ADVERTISEMENT

Wimbledon | ಸಾಕಾರಗೊಂಡ ಯಾನಿಕ್‌ ಸಿನ್ನರ್ ಕನಸು

ಏಜೆನ್ಸೀಸ್
Published 15 ಜುಲೈ 2025, 0:30 IST
Last Updated 15 ಜುಲೈ 2025, 0:30 IST
<div class="paragraphs"><p>ವಿಂಬಲ್ಡನ್‌ ಪುರುಷರ ಸಿಂಗಲ್ಸ್‌ ವಿಜೇತ, ಇಟಲಿಯ ಯಾನಿಕ್‌ ಸಿನ್ನರ್‌ ಅವರಿಗೆ ವೇಲ್ಸ್ ರಾಜಕುಮಾರಿ ಕ್ಯಾಥರೀನ್ ಟ್ರೋಫಿ ಪ್ರದಾನ ಮಾಡಿದರು</p></div>

ವಿಂಬಲ್ಡನ್‌ ಪುರುಷರ ಸಿಂಗಲ್ಸ್‌ ವಿಜೇತ, ಇಟಲಿಯ ಯಾನಿಕ್‌ ಸಿನ್ನರ್‌ ಅವರಿಗೆ ವೇಲ್ಸ್ ರಾಜಕುಮಾರಿ ಕ್ಯಾಥರೀನ್ ಟ್ರೋಫಿ ಪ್ರದಾನ ಮಾಡಿದರು

   

ಲಂಡನ್‌: ಯಾನಿಕ್ ಸಿನ್ನರ್ ಅವರಿಗೆ ಈ ಜಯ ಎಲ್ಲದ್ದಕ್ಕಿಂತ ಮಹತ್ವದ್ದಾಗಿತ್ತು. ಎದುರಾಳಿ ಯಾರೇ ಇರಲಿ– ವಿಂಬಲ್ಡನ್‌ ಗೆಲ್ಲುವುದು ಅವರ ಮಹತ್ವಾಕಾಂಕ್ಷೆಯಾಗಿತ್ತು. ನಾಲ್ಕನೇ ಗ್ರ್ಯಾನ್‌ಸ್ಲಾಮ್‌ ಗೆಲುವಿನ ಮೂಲಕ ಭಾನುವಾರ ಅವರ ಕನಸು ಸಾಕಾರಗೊಂಡಿತು. ಎರಡು ಬಾರಿಯ ವಿಜೇತ ಕಾರ್ಲೋಸ್‌ ಅಲ್ಕರಾಜ್ ಅವರನ್ನು ಸೋಲಿಸಿದ್ದರಿಂದ ಈ ಗೆಲುವಿಗೆ ಇನ್ನಷ್ಟು ಮಹತ್ವ ದೊರಕಿದೆ.

ಇವರಿಬ್ಬರ ಪೈಪೋಟಿ ಮುಂದಿನ ಕೆಲವು ವರ್ಷಗಳಲ್ಲಿ ಮುಂದುವರಿಯುಂತೆ ಕಾಣುತ್ತಿದೆ. 

ADVERTISEMENT

‘ಇದು ಮಹತ್ವದ ಜಯ, ಅನುಮಾನವಿಲ್ಲ. ಒಬ್ಬ ಆಟಗಾರ ಎದುರಾಳಿಯ ವಿರುದ್ಧ ಅನೇಕ ಬಾರಿ ಸೋತಾಗ ಇಂಥ ಗೆಲುವು ಪಡೆಯುವುದು ಸುಲಭವಲ್ಲ’ ಎಂದು ಸಿನ್ನರ್ ಅವರು ಫೈನಲ್‌ನಲ್ಲಿ ಎರಡನೇ ಕ್ರಮಾಂಕದ ಅಲ್ಕರಾಜ್ ವಿರುದ್ಧ 4–6, 6–4, 6–4, 6–4ರಲ್ಲಿ ಗೆದ್ದ ನಂತರ ಪ್ರತಿಕ್ರಿಯಿಸಿದರು. ವಿಂಬಲ್ಡನ್ ಸಿಂಗಲ್ಸ್‌ ಗೆದ್ದ ಇಟಲಿಯ ಮೊದಲ ಆಟಗಾರ ಎನ್ನುವ ಹಿರಿಮೆಗೂ ಪಾತ್ರರಾದರು.

