ADVERTISEMENT

ನಡಾಲ್, ಮೆಡ್ವೆಡೆವ್ ಜಯದ ಓಟ

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಆ್ಯಶ್ಲೆ ಬಾರ್ಟಿ ನಾಲ್ಕನೇ ಸುತ್ತಿಗೆ

ಏಜೆನ್ಸೀಸ್
Published 13 ಫೆಬ್ರುವರಿ 2021, 13:59 IST
Last Updated 13 ಫೆಬ್ರುವರಿ 2021, 13:59 IST
ರಫೆಲ್ ನಡಾಲ್ ಆಟದ ವೈಖರಿ–ಎಎಫ್‌ಪಿ ಚಿತ್ರ
ರಫೆಲ್ ನಡಾಲ್ ಆಟದ ವೈಖರಿ–ಎಎಫ್‌ಪಿ ಚಿತ್ರ   

ಮೆಲ್ಬರ್ನ್‌: ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ರಫೆಲ್ ನಡಾಲ್ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಗೆಲುವಿನ ಓಟವನ್ನು ಮುಂದುವರಿಸಿದರು. ಬ್ರಿಟನ್ ಆಟಗಾರ ಕ್ಯಾಮರೂನ್ ನೊರ್ರಿ ಎದುರು 7–5, 6–2, 7–5ರಿಂದ ಗೆಲುವು ಸಾಧಿಸಿದ ಅವರು ಶನಿವಾರ ಟೂರ್ನಿಯ ನಾಲ್ಕನೇ ಸುತ್ತಿಗೆ ಲಗ್ಗೆಯಿಟ್ಟರು.

ದಾಖಲೆಯ 21ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಸ್ಪೇನ್‌ ಪ್ರತಿಭೆ ನಡಾಲ್‌, ಎಡಗೈ ಆಟಗಾರರ ವಿರುದ್ಧ ಸತತ ಜಯದ ದಾಖಲೆಯನ್ನು 18ಕ್ಕೆ ಹೆಚ್ಚಿಸಿಕೊಂಡರು. ಟೂರ್ನಿಗೂ ಮುನ್ನ ಬೆನ್ನುನೋವಿನಿಂದ ಬಳಲಿದ್ದ ರಫೆಲ್‌, ಮೆಲ್ಬರ್ನ್ ಪಾರ್ಕ್‌ನಲ್ಲಿ ಆಡಿದ 16 ಟೂರ್ನಿಗಳ ಪೈಕಿ 14ನೇ ಬಾರಿ ನಾಲ್ಕನೇ ಸುತ್ತಿಗೆ ತಲುಪಿದ ಆಟಗಾರ ಎನಿಸಿಕೊಂಡರು.

ಮುಂದಿನ ಪಂದ್ಯದಲ್ಲಿ ಅವರು 16ನೇ ಕ್ರಮಾಂಕದ ಆಟಗಾರ ಇಟಲಿಯ ಫ್ಯಾಬಿಯೊ ಫಾಗ್ನಿನಿ ಅವರಿಗೆ ಮುಖಾಮುಖಿಯಾಗಲಿದ್ದಾರೆ. ಮತ್ತೊಂದು ಪಂದ್ಯದಲ್ಲಿ ಫಾಗ್ನಿನಿ 6–4, 6–3, 6–4ರಿಂದ 21ನೇ ಶ್ರೇಯಾಂಕದ ಅಲೆಕ್ಸ್ ಡಿ ಮಿನೌರ್ ಅವರನ್ನು ಪರಾಭವಗೊಳಿಸಿದರು.

ADVERTISEMENT

ಐದು ಸೆಟ್‌ಗಳ ತಡೆ ದಾಟಿದ ಡ್ಯಾನಿಲ್‌: ಐದು ಸೆಟ್‌ಗಳ ಪಂದ್ಯವನ್ನು ಗೆಲ್ಲುವುದು ಹೇಗೆಂದುರಷ್ಯಾದ ಡ್ಯಾನಿಲ್ ಮೆಡ್ವೆಡೆವ್‌ ಕೊನೆಗೂ ಅರಿತುಕೊಂಡರು. ನಾಲ್ಕನೇ ಶ್ರೇಯಾಂಕದ ಆಟಗಾರ, ಟೂರ್ನಿಯಲ್ಲಿ ಶನಿವಾರ ನಾಲ್ಕನೇ ಸುತ್ತಿಗೆ ಕಾಲಿಟ್ಟರು. ಈ ಹಾದಿಯಲ್ಲಿ ಅವರು 6–3, 6–3, 4–6, 3–6, 6–0ದಿಂದ ಸರ್ಬಿಯಾದ ಫಿಲಿಪ್ ಕ್ರಾಜಿನೊವಿಚ್ ಸವಾಲು ಮೀರಿದರು.

