ADVERTISEMENT

ಹತಾಶೆಗೊಳಗಾದ ನಡಾಲ್‌

ಪಿಟಿಐ
Published 21 ಏಪ್ರಿಲ್ 2020, 20:12 IST
Last Updated 21 ಏಪ್ರಿಲ್ 2020, 20:12 IST
ರಫೆಲ್ ನಡಾಲ್‌ (ಎಡ) ಹಾಗೂ ರೋಜರ್‌ ಫೆಡರರ್‌
ರಫೆಲ್ ನಡಾಲ್‌ (ಎಡ) ಹಾಗೂ ರೋಜರ್‌ ಫೆಡರರ್‌   

ಮ್ಯಾಡ್ರಿಡ್‌: ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ‘ಬಂಧಿ’ಯಾಗಿರುವ ಸ್ಪೇನ್‌ನ ರಫೆಲ್‌ ನಡಾಲ್‌, ಟೆನಿಸ್‌ ಚಟುವಟಿಕೆಗಳು ಸ್ತಬ್ಧವಾಗಿರುವ ಕುರಿತು ಹತಾಶೆ ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಾಣುವನ್ನು ಹತ್ತಿಕ್ಕುವ ಉದ್ದೇಶದಿಂದ ಸ್ಪೇನ್‌ ಸರ್ಕಾರವು ಮೇ 3ರವರೆಗೆ ಲಾಕ್‌ಡೌನ್‌ ವಿಸ್ತರಿಸಿದೆ. ಕೆಲವು ವಲಯಗಳಿಗೆ ಇದರಿಂದ ವಿನಾಯಿತಿ ನೀಡಿದೆ.

ಈ ಕುರಿತು ಇನ್‌ಸ್ಟಾಗ್ರಾಮ್‌ ಸಂವಾದದಲ್ಲಿ ಮಾತನಾಡಿರುವ ನಡಾಲ್‌ ‘ಲಾಕ್‌ಡೌನ್‌ನಿಂದಾಗಿ ಕೆಲ ವಲಯಗಳಿಗೆ ವಿನಾಯಿತಿ ಕೊಡಲಾಗಿದೆ. ಅವರು ಮನೆಯಿಂದ ಹೊರ ಹೋಗಬಹುದಾಗಿದೆ. ಆದರೆ ನಾವು ಮಾತ್ರ ಗೃಹಬಂಧಿಗಳಾಗೇ ಉಳಿದಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಟೆನಿಸ್‌ನಲ್ಲಿ ಸಾಕಷ್ಟು ಅಂತರ ಕಾಪಾಡಿಕೊಳ್ಳಲಾಗುತ್ತದೆ. ಆಟಗಾರರಿಬ್ಬರೂ ಪರಸ್ಪರ ವಿರುದ್ಧ ಅಂಕಣಗಳಲ್ಲಿರುತ್ತಾರೆ’ ಎಂದಿದ್ದಾರೆ.

ADVERTISEMENT

‘ನಾವೀಗ ಸಂದಿಗ್ಧತೆಯಲ್ಲಿದ್ದೇವೆ ಎಂಬುದರ ಅರಿವು ನನಗಿದೆ. ನಮ್ಮ ಮನೆಯಲ್ಲಿ ಯಾವುದೇ ಸೌಕರ್ಯಗಳಿಲ್ಲ. ಹೀಗಾಗಿ ಟೆನಿಸ್‌ ಅಭ್ಯಾಸದಿಂದ ದೂರ ಉಳಿದಿದ್ದೇನೆ. ಫಿಟ್‌ನೆಸ್‌ ಕಾಪಾಡಿಕೊಳ್ಳಲು ನಿತ್ಯವೂ ಬೆಳಿಗ್ಗೆ ಹಾಗೂ ಮಧ್ಯಾಹ್ನ ಅಗತ್ಯ ವ್ಯಾಯಾಮಗಳನ್ನು ಮಾಡುತ್ತಿದ್ದೇನೆ’ ಎಂದೂ ತಿಳಿಸಿದ್ದಾರೆ.

ಈ ಸಂವಾದದಲ್ಲಿ ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್‌ ಹಾಗೂ ಬ್ರಿಟನ್‌ನ ಆ್ಯಂಡಿ ಮರ‍್ರೆ ಅವರೂ ಪಾಲ್ಗೊಂಡಿದ್ದರು.

‘ಈ ವರ್ಷದ ಫೆಬ್ರುವರಿಯಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಅದರಿಂದ ನಿಧಾನವಾಗಿ ಗುಣಮುಖನಾಗುತ್ತಿದ್ದೇನೆ. ಟೆನಿಸ್‌ ಚಟುವಟಿಕೆಗಳು ನಿಂತುಹೋಗಿರುವುದರಿಂದ ನನ್ನ ಮೇಲೆ ಯಾವ ಒತ್ತಡವೂ ಇಲ್ಲ. ಮನೆಯಲ್ಲಿ ಆರಾಮವಾಗಿ ಕಾಲ ಕಳೆಯುತ್ತಿದ್ದೇನೆ’ ಎಂದು ಫೆಡರರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.