ADVERTISEMENT

ವಿಂಬಲ್ಡನ್ ಟೆನಿಸ್ ಟೂರ್ನಿ: ಲಟಿಷಾ–ಇವಾನ್‌ಗೆ ಪ್ರಶಸ್ತಿ

ಸೋತ ಫೆಡರರ್‌; ಮಿಶ್ರ ಡಬಲ್ಸ್‌ನಲ್ಲಿ ರಾಬರ್ಟ್‌, ಜೆಲೆನಾಗೆ ನಿರಾಸೆ

ಏಜೆನ್ಸೀಸ್
Published 14 ಜುಲೈ 2019, 20:10 IST
Last Updated 14 ಜುಲೈ 2019, 20:10 IST
ರೋಜರ್ ಫೆಡರರ್
ರೋಜರ್ ಫೆಡರರ್   

ಲಂಡನ್‌: ರೋಚಕ ಹಣಾಹಣಿಯಲ್ಲಿ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಎದುರು ಗೆದ್ದ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ವಿಂಬಲ್ಡನ್ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಭಾನುವಾರ ರಾತ್ರಿ ನಾಲ್ಕು ತಾಸು 57 ನಿಮಿಷ ನಡೆದ ಫೈನಲ್‌ ಪಂದ್ಯದಲ್ಲಿ ನೊವಾಕ್ 7–6 (7/5), 1–6, 7–6(7/4), 4–6, 13–12(7/3)ರಲ್ಲಿ ಗೆದ್ದರು. ಮೊದಲ ನಾಲ್ಕು ಸೆಟ್‌ಗಳಲ್ಲಿ ಉಭಯ ಆಟಗಾರರು ತಲಾ ಎರಡನ್ನು ಗೆದ್ದಿದ್ದರು.

ಕೊನೆಯ ಸೆಟ್‌ನ ಟೈಬ್ರೇಕರ್‌ ಪ್ರೇಕ್ಷಕರಿಗೆ ರೋಮಾಂಚಕಾರಿ ಅನುಭವ ನೀಡಿತು. ಇದು, ವಿಂಬಲ್ಡನ್‌ ಟೂರ್ನಿಯ ಅತ್ಯಂತ ದೀರ್ಘ ಫೈನಲ್‌ ಆಗಿತ್ತು.ಜಿದ್ದಾಜಿದ್ದಿಯ ಹಣಾಹಣಿಯ ಕೊನೆಯಲ್ಲಿ ಗೆದ್ದ ನೊವಾಕ್ ವಿಂಬಲ್ಡನ್‌ ನಲ್ಲಿ ಐದನೇ ಪ್ರಶಸ್ತಿ ಮುಡಿಗೇರಿಸಿ
ಕೊಂಡರು. ಪ್ರಮುಖ ಟೂರ್ನಿಯಲ್ಲಿ ಇದು ಅವರು ಗೆದ್ದ 16ನೇ ಪ್ರಶಸ್ತಿಯಾ ಗಿದೆ.

ADVERTISEMENT

ಲಟಿಷಾ–ಇವಾನ್‌ಗೆ ಪ್ರಶಸ್ತಿ: ತೈವಾನ್‌ನ ಲಟಿಷಾ ಚಾನ್ ಮತ್ತು ಕ್ರೊವೇಷ್ಯಾದ ಇವಾನ್ ಡಾಡಿಗ್ ಜೋಡಿ ಮಿಶ್ರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದರು. ಈ ಮೂಲಕ ಸತತ ಎರಡು ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗಳಿಸಿದ ಸಾಧನೆ ಮಾಡಿದರು.

ಫೈನಲ್‌ ಪಂದ್ಯದಲ್ಲಿ ಸ್ವೀಡನ್‌ನ ರಾಬರ್ಟ್‌ ಲಿಂಡ್‌ಸ್ಟೆಡ್ ಮತ್ತು ಲಾಟ್ವಿಯಾದ ಜೆಲೆನಾ ಓಸ್ತಪೆಂಕೊ ಜೋಡಿಯನ್ನು ಅವರು 6–2, 6–3ರಲ್ಲಿ ಮಣಿಸಿದರು.ಚಾನ್ ಮತ್ತು ಡಾಡಿಗ್ ಜೋಡಿ ಫ್ರೆಂಚ್ ಓಪನ್ ಟೂರ್ನಿಯಲ್ಲೂ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಹೀಗಾಗಿ ಮಿಶ್ರ ಡಬಲ್ಸ್‌ನಲ್ಲಿ ಬಲಿಷ್ಠ ಜೋಡಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಚಾನ್‌ 2017ರ ಅಮೆರಿಕ ಓಪನ್ ಟೂರ್ನಿಯ ಡಬಲ್ಸ್‌ನಲ್ಲಿ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಪ್ರಶಸ್ತಿ ಗಳಿಸಿದ್ದರು.ಎಂಟನೇ ಶ್ರೇಯಾಂಕಿತ ಈ ಜೋಡಿ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಹೀಗಾಗಿ ಮೊದಲ ಸೆಟ್‌ನ ಮೊದಲ ಐದು ಗೇಮ್‌ಗಳನ್ನು ಗೆದ್ದುಕೊಂಡು ಸೆಟ್‌ನಲ್ಲಿ ಸುಲಭ ಜಯ ಸಾಧಿಸಿದರು. ಎರಡನೇ ಸೆಟ್‌ನಲ್ಲೂ ಆರಂಭದಲ್ಲಿ ಇದೇ ಜೋಡಿ ಪಾರಮ್ಯ ಮೆರೆದಿತ್ತು. ಆದರೆ ಎಂಟನೇ ಗೇಮ್‌ನಲ್ಲಿ ಎದುರಾಳಿಗಳು ತಿರುಗೇಟು ನೀಡಿದರು. ಆದರೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಸೆಟ್ ಸೋತು ಪ್ರಶಸ್ತಿಯನ್ನು ಕೈಚೆಲ್ಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.