ಈ ಹಿಂದೆ ಆಡಿದ ಐದು ಸೆಟ್‌ಗಳ ಆರು ಪಂದ್ಯಗಳಲ್ಲಿ ಡ್ಯಾನಿಲ್ ಅವರಿಗೆ ಒಂದರಲ್ಲೂ ಜಯ ಒಲಿದಿರಲಿಲ್ಲ. ಈ ಹಣಾಹಣಿಯಲ್ಲಿ ಮೊದಲ ಎರಡು ಸೆಟ್‌ಗಳನ್ನು ಸುಲಭವಾಗಿ ಗೆದ್ದ ರಷ್ಯಾ ಆಟಗಾರನಿಗೆ ಮೂರು ಹಾಗೂ ನಾಲ್ಕನೇ ಸೆಟ್‌ಗಳ ವಿಜೇತರಾದ ಕ್ರಾಜಿನೊವಿಚ್‌ ಸವಾಲು ಒಡ್ಡಿದರು.

ನಿರ್ಣಾಯಕ ಸೆಟ್‌ನಲ್ಲಿ ಒಂದೂ ಗೇಮ್‌ ಬಿಟ್ಟುಕೊಡದ ಡ್ಯಾನಿಲ್ ಗೆಲುವಿನ ಕೇಕೆ ಹಾಕಿದರು.

ಪುರುಷರ ಸಿಂಗಲ್ಸ್ ಮೂರನೇ ಸುತ್ತಿನ ಇತರ ಹಣಾಹಣಿಗಳಲ್ಲಿ ಆ್ಯಂಡ್ರೆ ರುಬ್ಲೆವ್‌ 7-5, 6-2, 6-3ರಿಂದ ಫೆಲಿಸಿಯಾನೊ ಲೊಪೇಜ್‌ ಎದುರು, ಸ್ಟೆಫನೊಸ್ ಸಿಸಿಪಸ್‌ 6-4, 6-1, 6-1ರಿಂದ ಮೈಕೆಲ್‌ ವೈಮರ್‌ ವಿರುದ್ಧ, ಮ್ಯಾಟ್ಟೆಯೊ ಬೆರೆಟ್ಟಿನಿ 7-6 , 7-6 , 7-6ರಿಂದ ಕರೆನ್ ಕಚನೊವ್ ಎದುರು ಗೆದ್ದು ಮುನ್ನಡೆದರು.

ಮಹಿಳಾ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯಗಳಲ್ಲಿ ಆ್ಯಶ್ಲೆ ಬಾರ್ಟಿ 6-2, 6-4ರಿಂದ ಏಕಟೆರಿನಾ ಅಲೆಕ್ಸಾಂಡ್ರೊವಾ ವಿರುದ್ಧ, ಎಲಿಸ್ ಮೆರ್ಟೆನ್ಸ್ 6-2, 6-1ರಿಂದ ಬೆಲಿಂಡಾ ಬೆನ್ಸಿಚ್‌ ವಿರುದ್ಧ, ಕರೋಲಿನಾ ಮುಚೊವಾ 7-5, 7-5ರಿಂದ ಕರೋಲಿನಾ ಪ್ಲಿಸ್ಕೊವಾ ಎದುರು ಗೆದ್ದು ಮುಂದಿನ ಸುತ್ತು ಪ್ರವೇಶಿಸಿದರು.

ಭಾರತದ ಸವಾಲು ಅಂತ್ಯ: ಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ಅವರು ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿದರು. ಇದರೊಂದಿಗೆ ಈ ವರ್ಷದ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯವಾಯಿತು.

ಬೋಪಣ್ಣ ಹಾಗೂ ಚೀನಾದ ಆಟಗಾರ್ತಿ ಯಿಂಗ್‌ಯಿಂಗ್‌ ಡುವಾನ್‌ 4–6, 4–6ರಿಂದ ಅಮೆರಿಕದ ಬೆಥನಿ ಮಟೆಕ್ ಸ್ಯಾಂಡ್ಸ್– ಇಂಗ್ಲೆಂಡ್‌ನ ಜೆಮಿ ಮರ್ರೆ ಎದುರು ಪರಾಭವಗೊಂಡರು. ಒಂದು ತಾಸು ಮೂರು ನಿಮಿಷಗಳಲ್ಲಿ ಪಂದ್ಯ ಮುಕ್ತಾಯವಾಯಿತು.

ಪುರುಷರ ಡಬಲ್ಸ್ ವಿಭಾಗದಲ್ಲೂ ಬೋಪಣ್ಣ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ದರು. ಪುರುಷರ ಹಾಗೂ ಮಹಿಳಾ ಡಬಲ್ಸ್ ವಿಭಾಗಗಳಲ್ಲಿ ಸ್ಪರ್ಧಿಸಿದ್ದ ಕ್ರಮವಾಗಿ ದಿವಿಜ್ ಶರಣ್ ಹಾಗೂ ಅಂಕಿತಾ ರೈನಾ ಕೂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.