ADVERTISEMENT

ಮಹಿಳೆಯರ ಟೆನಿಸ್ ಟೂರ್ ಚಾಂಪಿಯನ್‌ಷಿಪ್‌: ಋತುಜಾ, ಸೌಜನ್ಯಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 15:37 IST
Last Updated 1 ಡಿಸೆಂಬರ್ 2021, 15:37 IST
ಋತುಜಾ ಭೋಸಲೆ ಅವರು ಚೆಂಡನ್ನು ರಿಟರ್ನ್ ಮಾಡಿದ ಪರಿ –ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ
ಋತುಜಾ ಭೋಸಲೆ ಅವರು ಚೆಂಡನ್ನು ರಿಟರ್ನ್ ಮಾಡಿದ ಪರಿ –ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ   

ಬೆಂಗಳೂರು: ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದಿದ್ದ ಭಾರತದ ಶ್ರೀವಲ್ಲಿ ರಷ್ಮಿಕಾ ಅವರು ಮಹಿಳೆಯರ ಐಟಿಎಫ್‌ ಅಂತರರಾಷ್ಟ್ರೀಯ ಟೆನಿಸ್ ಟೂರ್ ಚಾಂಪಿಯನ್‌ಷಿಪ್‌ನ ಎರಡನೇ ದಿನ ಮಿಂಚಿದರು.

ಕೆಎಸ್‌ಎಲ್‌ಟಿಎ ಅಂಗಣದಲ್ಲಿ ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು ಎರಡನೇ ಶ್ರೇಯಾಂಕದ ಜೀಲ್ ದೇಸಾಯಿ ವಿರುದ್ಧ 6-3, 7-5ರಲ್ಲಿ ಜಯ ಗಳಿಸಿದರು. ದಿನದ ಕೊನೆಯ ಪಂದ್ಯದಲ್ಲಿ ಗಳಿಸಿದ ಈ ಜಯದ ಮೂಲಕ ಅವರು ಪ್ರೀ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿದರು.

ಅಗ್ರ ಶ್ರೇಯಾಂಕದ ಋತುಜಾ ಭೋಸಲೆ ಅವರಿಗೆ ಅರ್ಹತಾ ಸುತ್ತಿನಿಂದ ಬಂದಿದ್ದ ಶ್ರೇಯಾ ತಟವರ್ತಿ ಸವಾಲೊಡ್ಡಿದರು. ಆದರೆ ಋತುಜಾ 6-4, 6-3ರಲ್ಲಿ ಗೆದ್ದು 16ರ ಘಟ್ಟ ಪ್ರವೇಶಿಸಿದರು. ಮೂರನೇ ಶ್ರೇಯಾಂಕದ ಸೌಜನ್ಯ ಬಾವಿಸೆಟ್ಟಿ ಕೂಡ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಆಡಲು ಅರ್ಹತೆ ಗಳಿಸಿದರು.

ADVERTISEMENT

ಮೂರು ವಾರಗಳ ಹಿಂದೆ ನಡೆದಿದ್ದ ಫೆನೆಸ್ಟಾ ನ್ಯಾಷನಲ್ಸ್‌ನಲ್ಲಿ ಜೀಲ್ ವಿರುದ್ಧ ಸೋತಿದ್ದ ಶ್ರೀವಲ್ಲಿ ಇಲ್ಲಿ ಸೇಡು ತೀರಿಸಿಕೊಂಡರು. ಪ್ರಭಾವಿ ಸರ್ವ್‌ಗಳೊಂದಿಗೆ ಅಮೋಘ ಆಟವಾಡಿದ ಅವರು ಪಂದ್ಯದಲ್ಲಿ ಪೂರ್ಣ ಆಧಿಪತ್ಯ ಸ್ಥಾಪಿಸಿದರು.

