ADVERTISEMENT

ಟೆನಿಸ್‌: ಸುರಭಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 17:43 IST
Last Updated 18 ಜುಲೈ 2019, 17:43 IST
ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ಸುರಭಿ ಶ್ರೀನಿವಾಸ್‌
ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ಸುರಭಿ ಶ್ರೀನಿವಾಸ್‌   

ಬೆಂಗಳೂರು: ಅಪೂರ್ವ ಸಾಮರ್ಥ್ಯ ತೋರಿದ ಕರ್ನಾಟಕದ ಸುರಭಿ ಶ್ರೀನಿವಾಸ್‌, ಪಂಜಾಬ್‌ನ ಜಲಂದರ್‌ನಲ್ಲಿ ನಡೆದ ಎಐಟಿಎ 16 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ ಸೀರಿಸ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಗುರುವಾರ ನಡೆದ ಬಾಲಕಿಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ರಾಜ್ಯದ ಆಟಗಾರ್ತಿ 6–3, 6–2 ನೇರ ಸೆಟ್‌ಗಳಿಂದ ಅಸ್ಸಾಂನ ತನಿಷ್ಕಾ ಪಾಲಾರ್‌ ಅವರನ್ನು ಸೋಲಿಸಿದರು.

ಬೆಂಗಳೂರಿನ ಲಿಟಲ್‌ ಫ್ಲವರ್‌ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಸುರಭಿ, ಮೊದಲ ಸೆಟ್‌ನ ಶುರುವಿನಿಂದಲೂ ಪ್ರಾಬಲ್ಯ ಮೆರೆದರು. ಎರಡನೇ ಸೆಟ್‌ನಲ್ಲೂ ರಾಜ್ಯದ ಆಟಗಾರ್ತಿ ಶರವೇಗದ ಸರ್ವ್‌ ಮತ್ತು ಬಲಿಷ್ಠ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ADVERTISEMENT

ಇದಕ್ಕೂ ಮೊದಲು ನಡೆದಿದ್ದ ನಾಲ್ಕರ ಘಟ್ಟದ ಹೋರಾಟದಲ್ಲಿ ಸುರಭಿ 6–1, 4–6, 6–3ರಲ್ಲಿ ಮಹಾರಾಷ್ಟ್ರದ ಸಾರಾ ಅವರನ್ನು ಸೋಲಿಸಿದ್ದರು.

ಮೊದಲ ಸೆಟ್‌ನಲ್ಲಿ ಸುರಭಿ ಸುಲಭವಾಗಿ ಗೆದ್ದರು. ಆದರೆ ಮರು ಸೆಟ್‌ನಲ್ಲಿ ತಿರುಗೇಟು ನೀಡಿದ ಸಾರಾ 1–1 ಸಮಬಲಕ್ಕೆ ಕಾರಣರಾದರು. ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನಲ್ಲಿ ಛಲದಿಂದ ಹೋರಾಡಿದ ಕರ್ನಾಟಕದ ಆಟಗಾರ್ತಿ ಗೆಲುವಿನ ತೋರಣ ಕಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.