ಮೈಕೆಲ್ ವೀನಸ್, ಯೂಕಿ ಭಾಂಬ್ರಿ
(ಚಿತ್ರ ಕೃಪೆ: X/@StarSportsIndia)
ನ್ಯೂಯಾರ್ಕ್: ಭಾರತದ ಯುಕಿ ಭಾಂಬ್ರಿ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಸೆಮಿಫೈನಲ್‌ಗೆ ಮುನ್ನಡೆದರು. ಅಮೆರಿಕ ಓಪನ್ ಪುರುಷರ ಡಬಲ್ಸ್‌ನಲ್ಲಿ ನ್ಯೂಜಿಲೆಂಡ್‌ನ ಮೈಕೆಲ್ ವೀನಸ್ ಜೊತೆಗೂಡಿದ ಅವರು ಬುಧವಾರ ರಾತ್ರಿ 11ನೇ ಶ್ರೇಯಾಂಕದ ಎದುರಾಳಿಗಳ ಮೇಲೆ ಜಯಗಳಿಸಿದರು.
ಕೋರ್ಟ್ ನಂಬರ್ 17ರಲ್ಲಿ ಭಾಂಬ್ರಿ– ಮೈಕೆಲ್ ಜೋಡಿ 6–3, 6–7 (8), 6–3 ರಿಂದ ಕ್ರೊವೇಷ್ಯಾದ ಮೆಟ್ಕಿಕ್– ಅಮೆರಿಕದ ರಾಜೀವ್ ರಾಮ್ ಜೋಡಿಯನ್ನು ಸೋಲಿಸಿತು. ಇದಕ್ಕೆ ಮೊದಲು ಇಂಡೊ–ನ್ಯೂಜಿಲೆಂಡ್ ಜೋಡಿ 16ರ ಸುತ್ತಿನಲ್ಲಿ ನಾಲ್ಕನೇ ಶ್ರೇಯಾಂಕದ ಕೆವಿನ್ ಕ್ರಾವಿಟ್ಝ್–ಟಿಮ್ ಪುಯೆಟ್ಝ್ ಜೋಡಿಯನ್ನು ಮಣಿಸಿತ್ತು.
ಸೆಮಿಫೈನಲ್‌ನಲ್ಲಿ ಭಾಂಬ್ರಿ– ಮೈಕೆಲ್ ಜೋಡಿ ಆರನೇ ಶ್ರೇಯಾಂಕದ ಜೋ ಸ್ಯಾಲಿಸ್ಬರಿ– ನೀಲ್ ಸ್ಕುಪ್‌ಸ್ಕಿ (ಬ್ರಿಟನ್) ಜೋಡಿಯನ್ನು ಎದುರಿಸಲಿದೆ.
33 ವರ್ಷದ ಭಾಂಬ್ರಿ ಅವರಿಗೆ ಈ ಯಶಸ್ಸು ವೃತ್ತಿಜೀವನದ ಮಹತ್ವದ ಮೈಲಿಗಲ್ಲು ಆಯಿತು. ಗಾಯದ ಸಮಸ್ಯೆ ಎದುರಿಸಿದ್ದ ಮತ್ತು ಸಿಂಗಲ್ಸ್‌ನಿಂದ ಡಬಲ್ಸ್ ಆಟಗಾರನಾಗಿ ಪರಿವರ್ತನೆಗೊಂಡ ನಂತರ ಈ ವರ್ಷ ಅವರು ಸುಧಾರಿತ ಪ್ರದರ್ಶನ ನೀಡಿದ್ದಾರೆ.
ಜೂನಿಯರ್ ವಿಭಾಗದಲ್ಲಿ ವಿಶ್ವದ ಮಾಜಿ ಅಗ್ರ ಕ್ರಮಾಂಕದ ಆಟಗಾರ ಮತ್ತು 2009ರ ಆಸ್ಟ್ರೇಲಿಯನ್ ಓಪನ್ ಬಾಲಕರ ಚಾಂಪಿಯನ್ ಆಗಿದ್ದ ಭಾಂಬ್ರಿ ಮೊದಲ ಬಾರಿ ಸೀನಿಯರ್ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಅತ್ಯುತ್ತಮ ಫಲಿತಾಂಶ ಗಳಿಸಿದ್ದಾರೆ.
‘ಇಂಥ ಕಠಿಣ ಪಂದ್ಯ ದೊರಕಿದ್ದಕ್ಕೆ ಕೃತಜ್ಞತೆ ಹೇಳುವೆ. ಹಲವು ಗ್ರ್ಯಾಂಡ್‌ಸ್ಲಾಮ್ ಟೂರ್ನಿಗಳ ಚಾಂಪಿಯನ್ ಆಗಿ ಅಪಾರ ಅನುಭವ ಹೊಂದಿದ್ದ ಎದುರಾಳಿಗಳು ನಮಗೆ ತುಂಬಾ ಕಠಿಣ ಪೈಪೋಟಿ ಒಡ್ಡಿದರು’ ಎಂದು ಅವರು ಜಿಯೊ ಹಾಟ್‌ಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
‘ಮೈಕೆಲ್ ವೀನಸ್ ಅವರನ್ನು ಮರಳಿ ಜೊತೆಗಾರನನ್ನಾಗಿ ಮಾಡಿಕೊಂಡ ನಿರ್ಧಾರ ಸಕಾಲಿಕವಾಯಿತು. ಅವರ ವಿರುದ್ಧ ಸಿಂಗಲ್ಸ್‌ನಲ್ಲಿ ಆಡಿದ್ದೆ. ವಿರುದ್ಧ ಆಡುವ ಬದಲು ಜೊತೆಗಾರನಾಗಿ ಆಡಿದರೆ ಚೆನ್ನ ಎನಿಸಿತು’ ಎಂದಿದ್ದಾರೆ.
ಇದರೊಂದಿಗೆ ಡಬಲ್ಸ್‌ನಲ್ಲಿ ಭಾರತದ ಶ್ರೀಮಂತ ಪರಂಪರೆ ಮುಂದುವರಿಯಿತು. ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ರೋಹನ್ ಬೋಪಣ್ಣ ಅವರು ಈ ಹಿಂದೆ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ವಿಜೇತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.