ADVERTISEMENT

ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಎರಡನೇ ಸುತ್ತಿಗೆ ಸಿಂಧು, ಪ್ರಣಯ್‌

ಎಡವಿದ ಶ್ರೀಕಾಂತ್‌, ಸಮೀರ್‌

ಪಿಟಿಐ
Published 24 ಜುಲೈ 2019, 19:44 IST
Last Updated 24 ಜುಲೈ 2019, 19:44 IST
ಎಚ್‌.ಎಸ್‌.ಪ್ರಣಯ್‌– ಎಎಫ್‌ಪಿ ಚಿತ್ರ
ಎಚ್‌.ಎಸ್‌.ಪ್ರಣಯ್‌– ಎಎಫ್‌ಪಿ ಚಿತ್ರ   

ಟೋಕಿಯೊ: ಅಮೋಘ ಆಟವಾಡಿದ ಭಾರತದ ಅಗ್ರ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಹಾಗೂ ಎಚ್‌.ಎಸ್‌. ಪ್ರಣಯ್‌ ಬುಧವಾರ ಬಿಡಬ್ಲ್ಯುಎಫ್‌ ವರ್ಲ್ಡ್‌ ಟೂರ್‌ ಸೂಪರ್‌ 750 ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಎರಡನೇ ಸುತ್ತಿಗೆ ಲಗ್ಗೆಯಿಟ್ಟರು.

ಐದನೇ ಶ್ರೇಯಾಂಕದ ಸಿಂಧು, ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಚೀನಾದ ಶ್ರೇಯಾಂಕರಹಿತ ಆಟಗಾರ್ತಿ ಹಾನ್‌ ಯುಯ್‌ ವಿರುದ್ಧ 21–9, 21–17ರಿಂದ ಗೆಲುವಿನ ನಗೆ ಬೀರಿದರು. ಮುಂದಿನ ಸುತ್ತಿನಲ್ಲಿ ಅವರು ಜಪಾನ್‌ನ ಆಯಾ ಒಹೊರಿ ವಿರುದ್ಧ ಸೆಣಸುವರು. ಹೋದ ವಾರ ಮುಗಿದ ಇಂಡೊನೇಷ್ಯಾ ಓಪನ್‌ನಲ್ಲಿ ರನ್ನರ್‌ಅಪ್‌ ಆಗಿದ್ದ ಸಿಂಧು, ಸದ್ಯ ಅದ್ಭುತ ಲಯದಲ್ಲಿದ್ದಾರೆ.

ಕಿದಂಬಿ ಶ್ರೀಕಾಂತ್‌ ಹಾಗೂ ಸಮೀರ್‌ ವರ್ಮಾ ಅವರು ಟೂರ್ನಿಯಲ್ಲಿ ನಿರಾಸೆ ಕಂಡರು. ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್‌ ಅವರು ಭಾರತದವರೇ ಆದ ಎಚ್‌.ಎಸ್‌. ಪ್ರಣಯ್‌ ವಿರುದ್ಧ ಸೋತರು.

ADVERTISEMENT

ಕಠಿಣ ಹೋರಾಟ ನೀಡಿದ ಶ್ರೀಕಾಂತ್‌ ಮೊದಲ ಗೇಮ್‌ ವಶಪಡಿಸಿಕೊಂಡರೂ ಅದೇ ಲಯವನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾದರು. ತನಗಿಂತ ಕೆಳ ರ‍್ಯಾಂಕಿನ ಪ್ರಣಯ್‌ ವಿರುದ್ಧ 21–13, 11–21, 20–22 ರಿಂದ ಮಣಿಯಬೇಕಾಯಿತು. 56 ನಿಮಿಷಗಳಲ್ಲಿ ಈ ಹೋರಾಟ ಅಂತ್ಯಕಂಡಿತು.

ಎರಡನೇ ಸುತ್ತಿನ ಪಂದ್ಯದಲ್ಲಿ ಪ್ರಣಯ್‌ ಅವರು ಡೆನ್ಮಾರ್ಕ್‌ನ ರಾಸ್ಮಸ್‌ ಗೆಮ್ಕೆ ವಿರುದ್ಧ ಸೆಣಸುವರು. ಈ ಹಿಂದೆ ವಿಶ್ವದ ಅಗ್ರ ಕ್ರಮಾಂಕದ ಆಟಗಾರನಾಗಿದ್ದ ಶ್ರೀಕಾಂತ್‌, ಸ್ಥಿರತೆ ಕಾಯ್ದುಕೊಳ್ಳಲು ಪರದಾಟ ನಡೆಸಿದ್ದಾರೆ. ಇಂಡೊನೇಷ್ಯಾ ಓಪನ್‌ ಟೂರ್ನಿಯಲ್ಲಿ ಅವರು ಎರಡನೇ ಸುತ್ತಿನಲ್ಲಿ ನಿರ್ಗಮಿಸಿದ್ದರು.

ಮತ್ತೊಂದುಸಿಂಗಲ್ಸ್ ಪಂದ್ಯದಲ್ಲಿ ಶ್ರೇಯಾಂಕರಹಿತ ಆಟಗಾರ ಸಮೀರ್‌ ವರ್ಮಾ, ಡೆನ್ಮಾರ್ಕ್‌ನ ಆ್ಯಂಡರ್ಸ್ ಆ್ಯಂಟನ್ಸನ್‌ ವಿರುದ್ಧ 17–21, 12–21 ರಿಂದ ಮಣಿದರು. ಈ ಹಣಾಹಣಿ 46 ನಿಮಿಷಗಳಲ್ಲಿ ಮುಗಿಯಿತು.

ರಣಕಿ ರೆಡ್ಡಿ–ಚಿರಾಗ್‌ ಶೆಟ್ಟಿ ಶುಭಾರಂಭ: ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್‌ಶೆಟ್ಟಿ ಜೋಡಿ ಶುಭಾರಂಭ ಮಾಡಿದೆ. ಮೊದಲ ಸುತ್ತಿನಲ್ಲಿ ಇಂಗ್ಲೆಂಡ್‌ನ ಮಾರ್ಕಸ್‌ ಎಲ್ಲಿಸ್‌ ಹಾಗೂ ಕ್ರಿಸ್‌ ಲಾಂಗ್ರಿಡ್ಜ್‌ ಎದುರು 21–16, 21–17ರಿಂದ ವಿಜಯಿಯಾದರು.

ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್‌.ಸಿಕ್ಕಿ ರೆಡ್ಡಿ ಜೋಡಿ ಮೊದಲ ಸುತ್ತಿನಲ್ಲೇ ಹೊರಬಿತ್ತು. ಕೊರಿಯಾದ ಸೋ ಯೊಂಗ್‌ ಕಿಮ್‌ ಹಾಗೂ ಹೀ ಯಾಂಗ್‌ ಕಾಂಗ್‌ ವಿರುದ್ಧ 16–21, 14–21ರಿಂದ ಸೋಲು ಅನುಭವಿಸಿತು.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಣವ್‌ ಜೆರಿ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ ಅಭಿಯಾನಕ್ಕೆತೆರೆ ಬಿದ್ದಿದೆ. ಚೀನಾದ ಜೋಡಿ ಜೆಂಡ್‌ ಸಿ ವೇಯ್‌ ಹಾಗೂ ಹುವಾಂಗ್‌ ಯಾ ಕಿಯಾಂಗ್‌ ವಿರುದ್ಧ 11–21, 14–21ರಿಂದ ಭಾರತದ ಜೋಡಿ ಸೋತಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.