23 ವರ್ಷ ವಯಸ್ಸಿನ ಸಿನ್ನರ್ ಅವರು ಸತತವಾಗಿ ಐದು ಸಲ 22 ವರ್ಷದ ಅಲ್ಕರಾಜ್‌ಗೆ  ಸೋತಿದ್ದರು. ಅದರಲ್ಲೂ ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಸೋಲು ಅವರಿಗೆ ಎದೆಗುಂದಿಸಿತ್ತು. ಆ ಪಂದ್ಯದಲ್ಲಿ ಎರಡು ಸೆಟ್‌ ಗೆದ್ದ ಸಿನ್ನರ್ ಮೂರು ಬಾರಿ ಗೆಲುವಿನ ಪಾಯಿಂಟ್‌ ಪಡೆಯಲಷ್ಟೇ ಬಾಕಿಯಿತ್ತು. ಆಗ ಅಲ್ಕರಾಜ್ ಗಮನಾರ್ಹವಾಗಿ ಚೇತರಿಸಿಕೊಂಡು 5 ಗಂಟೆ 29 ನಿಮಿಷಗಳ ಪಂದ್ಯದಲ್ಲಿ ಅವಿಸ್ಮರಣೀಯ ರೀತಿ ಜಯಗಳಿಸಿದ್ದರು.

ಆಗಸ್ಟ್‌ 24ರಂದು ಆರಂಭವಾಗುವ ನ್ಯೂಯಾರ್ಕ್‌ನಲ್ಲಿ ಆರಂಭವಾಗಲಿರುವ ಅಮೆರಿಕ ಓಪನ್‌ನಲ್ಲಿ ಸಿನ್ನರ್ ಮತ್ತು ಅಲ್ಕರಾಜ್ ಮೊದಲ ಎರಡು ಶ್ರೆಯಾಂಕದ ಪಡೆಯಲಿದ್ದಾರೆ. ಸಿನ್ನರ್ ಅಲ್ಲಿ ಹಾಲಿ ಚಾಂಪಿಯನ್. ಅವರಿಬ್ಬರು ಮತ್ತೆ ಫೈನಲ್‌ನಲ್ಲಿ ಎದುರಾಗಬಹುದಷ್ಟೇ.

ಅಲ್ಕರಾಜ್ 2022ರಲ್ಲಿ ಫ್ಲಷಿಂಗ್ ಮಿಡೋಸ್‌ನಲ್ಲಿ ಚಾಂಪಿಯನ್ ಆಗಿದ್ದರು. ಅಲ್ಲಿಂದ ಇವರಿಬ್ಬರ ನಡುವಣ ಹಣಾಹಣಿ ಬಿರುಸು ಪಡೆಯಿತು. 12 ಪ್ರಮುಖ ಟೂರ್ನಿಗಳಲ್ಲಿ ಒಂಬತ್ತನ್ನು ಇವರಿಬ್ಬರು ಹಂಚಿಕೊಂಡಿದ್ದಾರೆ. ಇತರ ಎದುರಾಳಿಗಳನ್ನು ಇವರಿಬ್ಬರು ಸೋಲಿಸುತ್ತ ಬಂದಿದ್ದಾರೆ.

ಭಾನುವಾರ ಇಬ್ಬರೂ ಉತ್ತಮವಾಗಿ ಸರ್ವ್‌ ಮಾಡಿದ್ದರೂ, ಸಿನ್ನರ್ ಹೆಚ್ಚು ಪರಿಣಾಮಕಾರಿಯಾದರು. ಮೂರು ಗಂಟೆಗಳ ಪಂದ್ಯದಲ್ಲಿ ಇಬ್ಬರೂ ಚೆಂಡನ್ನು ಹಿಂತಿರುಗಿ ಸುತ್ತಿದ್ದರೂ ಸಿನ್ನರ್ ಆಟದಲ್ಲಿ ಶ್ರೇಷ್ಠತೆ ಕಾಣಿಸಿತು. ಅಲ್ಕರಾಜ್ ಅವರಲ್ಲಿ ವೇಗವಿತ್ತು. ಹೊಡೆತಗಳಿಗೆ ಎಟಕುವಲ್ಲಿ (ರೀಚ್‌) ಸಿನ್ನರ್ ಮೇಲುಗೈ ಸಾಧಿಸಿದರು. ಅಲ್ಕರಾಜ್ ಆಟದಲ್ಲಿ ಸೊಬಗು ಇತ್ತು. ಸಿನ್ನರ್ ಹೊಡೆತಗಳಲ್ಲಿ ಸ್ಥಿರತೆ ಇತ್ತು.

ಸಿನ್ನರ್‌ ಜೊತೆಗಿನ ಪೈಪೋಟಿಯಿ ನನಗೆ ತುಂಬಾ ಸಂಸತ ನೀಡಿದೆ. ನಮಗಿಬ್ಬರಿಗೂ ಇದು ಒಳ್ಳೆಯದು. ಟೆನಿಸ್‌ಗೂ ಸಹ. ಪ್ರತಿ ಬಾರಿ ಎದುರಾದಾಗ ನಮ್ಮ ಆಟದ ಮಟ್ಟ ಎತ್ತರಕ್ಕೇರುತ್ತದೆ
ಕಾರ್ಲೋಸ್‌ ಅಲ್ಕರಾಜ್, ರನ್ನರ್ಸ್‌ಅಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.