ADVERTISEMENT

ವಿಂಬಲ್ಡನ್‌ ಟೆನಿಸ್‌: ಗ್ರ್ಯಾನ್‌ಸ್ಲಾಮ್‌ ಫೈನಲ್‌ ತಲುಪಿದ ಆಫ್ರಿಕಾದ ಮೊದಲ ಮಹಿಳೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 15:44 IST
Last Updated 7 ಜುಲೈ 2022, 15:44 IST
ಆನ್ಸ್‌ ಜಬೇರ್‌ ಚೆಂಡನ್ನು ಹಿಂದಿರುಗಿಸಿದ ಕ್ಷಣ –ಎಎಫ್‌ಪಿ ಚಿತ್ರ
ಆನ್ಸ್‌ ಜಬೇರ್‌ ಚೆಂಡನ್ನು ಹಿಂದಿರುಗಿಸಿದ ಕ್ಷಣ –ಎಎಫ್‌ಪಿ ಚಿತ್ರ   

ವಿಂಬಲ್ಡನ್‌, ಲಂಡನ್‌ (ಎಎಫ್‌ಪಿ/ ಪಿಟಿಐ): ಟ್ಯುನಿಷಿಯಾ ಆಟಗಾರ್ತಿ ಆನ್ಸ್‌ ಜಬೇರ್‌ ಅವರು ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದ ಆಫ್ರಿಕಾ ಮತ್ತು ಅರಬ್‌ ದೇಶದ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರರಾದರು.

ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯಲ್ಲಿ ಅಮೋಘ ಓಟ ಮುಂದುವರಿಸಿದ ಅವರು ಆಲ್‌ ಇಂಗ್ಲೆಂಡ್‌ ಕ್ಲಬ್‌ನ ಸೆಂಟರ್‌ ಕೋರ್ಟ್‌ನಲ್ಲಿ ಗುರುವಾರ ನಡೆದ ನಾಲ್ಕರಘಟ್ಟದ ಪಂದ್ಯದಲ್ಲಿ 6–2, 3–6, 6–1 ರಲ್ಲಿ ಜರ್ಮನಿಯ ತತಿಯಾನ ಮರಿಯಾ ವಿರುದ್ಧ ಗೆದ್ದರು.

2020ರ ಆಸ್ಟ್ರೇಲಿಯಾ ಓಪನ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು ಅವರ ಇದುವರೆಗಿನ ಉತ್ತಮ ಸಾಧನೆ ಆಗಿತ್ತು. ಒಂದು ಗಂಟೆ 43 ನಿಮಿಷ ನಡೆದ ಪಂದ್ಯದಲ್ಲಿ ಜಬೇರ್‌ ಜಯಿಸಿದರು.

ADVERTISEMENT

‘ಹಲವು ವರ್ಷಗಳ ಕಠಿಣ ಪರಿಶ್ರಮ ಮತ್ತು ತ್ಯಾಗದಿಂದಾಗಿ ಕನಸು ನನಸಾಗಿದೆ. ಇನ್ನೊಂದು ಪಂದ್ಯದಲ್ಲಿ ಇದೇ ಪ್ರದರ್ಶನ ಮುಂದುವರಿಸುವ ವಿಶ್ವಾಸ ನನ್ನದು’ ಎಂದು ಪಂದ್ಯದ ಬಳಿಕ ಜಬೇರ್ ಪ್ರತಿಕ್ರಿಯಿಸಿದರು.

ಜಬೇರ್ ಅವರು ಫೈನಲ್‌ನಲ್ಲಿ ಎಲೆನಾ ರಿಬಾಕಿನಾ ಅಥವಾ ಸಿಮೊನಾ ಹಲೆಪ್‌ ಅವರನ್ನು ಎದುರಿಸುವರು.

ಪುರುಷರ ಸೆಮಿಫೈನಲ್‌ ಇಂದು: ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಹಣಾಹಣಿ ಶುಕ್ರವಾರ ನಡೆಯಲಿದೆ. ಇಲ್ಲಿ ಎಂಟನೇ ಫೈನಲ್‌ ಮೇಲೆ ಕಣ್ಣಿಟ್ಟಿರುವ ಸರ್ಬಿಯದ ನೊವಾಕ್‌ ಜೊಕೊವಿಚ್‌, ಬ್ರಿಟನ್‌ನ ಕ್ಯಾಮರನ್‌ ನೋರಿ ಅವರ ಸವಾಲು ಎದುರಿಸುವರು.

ಇನ್ನೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಆಸ್ಟ್ರೇಲಿಯಾದ ನಿಕ್‌ ಕಿರ್ಗಿಯೊಸ್‌ ವಿರುದ್ಧ ಆಡುವರು. ಅಂಗಳದಲ್ಲಿ ನೀಡುವ ಪ್ರದರ್ಶನದ ಜತೆಯಲ್ಲೇ ವಿವಾದಗಳಿಂದಲೂ ಸುದ್ದಿಯಾಗಿರುವ ಕಿರ್ಗಿಯೊಸ್‌, 22 ಬಾರಿಯ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ವಿಜೇತ ನಡಾಲ್‌ಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ.

