್ಟೆಫನೊಸ್ ಸಿಸಿಪಸ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್‌ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದರು. ರೋಡ್ ಲಾವೆರ್ ಅರೆನಾದಲ್ಲಿ ಶುಕ್ರವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಮೆಡ್ವೆಡೆವ್6-4, 6-2, 7-5ರಲ್ಲಿ ಜಯ ಗಳಿಸಿದರು. ಒಂಬತ್ತನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ನೊವಾಕ್ ಜೊಕೊವಿಚ್‌ ಅವರನ್ನು ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಮೆಡ್ವೆಡೆವ್ ಎದುರಿಸುವರು.

ಐದನೇ ಶ್ರೇಯಾಂಕದ ಸಿಸಿಪಸ್‌ ಎದುರು ನಾಲ್ಕನೇ ಶ್ರೇಯಾಂಕದ ಮೆಡ್ವೆಡೆವ್ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದರು. ಏಳು ಸಾವಿರ ಪ್ರೇಕ್ಷಕರ ಮುಂದೆ ನಡೆದ ಪಂದ್ಯದ ಪ್ರತಿ ಹಂತದಲ್ಲೂ ತಂತ್ರಶಾಲಿ ಆಟವಾಡಿದ 25 ವರ್ಷದ ಈ ಆಟಗಾರ ಸತತ 20 ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದರು. ಅವರಿಗೆ ಈ ವರೆಗೆ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. 2019ರ ಅಮೆರಿಕ ಓ‍ಪನ್‌ನಲ್ಲಿ ಫೈನಲ್ ಪ್ರವೇಶಿಸಿದ್ದು ಅವರ ಗರಿಷ್ಠ ಸಾಧನೆಯಾಗಿದೆ.

ಈ ಹಿಂದೆ ಮೆಡ್ವೆಡೆವ್ ಮತ್ತು ಸಿಸಿಪಸ್ ಆರು ಬಾರಿ ಮುಖಾಮುಖಿಯಾಗಿದ್ದು ಐದರಲ್ಲಿ ಮೆಡ್ವೆಡೆವ್ ಗೆಲುವು ಸಾಧಿಸಿದ್ದರು. ಉದ್ವೇಗವಿಲ್ಲದೆ ಆಟವಾಡುವ ಮೆಡ್ವೆಡೆವ್ ಶೈಲಿಯನ್ನು ‘ಬೋರ್ ಹೊಡೆಸುವ ಆಟ’ ಎಂದು ಹೇಳಿ 2019ರ ಶಾಂಘೈ ಓಪನ್‌ನ ಸಂದರ್ಭದಲ್ಲಿ ಸಿಸಿಪಸ್ ಗೇಲಿ ಮಾಡಿದ್ದರು.

ADVERTISEMENT

20 ಬಾರಿಯ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ವಿಜೇತ ಸ್ಪೇನ್‌ನ ರಫೆಲ್ ನಡಾಲ್ ವಿರುದ್ಧ ಐದು ಸೆಟ್‌ಗಳ ಪಂದ್ಯದಲ್ಲಿ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿದ್ದ ಸಿಸಿಪಸ್ ಭರವಸೆಯಿಂದಲೇ ಶುಕ್ರವಾರ ಕಣಕ್ಕೆ ಇಳಿದಿದ್ದರು. ರಾಷ್ಟ್ರಧ್ವಜ ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಗ್ರೀಸ್‌ ಅಭಿಮಾನಿಗಳ ಬೆಂಬಲವೂ ಅವರಿಗೆ ಇತ್ತು. ಆರಂಭದಲ್ಲಿ ಇಬ್ಬರೂ 2–2ರ ಸಮಬಲ ಸಾಧಿಸಿದರು. ನಂತರ ಮೆಡ್ವೆಡೆವ್ ನಾಗಾಲೋಟ ಆರಂಭವಾಯಿತು. ಭರ್ಜರಿ ಏಸ್ ಮೂಲಕ ಮೊದಲ ಸೆಟ್‌ ಗೆದ್ದುಕೊಂಡ ಅವರು ನಂತರದ ಸೆಟ್‌ನಲ್ಲಿ ಇನ್ನಷ್ಟು ಸುಲಭವಾಗಿ ಗೆಲುವು ಸಾಧಿಸಿದರು.

ನಿರ್ಣಾಯಕ ಸೆಟ್‌ ಜಿದ್ದಾಜಿದ್ದಿಯ ಕಾದಾಟಕ್ಕೆ ಸಾಕ್ಷಿಯಾಯಿತು. ಎರಡು ಸೆಟ್‌ಗಳಲ್ಲಿ ನಿರಾತಂಕವಾಗಿ ಆಡಿದ ಮೆಡ್ವೆಡೆವ್ ಮೂರನೇ ಸೆಟ್‌ 5–5ರಲ್ಲಿ ಸಮ ಆದಾಗ ಸ್ವಲ್ಪ ಒತ್ತಡಕ್ಕೆ ಒಳಗಾದರು. ಆದರೆ ಮೋಹಕ ಪಾಸಿಂಗ್ ಶಾಟ್‌ ಮೂಲಕ 6–5ರಲ್ಲಿ ಮುನ್ನಡೆದ ಅವರು ನಂತರ ಸುಂದರ ಸರ್ವ್ ಮೂಲಕ ಸೆಟ್ ಹಾಗೂ ಪಂದ್ಯ ಗೆದ್ದುಕೊಂಡರು.

ಸುದೀರ್ಘ ರ‍್ಯಾಲಿಗಳಲ್ಲಿ ಆಧಿಪತ್ಯ ಸ್ಥಾಪಿಸಿದ ಮೆಡ್ವೆಡೆವ್ ಸುಲಭವಾಗಿ ಪಾಯಿಂಟ್‌ಗಳನ್ನು ಕಲೆ ಹಾಕಿದರೆ ಸಿಸಿಪಸ್ ಪ್ರಯಾಸದಿಂದ ಆಗೊಂದು ಈಗೊಂದು ಪಾಯಿಂಟ್‌ ಗಳಿಸಿದರು. ರಷ್ಯಾ ಆಟಗಾರನ ಫೋರ್‌ಹ್ಯಾಂಡ್ ಹೊಡೆತಗಳನ್ನು ಸಿಸಿಪಸ್ ಎರಡೂ ಕೈಗಳ ಶಕ್ತಿ ಒಗ್ಗೂಡಿಸಿ ರಿಟರ್ನ್ ಮಾಡುತ್ತಿದ್ದರು. ಒಂದು ಹಂತದಲ್ಲಿ ಉದ್ವೇಗಕ್ಕೆ ಒಳಗಾದ ಸಿಸಿಪಸ್ ನೀರಿನ ಬಾಟಲಿಯನ್ನು ನೆಲಕ್ಕೆ ಎಸೆದು ಒಡೆದು ಹಾಕಿದರು. ಚೆಲ್ಲಿದ ನೀರನ್ನು ಬಾಲ್ ಕಿಡ್‌ ಒರೆಸಿ ತೆಗೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.