ADVERTISEMENT

ನಿಂಗ್ಬೊ ಚಾಲೆಂಜರ್‌ ಟೆನಿಸ್‌ ಟೂರ್ನಿ: ಪ್ರಜ್ಞೇಶ್‌ ರನ್ನರ್‌ ಅಪ್‌

ಪಿಟಿಐ
Published 21 ಅಕ್ಟೋಬರ್ 2018, 17:30 IST
Last Updated 21 ಅಕ್ಟೋಬರ್ 2018, 17:30 IST
ಪ್ರಜ್ಞೇಶ್‌ ಗುಣೇಶ್ವರನ್‌
ಪ್ರಜ್ಞೇಶ್‌ ಗುಣೇಶ್ವರನ್‌   

ನವದೆಹಲಿ: ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌, ಚೀನಾದಲ್ಲಿ ನಡೆದ ನಿಂಗ್ಬೊ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಸಾಧನೆ ಮಾಡಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಪ್ರಜ್ಞೇಶ್‌ 6–7, 6–4, 3–6ರಲ್ಲಿ ಇಟಲಿಯ ಥಾಮಸ್‌ ಫಾಬಿಯಾನೊ ಎದುರು ಸೋತರು. ಈ ಮ್ಯಾರಥಾನ್‌ ಹೋರಾಟ ಸುಮಾರು ಮೂರು ಗಂಟೆ ನಡೆಯಿತು.

ಮೊದಲ ಗೇಮ್‌ನಲ್ಲಿ ಉಭಯ ಆಟಗಾರರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಹೀಗಾಗಿ 6–6ರಲ್ಲಿ ಸಮಬಲ ಕಂಡುಬಂತು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 131ನೇ ಸ್ಥಾನದಲ್ಲಿರುವ ಫಾಬಿಯಾನೊ ‘ಟೈ ಬ್ರೇಕರ್‌’ನಲ್ಲಿ ಮೋಡಿ ಮಾಡಿದರು. ಈ ಸೆಟ್‌ನಲ್ಲಿ ಪ್ರಜ್ಞೇಶ್‌ ಎಂಟು ಬ್ರೇಕ್‌ ಪಾಯಿಂಟ್ಸ್‌ಗಳನ್ನು ಉಳಿಸಿಕೊಳ್ಳಲು ವಿಫಲರಾದರು.

ADVERTISEMENT

ಇದರಿಂದ ವಿಶ್ವಾಸ ಕಳೆದುಕೊಳ್ಳದ ಭಾರತದ ಆಟಗಾರ ಎರಡನೇ ಸೆಟ್‌ನಲ್ಲಿ ಗರ್ಜಿಸಿದರು. 28 ವರ್ಷ ವಯಸ್ಸಿನ ಪ್ರಜ್ಞೇಶ್‌, ಕೊನೆಯ ಎರಡು ಗೇಮ್‌ಗಳಲ್ಲಿ ಚುರುಕಿನ ಆಟ ಆಡಿ ಸೆಟ್‌ ತಮ್ಮದಾಗಿಸಿಕೊಂಡರು.

ಹೀಗಾಗಿ ಮೂರನೇ ಸೆಟ್‌ ಕುತೂಹಲದ ಗಣಿಯಾಗಿತ್ತು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 170ನೇ ಸ್ಥಾನದಲ್ಲಿರುವ ಭಾರತದ ಆಟಗಾರ ಮೊದಲ ಆರು ಗೇಮ್‌ಗಳಲ್ಲಿ ಪ್ರಬಲ ಸ್ಪರ್ಧೆ ಒಡ್ಡಿದರು. ನಂತರ ಫಾಬಿಯಾನೊ ಮೇಲುಗೈ ಸಾಧಿಸಿದರು. ಶರವೇಗದ ಸರ್ವ್‌ಗಳ ಜೊತೆಗೆ ಹಿಂಗೈ ಹೊಡೆತಗಳ ಮೂಲಕ ಗೇಮ್‌ ಜಯಿಸಿ ಸಂಭ್ರಮಿಸಿದರು.

ಪ್ರಜ್ಞೇಶ್‌ ಅವರು ಈ ಋತುವಿನಲ್ಲಿ ಫೈನಲ್‌ ಪ್ರವೇಶಿಸಿದ್ದ ಎರಡನೇ ಚಾಲೆಂಜರ್‌ ಟೂರ್ನಿ ಇದಾಗಿತ್ತು. ಏಪ್ರಿಲ್‌ನಲ್ಲಿ ಜರುಗಿದ್ದ ಕುನ್‌ಮಿಂಗ್‌ ಟೂರ್ನಿಯಲ್ಲಿ ಅವರು ಚಾಂಪಿಯನ್‌ ಆಗಿದ್ದರು.

ನಿಂಗ್ಬೊ ಟೂರ್ನಿಯಲ್ಲಿ ರನ್ನರ್‌ ಅಪ್‌ ಆದ ಎಡಗೈ ಆಟಗಾರ ಪ್ರಜ್ಞೇಶ್‌ ಒಟ್ಟು 65 ರ‍್ಯಾಂಕಿಂಗ್‌ ಪಾಯಿಂಟ್ಸ್‌ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.