ವಾಷಿಂಗ್ಟನ್ : 16 ತಿಂಗಳ ನಂತರ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳಿದ ವೀನಸ್ ವಿಲಿಯಮ್ಸ್ ಅವರು ಡಬ್ಲ್ಯುಟಿಎ ಡಿಸಿ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನ ಪಂದ್ಯ ಗೆದ್ದರು. 45 ವರ್ಷ ವಯಸ್ಸಿನ ವೀನಸ್, 2004ರ ನಂತರ ಡಬ್ಲ್ಯುಟಿಎ ಸಿಂಗಲ್ಸ್ ಪಂದ್ಯ ಗೆದ್ದ ಅತಿ ಹಿರಿಯ ಆಟಗಾರ್ತಿ ಎನಿಸಿದರು.
ಏಳು ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದಿರುವ ಅಮೆರಿಕದ ಅನುಭವಿ ಆಟಗಾರ್ತಿ ಮಂಗಳವಾರ ನಡೆದ ಪಂದ್ಯದಲ್ಲಿ 6–3, 6–4 ರಿಂದ ಸ್ವದೇಶದ ಪೇಟನ್ ಸ್ಟಿಯರ್ನ್ಸ್ ಅವರನ್ನು ಮಣಿಸಿದರು. 21 ವರ್ಷಗಳ ಹಿಂದೆ ಅಮೆರಿಕದ ಮಾರ್ಟಿನಾ ನವ್ರಾಟಿಲೋವಾ 47ನೇ ವಯಸ್ಸಿನಲ್ಲಿ ವಿಂಬಲ್ಡನ್‌ನಲ್ಲಿ ಪಂದ್ಯ ಗೆದ್ದಿದ್ದು ಈ ಹಿಂದಿನ ದಾಖಲೆಯಾಗಿದೆ.
ಈ ಪಂದ್ಯ ಗೆಲ್ಲಲು ವೀನಸ್ 97 ನಿಮಿಷ ತೆಗೆದುಕೊಂಡರು. ಇದು ಡಬ್ಲ್ಯುಟಿಎ ಸಿಂಗಲ್ಸ್‌ನಲ್ಲಿ ಅವರಿಗೆ 819ನೇ ಗೆಲುವು. ಭರ್ಜರಿ ಸರ್ವ್‌ಗಳ ಜೊತೆ ಪ್ರಬಲ ಗ್ರೌಂಡ್‌ಸ್ಟ್ರೋಕ್‌ಗಳನ್ನು ಅವರು ಆಡಿದರು. ವಿಶೇಷ ಎಂದರೆ ಪೇಟನ್ (23 ವರ್ಷ) ಹುಟ್ಟುವ ಮೊದಲೇ ವೀನಸ್ 4 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು.
2024ರ ಮಾರ್ಚ್ ನಂತರ ವಿಲಿಯಮ್ಸ್ ಯಾವುದೇ ಡಬ್ಲ್ಯುಟಿಎ ಪಂದ್ಯ ಆಡಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.