ಕಾರ್ಲೋಸ್ ಅಲ್ಕರಾಜ್
ನ್ಯೂಯಾರ್ಕ್ (ಎಎಫ್‌ಪಿ): ಹೊಸ ಕೇಶವಿನ್ಯಾಸದೊಂದಿಗೆ ಕಣಕ್ಕಿಳಿದ ಸ್ಪೇನ್ ತಾರೆ ಕಾರ್ಲೋಸ್ ಅಲ್ಕರಾಜ್ ಅವರು ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಸೋಮವಾರ ಶುಭಾರಂಭ ಮಾಡಿದರು. ಆದರೆ, ಆತಿಥೇಯ ದೇಶದ ಅನುಭವಿ ಆಟಗಾರ್ತಿಯರಾದ ವೀನಸ್ ವಿಲಿಯಮ್ಸ್ ಮತ್ತು ಮ್ಯಾಡಿಸನ್ ಕೀಸ್ ಮೊದಲ ಸುತ್ತು ದಾಟಲು ವಿಫಲರಾದರು.
ಎರಡನೇ ಶ್ರೇಯಾಂಕದ ಅಲ್ಕರಾಜ್ ಅವರು ಆರ್ಥರ್ ಆ್ಯಷ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಸುತ್ತಿನ ಹಣಾಹಣಿಯಲ್ಲಿ 6-4, 7-5, 6-4ರಿಂದ ಅತಿಥೇಯ ದೇಶದ ರೀಲಿ ಒಪೆಲ್ಕಾ ಅವರನ್ನು ಹಿಮ್ಮೆಟ್ಟಿಸಿ ಅಭಿಯಾನ ಆರಂಭಿಸಿದರು. ವಿಶ್ವದ 66ನೇ ಕ್ರಮಾಂಕದ ಅಜಾನುಬಾಹು ಆಟಗಾರನನ್ನು ಮಣಿಸಲು ಅಲ್ಕರಾಜ್ 2 ಗಂಟೆ 5 ನಿಮಿಷ ತೆಗೆದುಕೊಂಡರು. 27 ವರ್ಷದ ಒಪೆಲ್ಕಾ 6 ಅಡಿ 11 ಇಂಚು
ಎತ್ತರವಿದ್ದಾರೆ.
22 ವರ್ಷದ ಅಲ್ಕರಾಜ್ ಈತನಕ ಗೆದ್ದಿರುವ ಐದು ಗ್ರ್ಯಾನ್‌ಸ್ಲಾಮ್ ಕಿರೀಟಗಳ ಪೈಕಿ ಮೊದಲ ಪ್ರಶಸ್ತಿಯನ್ನು 2022ರಲ್ಲಿ ಇಲ್ಲೇ ಮುಡಿಗೇರಿಸಿಕೊಂಡಿ ದ್ದರು. ಫ್ರೆಂಚ್ ಓಪನ್ ಮತ್ತು
ವಿಂಬಲ್ಡನ್‌ನಲ್ಲಿ ತಲಾ ಎರಡು ಬಾರಿ ಅವರು ಚಾಂಪಿಯನ್ ಆಗಿದ್ದಾರೆ.
ಮೂರು ವರ್ಷಗಳ ಬಳಿಕ ಇಲ್ಲಿ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಅಲ್ಕರಾಜ್ ಅವರಿಗೆ ಎರಡನೇ ಸುತ್ತಿನಲ್ಲಿ ಇಟಲಿಯ ಮಟ್ಟಿಯಾ ಬೆಲ್ಲುಸಿ ಎದುರಿಸಲಿದ್ದಾರೆ.
ವೀನಸ್‌ಗೆ ನಿರಾಸೆ: ಟೂರ್ನಿಗೆ ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದ 45 ವರ್ಷದ ವೀನಸ್ ಮೂರು ಸೆಟ್‌ಗಳ ಹೋರಾಟ ನಡೆಸಿ ಸೋಲೊಪ್ಪಿಕೊಂಡರು. ಮಹಿಳೆಯರ ಸಿಂಗಲ್ಸ್‌ನಲ್ಲಿ 11ನೇ ಶ್ರೇಯಾಂಕದ ಕರೋಲಿನಾ ಮುಚೋವಾ (ಝೆಕ್ ರಿಪಬ್ಲಿಕ್) 6-3, 2-6, 6-1ರಿಂದ ವೀನಸ್ ಅವರನ್ನು ಮಣಿಸಿ, ಎರಡನೇ ಸುತ್ತು ಪ್ರವೇಶಿಸಿದರು.
ಏಳು ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದಿರುವ ಅಮೆರಿಕದ ವೀನಸ್ ಅವರು ಅನಾರೋಗ್ಯದ ಕಾರಣಕ್ಕೆ 16 ತಿಂಗಳುಗಳಿಂದ ಟೆನಿಸ್ ಅಂಕಣದಿಂದ ದೂರವಿದ್ದರು. ಹೋದ ತಿಂಗಳು ಡಬ್ಲ್ಯುಟಿಎನಲ್ಲಿ ಆಡಿ ಒಂದು ಪಂದ್ಯ ಜಯಿಸಿದ್ದರು.
ಆಸ್ಟ್ರೇಲಿಯಾ ಓಪನ್ ಹಾಲಿ ಚಾಂಪಿಯನ್, ಆರನೇ ಶ್ರೇಯಾಂಕದ ಕೀಸ್ ಅವರಿಗೂ ಆಘಾತಕಾರಿ ಸೋಲು ಎದುರಾಯಿತು. ಶ್ರೇಯಾಂಕರಹಿತ ಆಟಗಾರ್ತಿ ರೆನಾಟಾ ಜರಾಜುವಾ (ಮೆಕ್ಸಿಕೊ) 6-7 (10/12), 7-6 (7/3), 7-5ರಿಂದ ಅಮೆರಿಕದ ತಾರೆಯನ್ನು ಹಿಮ್ಮೆಟ್ಟಿಸಿದರು.
ಪೆಟ್ರಾ ವಿದಾಯ: ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ (ಝೆಕ್ ಗಣರಾಜ್ಯ) ಅವರೂ ಮೊದಲ ಸುತ್ತಿನಲ್ಲೇ ಸೋತು ಅಭಿಯಾನ ಮುಗಿಸಿದರು. ಫ್ರಾನ್ಸ್‌ನ ಡಯೇನ್ ಪ್ಯಾರಿ 6-1, 6-0ರಿಂದ ಪೆಟ್ರಾ ಅವರನ್ನು ಸೋಲಿಸಿದರು.
35 ವರ್ಷದ ಪೆಟ್ರಾ ಅವರು ಈ ಟೂರ್ನಿಯೊಂದಿಗೆ ವೃತ್ತಿಜೀವನಕ್ಕೆ ವಿದಾಯ ಹೇಳುವುದಾಗಿ ಈ ಮೊದಲೇ ಪ್ರಕಟಿಸಿದ್ದರು. ಪಂದ್ಯದ ನಂತರ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ ಕಣ್ಣೀರು ಹಾಕಿದರು. ಅವರು ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ 2011 ಮತ್ತು 2014ರಲ್ಲಿ ಪ್ರಶಸ್ತಿ ಗೆದ್ದಿದ್ದರು.
ಪುರುಷರ ಸಿಂಗಲ್ಸ್‌ನಲ್ಲಿ ಕ್ವಾಲಿಫೈಯರ್ ಆಟಗಾರ ಕೋಲ್ಮನ್ ವಾಂಗ್ ಎರಡನೇ ಸುತ್ತು ಪ್ರವೇಶಿಸಿದರು. ವಾಂಗ್ 6-4, 7-5, 7-6 (7/4) ರಿಂದ ಅಮೆರಿಕದ ಅಲೆಕ್ಸಾಂಡರ್ ಕೊವಾಸೆವಿಕ್ ಅವರನ್ನು ಮಣಿಸಿದರು. ಈ ಮೂಲಕ 21 ವರ್ಷದ ವಾಂಗ್ ಅವರು ಓಪನ್ ಯುಗದಲ್ಲಿ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪಂದ್ಯ ಗೆದ್ದ ಹಾಂಗ್‌ಕಾಂಗ್‌ನ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರವಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.