ADVERTISEMENT

ವಿಂಬಲ್ಡನ್ : ಜೊಕೊವಿಚ್‌ ಚಾಂಪಿಯನ್‌, ಬಾರ್ಬರಾ–ಕ್ಯಾಥೆರಿನಾ ಜೋಡಿಗೆ ಜಯ

ಕೆವಿನ್ ಆ್ಯಂಡರ್ಸನ್‌ಗೆ ನಿರಾಸೆ

ಪಿಟಿಐ
Published 23 ಜುಲೈ 2018, 9:57 IST
Last Updated 23 ಜುಲೈ 2018, 9:57 IST
ಬಾರ್ಬರಾ ಕ್ರೆಜ್ಸಿಕೋವ ಮತ್ತು ಕ್ಯಾಥೆರಿನಾ ಸಿನಿಯಾಕೋವ
ಬಾರ್ಬರಾ ಕ್ರೆಜ್ಸಿಕೋವ ಮತ್ತು ಕ್ಯಾಥೆರಿನಾ ಸಿನಿಯಾಕೋವ   

ಲಂಡನ್‌ : ದೈತ್ಯರನ್ನು ಮಣಿಸಿ ಫೈನಲ್‌ ಪ್ರವೇಶಿಸಿದ್ದ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್‌ ನಿರಾಸೆಗೆ ಒಳಗಾದರು. ಅವರ ವಿರುದ್ಧ ಅಮೋಘ ಆಟ ಆಡಿದ ಸರ್ಬಿಯಾದ ನೊವಾಕ್ ಜೊಕೊವಿಚ್ ವಿಂಬಲ್ಡನ್ ಟೆನಿಸ್‌ ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡರು. ಭಾನುವಾರ ರಾತ್ರಿ ಇಲ್ಲಿನ ಸೆಂಟರ್ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಅವರು 6–2, 6–2, 7–6(7/3)ರಿಂದ ಗೆದ್ದರು.

ಕ್ವಾರ್ಟರ್ ಫೈನಲ್‌ನಲ್ಲಿ ರೋಜರ್ ಫೆಡರರ್ ಅವರನ್ನು ಮಣಿಸಿದ್ದ ಆ್ಯಂಡರ್ಸನ್‌ ಸೆಮಿಫೈನಲ್‌ನಲ್ಲಿ ದಾಖಲೆಯ ಆರೂವರೆ ತಾಸುಗಳ ಹೋರಾಟದಲ್ಲಿ ಜಾನ್ ಇಸ್ನೇರ್‌ ಎದುರು ಗೆದ್ದಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಕೀ ನಿಶಿಕೋರಿ ವಿರುದ್ಧ ಗೆದ್ದ ಜೊಕೊವಿಚ್‌ ರೋಮಾಂಚಕ ಸೆಮಿಫೈನಲ್‌ನಲ್ಲಿ ರಫೆಲ್ ನಡಾಲ್ ಅವರನ್ನು ಸೋಲಿಸಿದ್ದರು. ಹೀಗಾಗಿ ಈ ಇಬ್ಬರು ಆಟಗಾರರ ನಡುವಿನ ಸೆಣಸಾಟ ತೀವ್ರ ಕುತೂಹಲ ಕೆರಳಿಸಿತ್ತು.

ಆದರೆ ಜೊಕೊವಿಚ್ ಅವರ ಆಟದ ಮುಂದೆ ಮಂಕಾದ ಆ್ಯಂಡರ್ಸನ್‌ ಕನಸು ನಸಾಗಲಿಲ್ಲ. ಮೊದಲ ಸೆಟ್‌ನಲ್ಲೇ ಎದುರಾಳಿಯನ್ನು ದಂಗಾಗಿಸಿದ ಜೊಕೊವಿಚ್‌ ಎರಡು ಗೇಮ್‌ಗಳನ್ನು ಮಾತ್ರ ಬಿಟ್ಟುಕೊಟ್ಟು ಜಯ ಸಾಧಿಸಿದರು. ಎರಡನೇ ಸೆಟ್‌ನಲ್ಲೂ ಜೊಕೊವಿಚ್‌ ಅವರನ್ನು ಕಟ್ಟಿ ಹಾಕಲು ನಡೆಸಿದ ಶ್ರಮ ಫಲ ನೀಡಲಿಲ್ಲ. ಈ ಸೆಟ್‌ನಲ್ಲಿ ಕೂಡ ಸರ್ಬಿಯಾ ಆಟಗಾರ ಅಪೂರ್ವ ಸಾಮರ್ಥ್ಯ ತೋರಿದರು. 5–2ರಿಂದ ಮುನ್ನಡೆ
ದಿದ್ದಾಗ ದಕ್ಷಿಣ ಆಫ್ರಿಕಾದ ತಿರುಗೇಟು ನೀಡಲು ಪ್ರಯತ್ನಿಸಿದರು. ಆದರೆ ಈ ಸವಾಲನ್ನು ಮೆಟ್ಟಿ ನಿಂತ ಜೊಕೊವಿಚ್‌ ಸೆಟ್ ಗೆದ್ದು ಬೀಗಿದರು.

ADVERTISEMENT

ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಕೆವಿನ್ ತಿರುಗೇಟು ನೀಡಿದರು. ಹೀಗಾಗಿ ಪಂದ್ಯ ಟೈ ಬ್ರೇಕರ್‌ಗೆ ಸಾಗಿತು. ಟೈ ಬ್ರೇಕರ್‌ನಲ್ಲಿ ನಿರಾಳವಾಗಿ ಆಡಿದ ಜೊಕೊವಿಚ್‌ ಸೆಟ್ ಮತ್ತು ಪಂದ್ಯ ಗೆದ್ದು ಸಂಭ್ರಮಿಸಿದರು.

