ADVERTISEMENT

ವಿಶ್ವ ಟೆನಿಸ್ ಟೂರ್‌ ಚಾಂಪಿಯನ್‌ಷಿಪ್‌: ಮುಖ್ಯ ಸುತ್ತು ಪ್ರವೇಶಿಸಿದ ಪ್ರತಿಭಾ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 14:33 IST
Last Updated 29 ನವೆಂಬರ್ 2021, 14:33 IST
ಪ್ರತಿಭಾ ಪ್ರಸಾದ್
ಪ್ರತಿಭಾ ಪ್ರಸಾದ್   

ಬೆಂಗಳೂರು: ಭಾರತದ ರುತುಜಾ ಭೋಸಲೆ ಇಲ್ಲಿ ನಡೆಯಲಿರುವ ಮಹಿಳೆಯರ ವಿಶ್ವ ಟೆನಿಸ್ ಟೂರ್‌ ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಶ್ರೇಯಾಂಕ ಗಳಿಸಿದ್ದಾರೆ.

ರಾಜ್ಯ ಟೆನಿಸ್ ಸಂಸ್ಥೆಯ ಸಹಯೋಗದಲ್ಲಿ ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್ ಆಯೋಜಿಸಿರುವ ಚಾಂಪಿಯನ್‌ಷಿಪ್‌ನ ಮುಖ್ಯ ಸುತ್ತಿನ ಪಂದ್ಯಗಳು ಮಂಗಳವಾರ ಆರಂಭವಾಗಲಿವೆ.

ಅಲ್ಪ ಕಾಲದ ವಿರಾಮದ ನಂತರ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳಿದ್ದ ರುತುಜಾ ಕಳೆದ ವರ್ಷ ಈಜಿಪ್ಟ್‌ನಲ್ಲಿ ನಡೆದಿದ್ದ ಐಟಿಎಫ್‌ ಮಹಿಳಾ ಟೂರ್ನಿಯಲ್ಲಿ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದರು.

ADVERTISEMENT

ಕಾಮನ್ವೆಲ್ತ್ ಯೂತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವ ಜೀಲ್ ದೇಸಾಯಿ ಅವರಿಗೆ ಎರಡನೇ ಶ್ರೇಯಾಂಕ ನೀಡಲಾಗಿದೆ. ಅವರು ಈಗಾಗಲೇ ನಾಲ್ಕು ಐಟಿಎಫ್‌ ಟೂರ್ನಿಗಳಲ್ಲಿ ಚಾಂಪಿಯನ್ ಆಗಿದ್ದಾರೆ. ಇತ್ತೀಚೆಗೆ ನಡೆದ ರಾಷ್ಟ್ರೀಯ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದ ಸೌಜನ್ಯ ಬಾವಿಸೆಟ್ಟಿ ಅವರಿಗೆ ಮೂರನೇ ಶ್ರೇಯಾಂಕ ನೀಡಲಾಗಿದೆ.

ಅಗ್ರ ಐದರಲ್ಲಿ ಕೊನೆಯ ಎರಡು ಸ್ಥಾನಗಳನ್ನು ಗಳಿಸುವಲ್ಲಿ ಪ್ರಾಂಜಲಿ ಎಡಲಪಲ್ಲಿ ಮತ್ತು ಮಿಹಿಕಾ ಯಾದವ್ ಯಶಸ್ವಿಯಾಗಿದ್ದಾರೆ. ವೈದೇಹಿ ಚೌಧರಿ, ಕೊರಿಯಾದ ಸೊ ರಾ ಲೀ, ಸಾತ್ವಿಕಾ ಸಮಾ ಅವರು ಅಗ್ರ ಎಂಟರಲ್ಲಿ ಸ್ಥಾನ ಗಳಿಸಿದ್ದಾರೆ. ಡೆನ್ಮಾರ್ಕ್‌ನ ಎಲಿನಾ ಜಮ್ಶಿದಿ, ಅಮೆರಿಕದ ಶ್ರಿಯಾ ಅಟ್ಟುರಾ ಮತ್ತು ರಷ್ಯಾದ ಲಾಟಾ ಯಂಕೊವಸ್ಕಯ ಅಗ್ರ ಹತ್ತರಲ್ಲಿರುವ ಇತರ ಆಟಗಾರ್ತಿಯರು.

