ADVERTISEMENT

ಎಕೆಂಟಲ್‌ ಚಾಲೆಂಜರ್‌ ಟೆನಿಸ್‌ ಟೂರ್ನಿ: ರಾಮ್‌ಕುಮಾರ್ ರನ್ನರ್‌ಅಪ್

ಫೈನಲ್‌ನಲ್ಲಿ ಎಡವಿದ ಭಾರತದ ಆಟಗಾರ

ಪಿಟಿಐ
Published 8 ನವೆಂಬರ್ 2020, 14:38 IST
Last Updated 8 ನವೆಂಬರ್ 2020, 14:38 IST
ರಾಮ್‌ಕುಮಾರ್‌ ರಾಮನಾಥನ್‌–ಪಿಟಿಐ ಚಿತ್ರ
ರಾಮ್‌ಕುಮಾರ್‌ ರಾಮನಾಥನ್‌–ಪಿಟಿಐ ಚಿತ್ರ   

ಎಕೆಂಟಲ್‌, ಜರ್ಮನಿ: ಭಾರತದ ಆಟಗಾರ ರಾಮಕುಮಾರ್ ರಾಮನಾಥನ್‌ ಚಾಲೆಂಜರ್‌ ಸರ್ಕೀಟ್‌ ಟೆನಿಸ್‌ ಟೂರ್ನಿಯ ಪ್ರಶಸ್ತಿ ಸುತ್ತಿನಲ್ಲಿ ಮತ್ತೊಮ್ಮೆ ಎಡವಿದರು. ಭಾನುವಾರ ನಡೆದ ಎಕೆಂಟಲ್‌ ಟೂರ್ನಿಯ ಸಿಂಗಲ್ಸ್ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಅವರು 4–6, 4–6ರಿಂದ ಅಮೆರಿಕದ ಸೆಬಾಸ್ಟಿಯನ್‌ ಕೊರ್ಡಾ ಎದುರು ಪರಾಭವಗೊಂಡರು.

ಶ್ರೇಯಾಂಕರಹಿತ ಆಟಗಾರ ರಾಮನಾಥನ್‌ ಭಾನುವಾರ ತಮ್ಮ 26ನೇ ಜನ್ಮದಿನವನ್ನು ಆಚರಿಸಿಕೊಂಡರು. ಆದರೆ ಏಳನೇ ಶ್ರೇಯಾಂಕದ ಆಟಗಾರ ಸೆಬಾಸ್ಟಿಯನ್‌ ಎದುರಿನ ಸೋಲಿನೊಂದಿಗೆ ಮಂಕಾದರು. ಒಂದು ತಾಸು 23 ನಿಮಿಷಗಳಲ್ಲಿ ಪಂದ್ಯ ಮುಗಿಯಿತು.

ಪಂದ್ಯದಲ್ಲಿ ನೆಟ್‌ ಸನಿಹದಲ್ಲೇ ತಮ್ಮ ಆಟವನ್ನು ಕೇಂದ್ರೀಕರಿಸಿದ್ದ ರಾಮಕುಮಾರ್, ಆ ಮೂಲಕ ಹೆಚ್ಚು ಪಾಯಿಂಟ್ಸ್ ಗಳಿಸಿದರು. ಆದರೆ ಕೊರ್ಡಾ ಸವಾಲು ಮೀರಲಾಗಲಿಲ್ಲ. ಎರಡನೇ ಸೆಟ್‌ನಲ್ಲಿ ಮಾತ್ರ ರಾಮ್‌ಕುಮಾರ್ ಒಂದು ಹಂತದಲ್ಲಿ 4–4ರಿಂದ ಸಮ ಮಾಡಿಕೊಂಡಿದ್ದರು. ಆದರೆ ಸತತ ಐದು ಪಾಯಿಂಟ್ಸ್ ಗಳಿಸಿದ ಅಮೆರಿಕ ಆಟಗಾರ ಮೇಲುಗೈ ಸಾಧಿಸಿದರು.

ADVERTISEMENT

ಚಾಲೆಂಜರ್‌ ಸರ್ಕೀಟ್‌ನ ಫೈನಲ್‌ನಲ್ಲಿ ರಾಮ್‌ಕುಮಾರ್‌ ಅವರಿಗೆ ಇದು ಐದನೇ ಸೋಲು. ಈ ಹಿಂದೆ ಅಮೆರಿಕದ ತಲಾಹಸ್ಸಿ (ಎಪ್ರಿಲ್‌ 2017), ವಿನ್ನೆಟ್ಕಾ (ಜುಲೈ 2017), ಪುಣೆ (ನವೆಂಬರ್‌ 2017) ಹಾಗೂ ತೈಪೆಯಲ್ಲಿ (ಎಪ್ರಿಲ್‌ 2018) ನಡೆದ ಟೂರ್ನಿಗಳಲ್ಲಿ ರನ್ನರ್ ಅಪ್ ಆಗಿದ್ದರು.

ಟೂರ್ನಿಯ ಫೈನಲ್‌ನಲ್ಲಿ ಸೋತರೂ ರಾಮ್‌ಕುಮಾರ್‌ ಅವರಿಗೆ ಇದು ಈ ವರ್ಷ ತೋರಿದ ಶ್ರೇಷ್ಠ ಸಾಮರ್ಥ್ಯವಾಗಿದೆ. ಎರಡನೇ ಸ್ಥಾನ ಪಡೆಯುವ ಮೂಲಕ ₹ 6 ಲಕ್ಷ 32 ಸಾವಿರ ಬಹುಮಾನ ಮೊತ್ತವನ್ನು ಪಡೆದ ಅವರು, ಎಟಿಪಿ ರ‍್ಯಾಂಕಿಂಗ್‌ನಲ್ಲಿ 206ರಿಂದ 185ನೇ ಸ್ಥಾನಕ್ಕೆ ಜಿಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.