ಯಾನಿಕ್ ಸಿನ್ನರ್
(ರಾಯಿಟರ್ಸ್ ಚಿತ್ರ)
ಲಂಡನ್: ವಿಶ್ವದ ಅಗ್ರಮಾನ್ಯ ಟೆನಿಸ್ ಆಟಗಾರ ಯಾನಿಕ್ ಸಿನ್ನರ್ ಅವರು ಭಾನುವಾರ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಎರಡು ಬಾರಿಯ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಅವರನ್ನು ಹಿಮ್ಮೆಟ್ಟಿಸಿ, ತಮ್ಮ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಕ್ಕಿದರು.
ಇಟಲಿಯ 23 ವರ್ಷದ ಸಿನ್ನರ್ ಆರಂಭಿಕ ಸೆಟ್‌ನ ಹಿನ್ನಡೆಯಿಂದ ಚೇತರಿ ಸಿಕೊಂಡು 4-6, 6-4, 6-4, 6-4ರಲ್ಲಿ ನಾಲ್ಕು ಸೆಟ್‌ಗಳ ಹೋರಾಟದಲ್ಲಿ ಎರಡನೇ ಶ್ರೇಯಾಂಕದ ಅಲ್ಕರಾಜ್ ಅವರನ್ನು ಮಣಿಸಿದರು. ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿದ್ದ ಸ್ಪೇನ್‌ನ ಆಟಗಾರನಿಗೆ ನಿರಾಸೆಯಾಯಿತು.
ಐದು ವಾರಗಳ ಹಿಂದೆ (ಜೂನ್ 8) ಫ್ರೆಂಚ್ ಓಪನ್‌ನ ರೋಚಕ ಫೈನಲ್ ನಲ್ಲಿ ಅಲ್ಕರಾಜ್ ವಿರುದ್ಧ ಐದು ಸೆಟ್‌ಗಳಲ್ಲಿ ಸೋತಿದ್ದ ಸಿನ್ನರ್ ಇಲ್ಲಿ ಮುಯ್ಯಿ ತೀರಿಸಿಕೊಂಡರು. ಇಟಲಿಯ ಆಟಗಾರ ನಿಗೆ ಇದು ನಾಲ್ಕನೇ ಗ್ರ್ಯಾನ್‌ಸ್ಲಾಮ್ ಕಿರೀಟವಾಗಿದೆ. ಈ ಮೊದಲು ಎರಡು ಬಾರಿ ಆಸ್ಟ್ರೇಲಿಯಾ ಓಪನ್, ಒಂದು ಬಾರಿ ಅಮೆರಿಕ ಓಪನ್ ಪ್ರಶಸ್ತಿ ಗೆದ್ದಿದ್ದಾರೆ.
ಏಪ್ರಿಲ್‌ನಿಂದ ಇದುವರೆಗೆ ಸತತ 24 ಪಂದ್ಯಗಳನ್ನು ಗೆದ್ದಿದ್ದ ಅಲ್ಕರಾಜ್ ಯಶಸ್ಸಿನ ಪಯಣಕ್ಕೆ ಈ ಸೋಲು ತಡೆಯೊಡ್ಡಿತು. ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲೂ ಸತತ 20 ಪಂದ್ಯಗಳ ಗೆಲುವಿನ ನಾಗಾಲೋಟಕ್ಕೂ ಪೂರ್ಣ ವಿರಾಮ ಬಿತ್ತು. 2023 ಮತ್ತು 2024ರ ಆವೃತ್ತಿಯಲ್ಲಿ ಅಲ್ಕರಾಜ್ ಅವರು ಸರ್ಬಿಯಾದ ತಾರೆ ನೊವಾಕ್ ಜೊಕೊವಿಚ್ ಅವರನ್ನು ಮಣಿಸಿ ಎರಡು ಬಾರಿ ಪ್ರಶಸ್ತಿ ಗೆದ್ದಿದ್ದರು.
ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಆರನೇ ಬಾರಿ ಫೈನಲ್ ತಲುಪಿದ್ದ ಸ್ಪೇನ್ ಆಟಗಾರನಿಗೆ ಇದು ಮೊದಲ ಸೋಲಾ ಗಿದೆ. ಐದು ಫೈನಲ್‌ಗಳಲ್ಲಿ ಅವರು ಗೆದ್ದು ಬೀಗಿದ್ದರು.
‘ಪ್ಯಾರಿಸ್‌ನಲ್ಲಿ ನನಗೆ ರೋಚಕ ಸೋಲು ಎದುರಾಯಿತು. ಪಂದ್ಯವನ್ನೂ ಹೇಗೆ ಸೋತರೂ ನಮ್ಮ ತಪ್ಪನ್ನು ಅರ್ಥಮಾಡಿಕೊಂಡು, ಸರಿಪಡಿಸಲು ಪ್ರಯತ್ನಿಸಬೇಕು. ಅದನ್ನು ಮಾಡಿದ್ದ ರಿಂದಲೇ ಈ ಪ್ರಶಸ್ತಿ ಗೆಲ್ಲಲು ಸಾಧ್ಯ ವಾಯಿತು. ಈ ಟ್ರೋಫಿ ನನಗೆ ಅತ್ಯಂತ ವಿಶೇಷವಾದುದು’ ಎಂದು ಗೆಲುವಿನ ನಂತರ ಸಿನ್ನರ್ ಪ್ರತಿಕ್ರಿಯಿಸಿದರು.
‘ಸೋಲನ್ನು ಸ್ವೀಕರಿಸುವುದು ಕಷ್ಟ. ಆದರೆ, ಈ ವೇಳೆ ಸಿನ್ನರ್ ಅವರನ್ನು ಅಭಿನಂದಿಸಲೇಬೇಕು. ಅವರಿಗೆ ಇದು ನಿಜವಾಗಿಯೂ ಅರ್ಹವಾದ ಟ್ರೋಫಿ’ ಎಂದು ಅಲ್ಕರಾಜ್ ಹೇಳಿದರು.
ವೆರೋನಿಕಾ–ಎಲಿಸ್ ಜೋಡಿಗೆ ಪ್ರಶಸ್ತಿ
ಲಂಡನ್: ರಷ್ಯಾದ ವೆರೋನಿಕಾ ಕುಡೆರ್ಮೆಟೋವಾ ಮತ್ತು ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ಜೋಡಿಯು ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಭಾನುವಾರ ನಡೆದ ಫೈನಲ್‌ನಲ್ಲಿ ಎಂಟನೇ ಶ್ರೇಯಾಂಕದ ವೆರೋನಿಕಾ–ಎಲಿಸ್ ಜೋಡಿಯು ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 3-6, 6-2, 6-4ರಿಂದ ನಾಲ್ಕನೇ ಶ್ರೇಯಾಂಕದ ಹ್ಸೀಹ್ ಸು-ವೀ (ತೈವಾನ್) ಮತ್ತು ಜೆಲೆನಾ ಒಸ್ಟಾಪೆಂಕೊ (ಲಾಟ್ವಿಯಾ) ಅವರಿಗೆ ಆಘಾತ ನೀಡಿತು.28 ವರ್ಷದ ವೆರೋನಿಕಾಗೆ ಇದು ಚೊಚ್ಚಲ ಗ್ರ್ಯಾನ್‌ಸ್ಲಾಮ್ ಕಿರೀಟವಾಗಿದೆ. 29 ವರ್ಷದ ಎಲಿಸ್‌ಗೆ ಇದು ಐದನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.