ಪ್ರತಿಭಾ ನಾರಾಯಣನ್ ಮೇಲುಗೈ

ಸ್ಥಳೀಯ ಆಟಗಾರ್ತಿ ಪ್ರತಿಭಾ ನಾರಾಯಣನ್ ಪ್ರಸಾದ್ ಅವರು ಅಮೋಘ ಆಟದ ಮೂಲಕ ಮುಖ್ಯ ಸುತ್ತು ಪ್ರವೇಶಿಸಿದರು. ಸೋಮವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅವರು 6-7 (7-3), 6-2, 10-6ರಲ್ಲಿ ತೆಲಂಗಣಾದ ಅದಿತಿ ವಿರುದ್ಧ ಜಯ ಗಳಿಸಿದರು.

ಮುಖ್ಯ ಸುತ್ತಿನ ಮೊದಲ ಪಂದ್ಯದಲ್ಲಿ ಅವರು ಸಾಯಿ ದೇದೀಪ್ಯ ಏಡುಲ್ಲ ವಿರುದ್ಧ ಆಡಲಿದ್ದಾರೆ. 20 ವರ್ಷದ ಪ್ರತಿಭಾ ಆರಂಭದಲ್ಲಿ ಸ್ವಲ್ಪ ಹಿನ್ನಡೆ ಕಂಡರೂ ನಂತರ ಚೇತರಿಸಿಕೊಂಡು ಆಧಿಪತ್ಯ ಸ್ಥಾಪಿಸಿದರು. ವಾಕ್‌ ಓವರ್‌ ಮೂಲಕ ಕೊನೆಯ ಘಟ್ಟಕ್ಕೆ ಬಂದಿದ್ದ ಎದುರಾಳಿಯ ವಿರುದ್ಧ ಆಕ್ರಮಣಕಾರಿ ಆಟವಾಡಿ ಅವರು ಗಮನ ಸೆಳೆದರು.

ಮೊದಲ ಸೆಟ್‌ನಲ್ಲಿ ಹೋರಾಡಿ ಸೋತ ಅವರು ಎರಡನೇ ಸೆಟ್‌ನ ಆರಂಭದಲ್ಲೇ 4–1ರ ಮುನ್ನಡೆ ಸಾಧಿಸಿದರು. ಅದೇ ಲಯವನ್ನು ಮುಂದುವರಿಸಿ ಸೆಟ್ ತಮ್ಮದಾಗಿಸಿಕೊಂಡರು. ಮೂರನೇ ಸೆಟ್‌ನಲ್ಲಿ ಪ್ರತಿರೋಧ ಮೆಟ್ಟಿನಿಂತು ಗೆಲುವು ಸಾಧಿಸಿದರು.

ಸಾಯಿ ಸಂಹಿತಾ6-4, 6-7 (3), 10-4ರಲ್ಲಿ ಪೂಜಾ ಇಂಗಳೆ ವಿರುದ್ಧ, ರೆನಿ ಸಿಂಗ್ಲಾ 6-4, 6-2ರಲ್ಲಿ ಬೇಲ ತಮಾಂಕರ್‌ ವಿರುದ್ಧ, ಪ್ರತ್ಯೂಷಾ ರಾಚಪುಡಿ 7-6 (1), 6-1ರಲ್ಲಿ ಯಶಿಕಾ ವೇಣು ವಿರುದ್ಧ, ಶ್ರೇಯಾ ತಟವರ್ತಿ 6-4, 7-6 (4)ರಲ್ಲಿ ಸೊನಾಶೆ ಭಟ್ನಾಗರ್ ವಿರುದ್ಧ, ಸಾಯಿ ದೇದೀಪ್ಯ7-6 (5), 5-7, 10-1ರಲ್ಲಿ ಲಾಲಿತ್ಯ ಕಲ್ಲೂರಿ ಎದುರು, ಆಕಾಂಕ್ಷ ದಿಲೀಪ್6-2, 6-7 (3), 10-5ರಲ್ಲಿ ಕಾಶಿಶ್‌ ಭಾಟಿಯಾ ವಿರುದ್ಧ, ಶ್ರೀವಲ್ಲಿ ರಶ್ಮಿಕಾ6-0, 6-0ರಲ್ಲಿ ದಕ್ಷತಾ ಗಿರೀಶ್ ಕುಮಾರ್ ಎದುರು ಜಯ ಗಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.