ADVERTISEMENT

ಫ್ರೆಂಚ್‌ ಓಪನ್‌ ಟೂರ್ನಿಯಿಂದ ಹಿಂದೆ ಸರಿದ ಒಸಾಕ

ಏಜೆನ್ಸೀಸ್
Published 18 ಸೆಪ್ಟೆಂಬರ್ 2020, 10:48 IST
Last Updated 18 ಸೆಪ್ಟೆಂಬರ್ 2020, 10:48 IST
ನವೊಮಿ ಒಸಾಕ–ಎಎಫ್‌ಪಿ ಚಿತ್ರ
ನವೊಮಿ ಒಸಾಕ–ಎಎಫ್‌ಪಿ ಚಿತ್ರ   

ಪ್ಯಾರಿಸ್‌: ಜಪಾನ್‌ನ ನವೊಮಿ ಒಸಾಕ ಅವರು ಫ್ರೆಂಚ್‌ ಓಪನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಮಂಡಿರಜ್ಜು ಗಾಯದ ಕಾರಣ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಒಸಾಕ ಇತ್ತೀಚೆಗೆ ಕೊನೆಗೊಂಡ ಅಮೆರಿಕ ಓಪನ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ಚಾಂಪಿಯನ್‌ ಆಗಿದ್ದಾರೆ.

ಪ್ಯಾರಿಸ್‌ನಲ್ಲಿ ಸೆಪ್ಟೆಂಬರ್‌ 27ರಂದು ಫ್ರೆಂಚ್‌ ಓಪನ್‌ ಟೂರ್ನಿ ಆರಂಭವಾಗಲಿದೆ. ಟೂರ್ನಿಯ ಹಾಲಿ ಚಾಂಪಿಯನ್‌ ಆ್ಯಶ್‌ ಬಾರ್ಟಿ ಅವರೂ ಈಗಾಗಲೇ ಆಡುವುದಿಲ್ಲ ಎಂದು ಹೇಳಿದ್ದಾರೆ.

ವಿಶ್ವದ ಮೂರನೇ ರ‍್ಯಾಂಕಿನ ಆಟಗಾರ್ತಿಯಾಗಿರುವ ಜಪಾನ್‌ನ ಒಸಾಕ ಅವರಿಗೆ ಕಳೆದ ತಿಂಗಳು ನಡೆದ ವೆಸ್ಟರ್ನ್‌ ಮತ್ತು ಸದರ್ನ್‌ ಓಪನ್‌ ಟೂರ್ನಿಯ ವೇಳೆ ಗಾಯವಾಗಿತ್ತು. ಹೀಗಾಗಿ ಟೂರ್ನಿಯ ಫೈನಲ್‌ ಪಂದ್ಯದಿಂದ ಅವರು ಹಿಂದೆ ಸರಿದಿದ್ದರು.

ADVERTISEMENT

’ದುರದೃಷ್ಟವಶಾತ್‌ ಈ ವರ್ಷದ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ‘ ಎಂದು ಒಸಾಕ ಅವರು ಟ್ವೀಟ್‌ ಮಾಡಿದ್ದಾರೆ.

‘ನನ್ನ ಎಡಗಾಲಿನಲ್ಲಿ ಇನ್ನೂ ನೋವಿದೆ. ಬೆನ್ನುಬೆನ್ನಿಗೆ ಎರಡೂ ಟೂರ್ನಿಗಳು (ಅಮೆರಿಕ ಹಾಗೂ ಫ್ರೆಂಚ್‌ ಓಪನ್‌) ಆಯೋಜನೆಯಾಗಿರುವುದರಿಂದ ಫ್ರೆಂಚ್‌ ಓಪನ್‌ಗೆ ಸಜ್ಜುಗೊಳ್ಳಲು ಸಮಯ ಸಿಗುತ್ತಿಲ್ಲ‘ ಎಂದು ಅವರು ಹೇಳಿದ್ದಾರೆ.

ಕೊರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಇನ್ನಷ್ಟು ಕಡಿತಗೊಳಿಸಲಾಗುವುದು ಎಂದು ಸಂಘಟಕರು ಹೇಳಿದ್ದು, ಫ್ರೆಂಚ್‌ ಓಪನ್‌ ಟೂರ್ನಿಗೆ ಮತ್ತೊಂದು ಹೊಡೆತ ಬಿದ್ದಂತಾಗಿದೆ.

ಪ್ರತಿ ದಿನಕ್ಕೆ 5,000 ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸುವುದಾಗಿ ಸಂಘಟಕರು ತಿಳಿಸಿದ್ದಾರೆ. ಈ ಮೊದಲು 11,500 ಮಂದಿಗೆ ಅನುಮತಿ ನೀಡಲು ನಿರ್ಧರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.