ADVERTISEMENT

ಯಾರಾ ವ್ಯಾಲಿ ಟೆನಿಸ್ ಟೂರ್ನಿ: ಪ್ರೀಕ್ವಾರ್ಟರ್ ‌ಫೈನಲ್‌ಗೆ ಸೆರೆನಾ

ರಾಯಿಟರ್ಸ್
Published 1 ಫೆಬ್ರುವರಿ 2021, 13:29 IST
Last Updated 1 ಫೆಬ್ರುವರಿ 2021, 13:29 IST
ಸೆರೆನಾ ವಿಲಿಯಮ್ಸ್ ಆಟದ ವೈಖರಿ–ಎಎಫ್‌ಪಿ ಚಿತ್ರ
ಸೆರೆನಾ ವಿಲಿಯಮ್ಸ್ ಆಟದ ವೈಖರಿ–ಎಎಫ್‌ಪಿ ಚಿತ್ರ   

ಮೆಲ್ಬ‌ರ್ನ್‌ : ಭರ್ಜರಿ ಆಟವಾಡಿದ ಸೆರೆನಾ ವಿಲಿಯಮ್ಸ್‌ ಅವರು ಇಲ್ಲಿ ನಡೆಯುತ್ತಿರುವ ಯಾರಾ ವ್ಯಾಲಿ ಕ್ಲಾಸಿಕ್ ಟೆನಿಸ್ ಟೂರ್ನಿಯಲ್ಲಿ ಪ್ರೀಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಸೋಮವಾರ ನಡೆದ ಹಣಾಹಣಿಯಲ್ಲಿ ಅವರು 6–1, 6–4ರಿಂದ ದರಿಯಾ ಗಾವ್ರಿಲೊವಾ ಅವರನ್ನು ಮಣಿಸಿದರು.

ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್‌ ಆಸ್ಟ್ರೇಲಿಯಾ ಓಪನ್ ಟೂರ್ನಿಗೆ ಸಿದ್ಧವಾಗುತ್ತಿರುವ ಸೆರೆನಾ ಇಲ್ಲಿಯ ಮಾರ್ಗರೇಟ್‌ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದರು.ಅಮೆರಿಕದ ಆಟಗಾರ್ತಿ ದಾಖಲೆಯ 24ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ.

ವಿಶ್ವದ ಮಾಜಿ ಅಗ್ರಕ್ರಮಾಂಕದ ಆಟಗಾರ್ತಿ ಸೆರೆನಾ, ಹೋದ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದ ಫ್ರೆಂಚ್‌ ಓಪನ್ ಟೂರ್ನಿಯಿಂದ ಹಿಂದೆ ಸರಿದ ಬಳಿಕ ಕಣಕ್ಕಿಳಿದಿರಲಿಲ್ಲ. ಗಾಯದ ಹಿನ್ನೆಲೆಯಲ್ಲಿ ಅವರು ಆ ಟೂರ್ನಿಯ ಎರಡನೇ ಸುತ್ತಿನಿಂದ ಹೊರನಡೆದಿದ್ದರು.

ADVERTISEMENT

ಈ ಟೂರ್ನಿಯ ಮುಂದಿನ ಪಂದ್ಯದಲ್ಲಿ ಅವರು ಬಲ್ಗೇರಿಯಾದ ಸ್ವೇತಾನಾ ಪಿರೊಂಕೊವಾ ಅವರನ್ನು ಎದುರಿಸಲಿದ್ದಾರೆ.

ಫೆಬ್ರುವರಿ 8ರಂದು ಆರಂಭವಾಗುವ ಗ್ರ್ಯಾನ್‌ಸ್ಲಾಮ್ ಟೂರ್ನಿಗೂ ಮೊದಲು ಟೆನಿಸ್ ಆಸ್ಟ್ರೇಲಿಯಾ ಆರು ಟೂರ್ನಿಗಳನ್ನು ಆಯೋಜಿಸಿದೆ. ಅದರಲ್ಲಿ ಯಾರಾ ವ್ಯಾಲಿ ಕೂಡ ಒಂದು.

ಕೊಕೊ ಗಫ್‌ಗೆ ಪ್ರಯಾಸದ ಜಯ: ಅಮೆರಿಕದ 16ರ ಬಾಲೆ ಕೋಕೊ ಗಫ್‌ ಡಬ್ಲ್ಯುಟಿಎ ಜಿಪ್ಸ್‌ಲ್ಯಾಂಡ್ ಟೂರ್ನಿಯ ಪಂದ್ಯದಲ್ಲಿ ಪ್ರಯಾಸದ ಗೆಲುವು ದಾಖಲಿಸಿದರು. ಸ್ಪೇನ್‌ನ ಜಿಲ್‌ ಟೀಚಾಮನ್ ಎದುರು ಕಣಕ್ಕಿಳಿದಿದ್ದ ಅವರು 6–3, 6–7, 7–6ರಿಂದ ಜಯ ಸಾಧಿಸಿದರು.

ಸುಮಿತ್ ನಗಾಲ್‌ಗೆ ಸೋಲು

ಮೆಲ್ಬರ್ನ್: ಮರೆ ರಿವರ್ ಓಪನ್ ಟೂರ್ನಿಯಲ್ಲಿ ಕಣಕ್ಕಿಳಿದಿರುವ ಭಾರತದ ಸುಮಿತ್ ನಗಾಲ್‌ 2021ರ ಋತುವನ್ನು ಸೋಲಿನೊಂದಿಗೆ ಆರಂಭಿಸಿದ್ದಾರೆ. ನಗಾಲ್‌ 2–6, 2–6ರಿಂದ ಲಿಥುವೇನಿಯಾದ ರಿಕಾರ್ಡಸ್‌ ಬೆರಾಂಕಿಸ್‌ ಅವರಿಗೆ ಮಣಿದರು.

ಎಟಿಪಿ ಸಿಂಗಲ್ಸ್ ಕ್ರಮಾಂಕದಲ್ಲಿ 139ನೇ ಸ್ಥಾನದಲ್ಲಿರುವ ನಗಾಲ್‌, ತಮಗೆ ದೊರೆತ ಎರಡು ಬ್ರೇಕ್ ಅವಕಾಶಗಳನ್ನು ಕೈಚೆಲ್ಲಿದರು. ಅಲ್ಲದೆ ನಾಲ್ಕು ಬಾರಿ ಸರ್ವ್ ಕಳೆದುಕೊಂಡರು.

ಈ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಕಣಕ್ಕಿಳಿಯಲಿದ್ದಾರೆ. ಡೆನ್ಮಾರ್ಕ್‌ನ ಫ್ರೆಡರಿಕ್‌ ನೆಲ್ಸನ್ ಜೊತೆಯಾಗಿ ಆಡಲಿದ್ದಾರೆ. ದಿವಿಜ್ ಶರಣ್ ಅವರು ಸ್ಲೋವೇಕಿಯಾದ ಇಗರ್‌ ಜೆಲೆನಾಯ್ ಅವರ ಜೊತೆಯಾಗಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.