ADVERTISEMENT

ಟೆನಿಸ್‌: ಸ್ಟೀಫನ್‌ಗೆ ‘ಡಬಲ್’ ಸಂಭ್ರಮ

ದಿಗಂತ್ ಜೊತೆಗೂಡಿ ಡಬಲ್ಸ್ ಪ್ರಶಸ್ತಿ ಗಳಿಸಿದ ಆಟಗಾರ; ಶ್ರವ್ಯ ಬಾಲಕಿಯರ ವಿಭಾಗದ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 15:02 IST
Last Updated 12 ಫೆಬ್ರುವರಿ 2021, 15:02 IST
ಶ್ರವ್ಯ ನುಂಬುರಿ ಮತ್ತು ಸ್ಟೀಫನ್ ಡೈಲನ್
ಶ್ರವ್ಯ ನುಂಬುರಿ ಮತ್ತು ಸ್ಟೀಫನ್ ಡೈಲನ್   

ಮಂಡ್ಯ: ಅಗ್ರ ಶ್ರೇಯಾಂಕದ ಆಟಗಾರ ಸ್ಟೀಫನ್ ಡೈಲನ್ ರೆಮಿಡಿಯೊಸ್ ಇಲ್ಲಿ ನಡೆದ ಟಾಪ್ ಸರ್ವ್ ಟೆನಿಸ್ ಅಕಾಡೆಮಿ ಆಶ್ರಯದ ಎಐಟಿಎ ಟ್ಯಾಲೆಂಟ್ ಸೀರಿಸ್‌ ಪಿಇಟಿ ಕಪ್ ಟೆನಿಸ್ ಟೂರ್ನಿಯಲ್ಲಿ ‘ಡಬಲ್’ ಪ್ರಶಸ್ತಿ ಸಾಧನೆಯೊಂದಿಗೆ ಸಂಭ್ರಮಿಸಿದರು. ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಶ್ರವ್ಯ ನುಂಬುರಿ ಅಗ್ರ ಶ್ರೇಯಾಂಕದ ಕಾರ್ತೀಕ ಪದ್ಮಕುಮಾರ್ ಅವರನ್ನು ಮಣಿಸಿದರು.

ಶುಕ್ರವಾರ ನಡೆದ 12 ವರ್ಷದೊಳಗಿನ ಬಾಲಕರ ಫೈನಲ್ ಪಂದ್ಯದಲ್ಲಿ ರಣವೀರ್ ಸಿಂಗ್ ಪನ್ನು ಎದುರು ಸ್ಟೀಫನ್7-5, 6-3ರಲ್ಲಿ ಜಯ ಗಳಿಸಿ ಈ ವಯೋಮಾನದ ವಿಭಾಗದಲ್ಲಿ ಚೊಚ್ಚಲ ಪ್ರಶಸ್ತಿಯ ಸವಿಯುಂಡರು. ಡಬಲ್ಸ್‌ನಲ್ಲಿ ದಿಗಂತ್ ಜೊತೆಗೂಡಿ 6-1, 6-3ರಲ್ಲಿ ಆಯುಷ್ ಆನಂದ್ ಮತ್ತು ವೇದಾಂತ್ ಎನ್ ಜೋಡಿಯನ್ನು ಮಣಿಸಿದರು.

ಫೈನಲ್‌ನಲ್ಲಿ ತಾವು ಅನುಸರಿಸಲಿರುವ ರಣತಂತ್ರವನ್ನುಗುರುವಾರ ಸಂಜೆ ಸ್ಪಷ್ಟಪಡಿಸಿದ್ದ ಸ್ಟೀಫನ್ ‘ಎದುರಾಳಿಯ ಆಟವನ್ನು ಚೆನ್ನಾಗಿ ಬಲ್ಲೆ. ನಾನು ಫೋರ್‌ಹ್ಯಾಂಡ್‌ನಲ್ಲಿ ಬಲಶಾಲಿ ಹೊಡೆತಗಳನ್ನು ಹೊಡೆಯಬಲ್ಲೆ. ಆದ್ದರಿಂದ ಫೈನಲ್‌ನಲ್ಲಿ ಗೆಲ್ಲುವುದು ಕಷ್ಟಕರವಾಗಲಾರದು’ ಎಂದು ಹೇಳಿದ್ದರು. ಈ ಮಾತಿಗೆ ತಕ್ಕಂತೆ ಕಣದಲ್ಲಿ ಕಾದಾಡಿದ ಅವರು ಮೊದಲ ಸೆಟ್‌ನ ಒಂದು ಹಂತದಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದರೂ ಎದೆಗುಂದದೆ ಜಯ ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನಲ್ಲಿ ಎದುರಾಳಿಯನ್ನು ಕಂಗೆಡಿಸಿದರು.

ADVERTISEMENT

ಆರಂಭದಲ್ಲಿ ಎರಡು ಗೇಮ್‌ಗಳನ್ನು ಗೆದ್ದು ಮುನ್ನಡೆ ಸಾಧಿಸಿದ ಸ್ಟೀಫನ್‌ಗೆ ಎರಡನೇ ಶ್ರೇಯಾಂಕಿತ ರಣವೀರ್ ತಿರುಗೇಟು ನೀಡಿ 2–2ರ ಸಮಬಲ ಸಾಧಿಸಿದರು. ಪಟ್ಟು ಬಿಡದ ಸ್ಟೀಫನ್ ಮುಂದಿನ ಮೂರು ಗೇಮ್‌ಗಳನ್ನು ಗೆದ್ದು ಸೆಟ್‌ನಲ್ಲಿ ಸುಲಭ ಗೆಲುವು ಸಾಧಿಸುವ ಭರವಸೆ ಮೂಡಿಸಿದರು. ಆದರೆ ಛಲದಿಂದ ಕಾದಾಡಿದ ರಣವೀರ್ 5–5ರ ಸಮಬಲ ಸಾಧಿಸಿ ಮೆಚ್ಚುಗೆ ಗಳಿಸಿದರು. 11 ವರ್ಷದ ಸ್ಟೀಫನ್ ಚೇತರಿಸಿಕೊಂಡು ಎದುರಾಳಿಯನ್ನು ಮಣಿಸಿದರು.

ಎರಡನೇ ಸೆಟ್‌ನಲ್ಲಿ ಸ್ಟೀಫನ್ ಅಮೋಘ ಆಟವಾಡಿ 5–2ರ ಮುನ್ನಡೆ ಗಳಿಸಿದರು. ನಂತರ ಹಿಂತಿರುಗಿ ನೋಡದ ಅವರು ಸೆಟ್ ಹಾಗೂ ಪಂದ್ಯ ಗೆದ್ದುಕೊಂಡರು.

ಬಾಲಕಿಯರ ಸಿಂಗಲ್ಸ್‌ ವಿಭಾಗದಲ್ಲಿ ತಮಿಳುನಾಡಿನ ಶ್ರವ್ಯ ಕರ್ನಾಟಕದ ಎದುರಾಳಿಯನ್ನು 6-3, 6-0ರಲ್ಲಿ ಮಣಿಸಿ 12 ವರ್ಷದೊಳಗಿನವರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ದಿಶಾ ಕುಮಾರ್ ಮತ್ತು ಕಾರ್ತೀಕ ಪದ್ಮಕುಮಾರ್ ಜೋಡಿ ಸಾರಾ ಮತ್ತು ಶ್ರವ್ಯ ನುಂಬುರಿ ವಿರುದ್ಧ ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.