ಅಮೆರಿಕದ ಟೇಲರ್‌ ಫ್ರಿಟ್ಜ್‌ ಎದುರಿನ ಕ್ವಾರ್ಟರ್‌ಫೈನಲ್‌ ಪಂದ್ಯದ ವೇಳೆ ನಡಾಲ್‌, ಹೊಟ್ಟೆಯ ಸ್ನಾಯುಸೆಳೆತಕ್ಕೆ ಒಳಗಾಗಿದ್ದರು. ಆದ್ದರಿಂದ ಅವರು ಪೂರ್ಣ ಫಿಟ್‌ನೆಸ್‌ನೊಂದಿಗೆ ಆಡುವುದು ಅನುಮಾನ ಎನಿಸಿದೆ.

‘ನಡಾಲ್‌ ಹೊಟ್ಟೆಯ ಸ್ನಾಯುವಿನಲ್ಲಿ 7 ಮಿ.ಮೀ. ನಷ್ಟು ಗಾಯ ಆಗಿರುವುದು ಸ್ಕ್ಯಾನಿಂಗ್‌ನಲ್ಲಿ ತಿಳಿದುಬಂದಿದೆ’ ಎಂದು ಸ್ಪೇನ್‌ನ ಮಾಧ್ಯಮಗಳು ವರದಿ ಮಾಡಿವೆ. ಆದರೂ ಅವರು ಗುರುವಾರ ಅಭ್ಯಾಸ ನಡೆಸಿದ್ದು, ಸೆಮಿಯಲ್ಲಿಕಣಕ್ಕಿಳಿಯುವ ಸಾಧ್ಯತೆಯಿದೆ.

ಸಾನಿಯಾ ಜೋಡಿ ಪರಾಭವ

ವಿಂಬಲ್ಡನ್‌ನಲ್ಲಿ ಕೊನೆಯ ಬಾರಿ ಆಡುತ್ತಿರುವ ಭಾರತದ ಸಾನಿಯಾ ಮಿರ್ಜಾ ಅವರ ಪಯಣ ಸೆಮಿಫೈನಲ್‌ ಸೋಲಿನೊಂದಿಗೆ ಕೊನೆಗೊಂಡಿತು.

ಸಾನಿಯಾ ಮತ್ತು ಕ್ರೊಯೇಷ್ಯಾದ ಮಾಟೆ ಪಾವಿಚ್‌ ಜೋಡಿ ಮಿಶ್ರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ 6-4 5-7 4-6 ರಲ್ಲಿ ಬ್ರಿಟನ್‌ನ ನೀಲ್‌ ಸ್ಕಪ್‌ಸ್ಕಿ ಮತ್ತು ಅಮೆರಿಕದ ಡೆಸಿರೆ ಕ್ರಾಚಿಕ್ ಎದುರು ಸೋತರು.

ಈ ವರ್ಷದ ಕೊನೆಯಲ್ಲಿ ನಿವೃತ್ತಿಯಾಗುವುದಾಗಿ 35 ವರ್ಷದ ಸಾನಿಯಾ ಈಗಾಗಲೇ ಪ್ರಕಟಿಸಿದ್ದಾರೆ. ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ಮಿಶ್ರ ಡಬಲ್ಸ್‌ ಕಿರೀಟ ಜಯಿಸಬೇಕೆಂಬ ಅವರ ಕನಸು ಕೊನೆಗೂ ಈಡೇರಲಿಲ್ಲ.

ಸಾನಿಯಾ ಅವರು ಆಸ್ಟ್ರೇಲಿಯನ್‌ ಓಪನ್‌ (2009 ರಲ್ಲಿ ಮಹೇಶ್‌ ಭೂಪತಿ ಜೊತೆ), ಫ್ರೆಂಚ್‌ ಓಪನ್‌ (2012ರಲ್ಲಿ ಭೂಪತಿ ಜೊತೆ) ಮತ್ತು ಯುಎಸ್‌ ಓಪನ್‌ನಲ್ಲಿ (2014 ರಲ್ಲಿ ಬ್ರೆಜಿನ್‌ನ ಬ್ರುನೊ ಸೊರೇಸ್‌ ಜೊತೆ) ಮಿಶ್ರ ಡಬಲ್ಸ್‌ನಲ್ಲಿ ಚಾಂಪಿಯನ್‌ ಅಗಿದ್ದರು. ವಿಂಬಲ್ಡನ್‌ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಅವರಿಗೆ ಯಶಸ್ಸು ದೊರೆತಿಲ್ಲ.

ಆದರೆ 2015 ರಲ್ಲಿ ಅವರು ಇಲ್ಲಿ ಮಾರ್ಟಿನಾ ಹಿಂಗಿಸ್‌ ಜತೆ ಮಹಿಳೆಯರ ಡಬಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದರು.

ಸೆಮಿಫೈನಲ್‌ ಪಂದ್ಯದ ಮೊದಲ ಸೆಟ್‌ ಗೆದ್ದ ಭಾರತ–ಕ್ರೊಯೇಷ್ಯಾ ಜೋಡಿ ಎರಡನೇ ಸೆಟ್‌ನಲ್ಲಿ 4–2 ರಲ್ಲಿ ಮುನ್ನಡೆಯಲ್ಲಿತ್ತು. ಆ ಬಳಿಕ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.