ADVERTISEMENT

ಸಬಲೆಂಕಾ ವಿರುದ್ಧ ಕಿರ್ಗಿಯೋಸ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 20:15 IST
Last Updated 29 ಡಿಸೆಂಬರ್ 2025, 20:15 IST

ದುಬೈ (ಎಪಿ): ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ ಅವರು ‘ಬ್ಯಾಟಲ್‌ ಆಫ್‌ ಸೆಕ್ಸಸ್‌’ ಟೆನಿಸ್‌ ಪ್ರದರ್ಶನ ಪಂದ್ಯದ ತಾಜಾ ಅವತರಣಿಕೆಯಲ್ಲಿ ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ ಅರಿನಾ ಸಬಲೆಂಕಾ ಅವರನ್ನು 6–3, 6–3 ರಿಂದ ಸೋಲಿಸಿದರು.

ಕೊಕಾಕೋಲಾ ಅರೇನಾದಲ್ಲಿ ಭಾನುವಾರ ರಾತ್ರಿ ನಡೆದ ಈ ಪಂದ್ಯವು ಲಿಂಗ ಸಮಾನತೆಯ ಆಶಯದ ಬದಲು ಲಘು ಮನರಂಜನೆ ಒದಗಿಸಿತು. 17,000 ಪ್ರೇಕ್ಷಕರ ಸಾಮರ್ಥ್ಯದ ಕ್ರೀಡಾಂಗಣ ಭರ್ತಿಯಾಗಿತ್ತು. ಅತಿ ಹೆಚ್ಚು ಬೆಲೆಯ ಟಿಕೆಟ್‌ಗೆ ಸುಮಾರು ₹72,000 ನಿಗದಿಪಡಿಸಲಾಗಿತ್ತು.

2022ರ ವಿಂಬಲ್ಡನ್ ಟೂರ್ನಿಯ ರನ್ನರ್ ಅಪ್ ಆಗಿರುವ ಕಿರ್ಗಿಯೋಸ್‌ ಅವರು ‌ಮಣಿಕಟ್ಟು ಮತ್ತು ಮೊಣಗಂಟಿನ ಗಾಯದ ಸಮಸ್ಯೆಗಳಿಂದಾಗಿ ಮೂರು ವರ್ಷಗಳ ಅವಧಿಯಲ್ಲಿ ಆರು ಎಟಿಪಿ ಟೂರ್ ಪಂದ್ಯಗಳನ್ನಷ್ಟೇ ಆಡಿದ್ದರು. ಇಬ್ಬರಿಗೂ ಪಾಯಿಂಟ್‌ ಗಳಿಕೆಗೆ ಎರಡು ಸರ್ವ್‌ ಬದಲು ಒಂದು ಸರ್ವ್‌ ಅವಕಾಶ ಮಾತ್ರ ನೀಡಲಾಯಿತು. ಬೆಲರೂಸ್‌ನ ಆಟಗಾರ್ತಿ ಸಬಲೆಂಕಾ ಅವರ ಬದಿಯ ಅಂಕಣದ ಸುತ್ತಳತೆ ಶೇ10ರಷ್ಟು ಕಡಿಮೆಯಿತ್ತು.

ADVERTISEMENT

ಮೂರನೇ ಮ್ಯಾಚ್‌ ಪಾಯಿಂಟ್‌ನಲ್ಲಿ ಗೆಲುವು ಪಡೆದಾಗ 30 ವರ್ಷದ ಕಿರ್ಗಿಯೋಸ್ ಬೆವರಿನಿಂದ ತೊಯ್ದು ತೊಪ್ಪೆಯಾಗಿದ್ದರು.

‌‘ಇದು ಟೆನಿಸ್‌ ಕ್ರೀಡೆಗೆ ಮಹತ್ವದ ಸೋಪಾನ’ ಎಂದು ಕಿರ್ಗಿಯೋಸ್ ಹೇಳಿದರು.

‘ನಾನು ಆಟವನ್ನು ಆಸ್ವಾದಿಸಿದೆ. ಜನವರಿಯಲ್ಲಿ ನಡೆಯುವ ಆಸ್ಟ್ರೇಲಿಯನ್ ಓಪನ್‌ಗೆ ಒಳ್ಳೆಯ ಸಿದ್ಧತೆಯಾಯಿತು. ಮುಯ್ಯಿ ತೀರಿಸಲು ಮತ್ತೊಮ್ಮೆ ಕಿರ್ಗಿಯೋಸ್ ಜೊತೆ ಆಡುವೆ’ ಎಂದು 27 ವರ್ಷ ವಯಸ್ಸಿನ ಆಟಗಾರ್ತಿ ಹೇಳಿದರು.

1973ರಲ್ಲಿ ಮೊದಲ ‘ಬ್ಯಾಟಲ್ ಆಫ್‌ ಸೆಕ್ಸಸ್‌’ ಹೆಸರಿನಲ್ಲಿ ನಡೆದ ಪಂದ್ಯದಲ್ಲಿ ಅಮೆರಿಕದ ಬಿಲ್ಲಿ ಜೀನ್‌ ಕಿಂಗ್ ಅವರು ಸ್ವದೇಶದ ಬಾಬಿ ರಿಗ್ಸ್‌ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದ್ದರು. ಆ ಪಂದ್ಯ ಹೌಸ್ಟನ್‌ನ ಆಸ್ಟ್ರಡೋಮ್‌ನಲ್ಲಿ ನಡೆದಿತ್ತು. ಮಹಿಳೆಯರಿಗೂ ಸಮಾನ ಬಹುಮಾನ ಹಣ ನೀಡಬೇಕು ಎಂದು ಬಿಲ್ಲಿ ಜೀನ್ ಕಿಂಗ್ ಅಭಿಯಾನ ನಡೆಸುತ್ತಿದ್ದ ವೇಳೆಯೇ ಆ ಪಂದ್ಯ ನಡೆದಿತ್ತು. 52 ವರ್ಷಗಳ ನಂತರ ಮತ್ತೊಮ್ಮೆ ಈ ಸರಣಿಯ ಪಂದ್ಯ ನಡೆದರೂ ಆ ಪಂದ್ಯದಷ್ಟು ಪ್ರಾಮುಖ್ಯ ಪಡೆಯಲಿಲ್ಲ. ಯುವ
ಪ್ರೇಕ್ಷಕರನ್ನು ಸೆಳೆದು ಹಣ ಮಾಡಲು ಬಯಸಿದಂತೆ ಕಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.