ಝೆಕ್ ರಿಪಬ್ಲಿಕ್‌ನ ಮೇರಿ ಬೌಝ್ಕೋವಾ ವಿರುದ್ಧ ಜಯಗಳಿಸಿದ ಅರಿನಾ ಸಬಲೆಂಕಾ ಸಂಭ್ರಮ
ಲಂಡನ್: ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ ಅರಿನಾ ಸಬಲೆಂಕಾ ಅವರು ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್ಸ್‌ನ ಎರಡನೇ ಸುತ್ತಿನಲ್ಲಿ ಬುಧವಾರ ