ADVERTISEMENT

ತಡರಾತ್ರಿ ಗೆದ್ದ ಪಾಲ್ ಮೂರನೇ ಸುತ್ತಿಗೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 19:08 IST
Last Updated 29 ಆಗಸ್ಟ್ 2025, 19:08 IST
ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧದ ಪಂದ್ಯದಲ್ಲಿ ಚೆಂಡನ್ನು ರಿಟರ್ನ್ ಮಾಡಿದ ಟಾಮಿ ಪಾಲ್ –ಪಿಟಿಐ ಚಿತ್ರ
ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧದ ಪಂದ್ಯದಲ್ಲಿ ಚೆಂಡನ್ನು ರಿಟರ್ನ್ ಮಾಡಿದ ಟಾಮಿ ಪಾಲ್ –ಪಿಟಿಐ ಚಿತ್ರ   

ನ್ಯೂಯಾರ್ಕ್ (ಎಎಫ್‌ಪಿ): ಅಮೆರಿಕದ ಟಾಮಿ ಪಾಲ್ ಮತ್ತು ಪೋರ್ಚುಗಲ್‌ನ ನ್ಯೂನೊ ಬೊರ್ಗೆಸ್‌ ನಡುವಣ ಅಮೆರಿಕ ಓಪನ್ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿನ ಸುದೀರ್ಘ ಪಂದ್ಯ ಶುಕ್ರವಾರ ಬೆಳಗಿನ ಜಾವ ಮುಗಿಯಿತು. 14ನೇ ಶ್ರೇಯಾಂಕದ ಪಾಲ್ ಈ ಪಂದ್ಯವನ್ನು ಐದು ಸೆಟ್‌ಗಳಲ್ಲಿ ಹರಸಾಹಸದಿಂದ ಗೆದ್ದು ಮೂರನೇ ಸುತ್ತಿಗೆ ಕಾಲಿಟ್ಟರು.

4 ಗಂಟೆ 25 ನಿಮಿಷ ನಡೆದ ಈ ಪಂದ್ಯದಲ್ಲಿ ಪಾಲ್ 7–6 (8–6), 6–3, 5–7, 5–7, 7–5 ರಲ್ಲಿ 28 ವರ್ಷ ಎದುರಾಳಿಯೆದುರು ವಿಜೇತರಾದರು. ಗುರುವಾರ ರಾತ್ರಿ 9.15ಕ್ಕೆ ಶುರುವಾದ ಪಂದ್ಯ  ಶುಕ್ರವಾರ ಬೆಳಗಿನ ಜಾವ 1ಗಂಟೆ 46 ನಿಮಿಷಕ್ಕೆ ಮುಗಿಯಿತು! ವಿಶ್ವ ಕ್ರಮಾಂಕದಲ್ಲಿ 41ನೇ ಸ್ಥಾನದಲ್ಲಿರುವ ಬೋರ್ಗೆಸ್‌ ಯಾವ ಹಂತದಲ್ಲೂ ಸುಲಭವಾಗಿ ಬಿಟ್ಟುಕೊಡಲಿಲ್ಲ.

 ‘ಎಂದೂ ನಿದ್ರಿಸದ ನಗರಿ’ ಎಂಬ ಉಪಮೆ ಹೊಂದಿರುವ ನ್ಯೂಯಾರ್ಕ್‌ನ ಆರ್ಥರ್ ಆ್ಯಷ್‌ ಕ್ರೀಡಾಂಣಗದಲ್ಲಿ ಇವರಿಬ್ಬರ ಪೈಪೋಟಿ ಐದನೇ ಸೆಟ್‌ಗೆ ಬೆಳೆದಾಗ ಪ್ರೇಕ್ಷಕರಲ್ಲಿ ಬಹುತೇಕರು ಜಾಗ ಖಾಲಿಮಾಡಿದ್ದರು! 

ADVERTISEMENT

28 ವರ್ಷ ವಯಸ್ಸಿನ ಟಾಮಿ ಪಾಲ್ ಮೂರನೇ ಸುತ್ತಿನಲ್ಲಿ ಕಜಾಕಸ್ತಾನದ ಅಲೆಕ್ಸಾಂಡರ್‌ ಬುಬ್ಲಿಕ್ ಅವರನ್ನು ಎದುರಿಸುವರು. ಬುಬ್ಲಿಕ್ 23ನೇ ಶ್ರೇಯಾಂಕ ಗಳಿಸಿದ್ದಾರೆ.

ಟೆನಿಸ್‌ನಲ್ಲಿ ತಡರಾತ್ರಿ ಪಂದ್ಯ ಮುಗಿಯುವುದು ಆಗಾಗ ಘಟಿಸುತ್ತಿವೆ. ಅದೂ ಆಸ್ಟ್ರೇಲಿಯಾ ಓಪನ್ ಮತ್ತು ಅಮೆರಿಕ ಓಪನ್ ಟೂರ್ನಿಗಳಲ್ಲಿ. 2022ರ ಅಮೆರಿಕ ಓಪನ್‌ ಕ್ವಾರ್ಟರ್‌ಫೈನಲ್‌ನಲ್ಲಿ ಕಾರ್ಲೋಸ್‌ ಅಲ್ಕರಾಜ್ ಮತ್ತು ಯಾನಿಕ್ ಸಿನ್ನರ್ ನಡುವಣ ದೀರ್ಘ ಪಂದ್ಯ ಮುಗಿದಾಗ ಬೆಳಗಿನ ಜಾವ 2.50 ನಿಮಿಷಗಳಾಗಿತ್ತು.

ಶ್ವಾಂಟೆಕ್ ಮುನ್ನಡೆ: ಮಹಿಳೆಯರ ಸಿಂಗಲ್ಸ್‌ನಲ್ಲಿ, ವಿಶ್ವದ ಎರಡನೇ ಕ್ರಮಾಂಕದ ಆಟಗಾರ್ತಿ ಇಗಾ ಶ್ವಾಂಟೆಕ್‌ ಮಹಿಳೆರಯ ಸಿಂಗಲ್ಸ್ ಮೂರನೇ ಸುತ್ತಿಗೆ ಮುನ್ನಡೆದರು. ಅವರು 6–1, 4–6, 6–4 ರಿಂದ 66ನೇ ಕ್ರಮಾಂಕದ ಸುಝಾನ್ ಲೆಮೆನ್ಸ್ (ನೆದರ್ಲೆಂಡ್ಸ್‌) ಅವರನ್ನು ಸೋಲಿಸಿದರು.

2022ರಲ್ಲಿ ಇಲ್ಲಿ ಚಾಂಪಿಯನ್ ಆಗಿದ್ದ ಶ್ವಾಂಟೆಕ್‌ ಅಂತಿಮ 16ರ ಘಟ್ಟಕ್ಕೆ ತಲುಪುವ ಹಾದಿಯಲ್ಲಿ 29ನೇ ಶ್ರೇಯಾಂಕದ ಅನ್ನಾ ಕಲಿನ್‌ಸ್ಕಾಯಾ (ರಷ್ಯಾ) ಅವರ ಸವಾಲನ್ನು ಎದುರಿಸಬೇಕಾಗಿದೆ.

ವಾಂಗ್ ಸಾಹಸ: ಅರ್ಹತಾ ಸುತ್ತಿನ ಮೂಲಕ ಪ್ರವೇಶ ಪಡೆದಿದ್ದ ಹಾಂಗ್‌ಕಾಂಗ್‌ನ 21 ವರ್ಷ ವಯಸ್ಸಿನ ಕೋಲ್ಮನ್ ವಾಂಗ್ ಅವರು 32ರ ಸುತ್ತನ್ನು ತಲುಪಿದರು. ವಾಂಗ್‌ 7–6 (7–5), 6–2, 4–6, 6–4 ರಿಂದ ಆಸ್ಟ್ರೇಲಿಯಾದ ಆ್ಯಡಂ ವಾಲ್ಟನ್ ಅವರನ್ನು ಹಿಮ್ಮೆಟ್ಟಿಸಿದರು.

16ರ ಸುತ್ತಿಗೆ ರಿಬಾಕಿನಾ: ಒಂಬತ್ತನೇ ಶ್ರೇಯಾಂಕದ ಆಟಗಾರ್ತಿ ಎಲೆನಾ ರಿಬಾಕಿನಾ ಮಹಿಳಾ ಸಿಂಗಲ್ಸ್ 16ರ ಸುತ್ತಿಗೆ ದಾಪುಗಾಲಿಟ್ಟರು. ಕಜಕಸ್ತಾನದ ಆಟಗಾರ್ತಿ, ಶುಕ್ರವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಬ್ರಿಟನ್‌ನ ಎಮ್ಮಾ ರಾಡುಕಾನು ಅವರನ್ನು 6–1, 6–2 ರಿಂದ ಸುಲಭವಾಗಿ ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.