ನೊವಾಕ್ ಜೊಕೊವಿಚ್

ದಾಖಲೆ ಸರಿಗಟ್ಟಿದ ಮೈಕ್‌ ಬ್ರಯಾನ್

ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಅಮೆರಿಕದ ಮೈಕ್ ಬ್ರಯಾನ್‌ ದಾಖಲೆ ಸರಿಗಟ್ಟಿದರು. ಇದು ಡಬಲ್ಸ್‌ನಲ್ಲಿ ಅವರ 17ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಆಗಿದೆ. ಈ ಬಾರಿ ಅವರು ಮೊದಲ ಬಾರಿ ಸಹೋದರನ ಜೊತೆ ಇಲ್ಲದೆ ಆಡಿದ್ದರು.

ಜಾಕ್ ಸಾಕ್‌ ಅವರೊಂದಿಗೆ ಕಣಕ್ಕೆ ಇಳಿದಿದ್ದ ಬ್ರಯಾನ್‌ ದಕ್ಷಿಣ ಆಫ್ರಿಕಾದ ರವೇನ್ ಕ್ಲಾಸೆನ್‌ ಮತ್ತು ನ್ಯೂಜಿಲೆಂಡ್‌ನ ಮೈಕೆಲ್ ವೀನಸ್‌ ಜೋಡಿಯನ್ನು 6–3, 6–7 (7), 6–3, 5–7, 7–5ರಿಂದ ಮಣಿಸಿದರು.

ಬಾರ್ಬರಾ–ಕ್ಯಾಥೆರಿನಾ ಜೋಡಿಗೆ ಜಯ: ಮಹಿಳೆಯರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಜೆಕ್ ಗಣರಾಜ್ಯದ ಬಾರ್ಬರಾ ಕ್ರೆಜ್ಸಿಕೋವ ಮತ್ತು ಕ್ಯಾಥೆರಿನಾ ಸಿನಿಯಾಕೋವ ಜೋಡಿ ಕ್ವೆಟಾ ಪೆಶ್ಕೆ ಮತ್ತು ನಿಕೋಲ್‌ ಮೆಲಿಚಾರ್ ಜೋಡಿ ವಿರುದ್ಧ 6–4, 4–6, 6–0ಯಿಂದ ಗೆದ್ದರು.

*
ಸೆರೆನಾ ಸತ್ತೇ ಹೋಗ್ತಾಳೆ ಎಂದು ಆತಂಕಗೊಂಡಿದ್ದೆ...

‘ಮಗುವಿಗೆ ಜನ್ಮ ನೀಡಿದ ಕೆಲವೇ ದಿನಗಳ ನಂತರ ಸೆರೆನಾ ವಿಲಿಯಮ್ಸ್ ಸತ್ತೇ ಹೋಗ್ತಾಳೆ ಎಂಬ ಆತಂಕ ನನ್ನನ್ನು ಕಾಡುತ್ತಿತ್ತು...’

ಸೆರೆನಾ ಅವರ ಪತಿ ಅಲೆಕ್ಸಿಸ್ ಒಹಾನಿಯನ್‌ ಅವರು ಭಾನುವಾರ ಈ ಭಾವುಕ ಹೇಳಿಕೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

’ಅದು ಅತ್ಯಂತ ಸವಾಲಿನ ದಿನವಾಗಿತ್ತು. ಮಗು ಜನಿಸಿದ ಕೆಲವೇ ದಿನಗಳಲ್ಲಿ ಸೆರೆನಾಗೆ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಅದಕ್ಕಾಗಿ ಅವರನ್ನು ಒಳಗೆ ಕರೆದುಕೊಂಡು ಹೋಗುವ ಮುನ್ನ ನಾನು ಅವರಿಗೆ ಮುತ್ತು ನೀಡಿದೆ. ಅವರು ವಾಪಸ್ ಬರುತ್ತಾರೆಯೋ ಇಲ್ಲವೋ ಎಂಬ ಸಂದೇಹ ನನ್ನನ್ನು ಕಾಡಿತ್ತು’ ಎಂದು ಅಲೆಕ್ಸಿಸ್ ಹೇಳಿದ್ದಾರೆ.

’ಸೆರೆನಾ ಅವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಆಯಿತು. 10 ತಿಂಗಳ ನಂತರ ವಿಂಬಲ್ಡನ್ ಫೈನಲ್‌ ವರೆಗೂ ತಲುಪಿದರು. ಇದು ಎರಡನೇ ಜನ್ಮದಲ್ಲಿ ಅವರ ಆರಂಭವಷ್ಟೇ. ಇನ್ನು ಅನೇಕ ಪ್ರಶಸ್ತಿಗಳನ್ನು ಗೆಲ್ಲಲಿದ್ದಾರೆ’ ಎಂದು ಅಲೆಕ್ಸಿಸ್ ಆಶಿಸಿದ್ದಾರೆ.‌

ಶನಿವಾರ ನಡೆದ ವಿಂಬಲ್ಡನ್ ಟೂರ್ನಿಯ ಫೈನಲ್‌ನಲ್ಲಿ ಸೆರೆನಾ ಅವರು ಏಂಜಲಿಕ್‌ ಕೆರ್ಬರ್‌ಗೆ ಮಣಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.