ಸ್ನೇಹಲ್ ಮಾನೆ ಎದುರಿನ ಪಂದ್ಯದಲ್ಲಿ ಅವರು 6-1, 6-2ರಲ್ಲಿ ಗೆಲುವು ಸಾಧಿಸಿದರು. ಈ ಪಂದ್ಯ ಕೇವಲ 55 ನಿಮಿಷದಲ್ಲಿ ಮುಕ್ತಾಯ ಕಂಡಿತ್ತು. ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಶರ್ಮಡಾ ಬಾಲು ಅವರ ಪ್ರತಿರೋಧವನ್ನು ಮೆಟ್ಟಿನಿಂತ ನಾಲ್ಕನೇ ಶ್ರೇಯಾಂಕಿತೆ ಪ್ರಾಂಜಲ ಯೆಡ್ಲಪಲ್ಲಿ 6-0, 7-5ರಲ್ಲಿ ಗೆಲುವು ಸಾಧಿಸಿದರು.

ಫಲಿತಾಂಶಗಳು: ರಷ್ಯಾದ ಜ್ಲಾಟ ಯಂಕೊವ್‌ಸ್ಕಾಯಗೆ 7-5, 7-5ರಲ್ಲಿ ಸೌಮ್ಯಾ ವಿರುದ್ಧ, ರೇಷ್ಮಾ ಮುರಾರಿಗೆ6-1, 6-3ರಲ್ಲಿ ಅಶ್ಮಿತಾ ಈಶ್ವರಮೂರ್ತಿ ವಿರುದ್ಧ, ಸಾಯಿ ಸಂಹಿತಾಗೆ ಡೆನ್ಮಾರ್ಕ್‌ನ ಎಲಿನಾ ಜಮ್ಶಿದಿ ವಿರುದ್ಧ 6-2, 6-2ರಲ್ಲಿ, ಸೌಜನ್ಯಾ ಬಾವಿಸೆಟ್ಟಿಗೆ 6-1, 6-2ರಲ್ಲಿ ಸ್ನೇಹಲ್ ಮಾನೆ ವಿರುದ್ಧ, ಋತುಜಾ ಭೋಸಲೆಗೆ6-4, 6-3ರಲ್ಲಿ ಶ್ರೇಯಾ ತಟವರ್ತಿ ವಿರುದ್ಧ, ಪ್ರತ್ಯೂಷಾ ರಚಪುಡಿಗೆ 6-2, 6-7 (6), 6-3ರಲ್ಲಿ ರೆನಿ ಸಿಂಗ್ಲಾ ವಿರುದ್ಧ, ಯುವರಾಣಿ ಬ್ಯಾನರ್ಜಿಗೆ 6-3, 6-0ರಲ್ಲಿ ಆರತಿ ಮುನಿಯನ್ ವಿರುದ್ಧ, ಪ್ರಾಂಜಲ ಯಡಪಲ್ಲಿಗೆ 6-0, 7-5ರಲ್ಲಿ ಶರ್ಮಡಾ ಬಾಲು ವಿರುದ್ಧ, ಸಾತ್ವಿಕಾ ಸಮಾಗೆ3-6, 6-3, 6-2ರಲ್ಲಿ ಶ್ರವ್ಯಾ ಶಿವಾನಿ ವಿರುದ್ಧ, ಆಕಾಂಕ್ಷ ದಿಲೀಪ್‌ಗೆ6-1, 6-1ರಲ್ಲಿ ಹುಮೇರ ವಿರುದ್ಧ, ಶ್ರೀವಲ್ಲಿ ರಷ್ಮಿಕಾಗೆ6-3, 7-5ರಲ್ಲಿ ಜೀಲ್ ದೇಸಾಯಿ ವಿರುದ್ಧ, ಪ್ರತಿಭಾ ನಾರಾಯಣನ್‌ಗೆ 6-3, 7-5ರಲ್ಲಿ ಸಾಯಿ ದೀಪಾ ಯಡುಲ್ಲ ವಿರುದ್ಧ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.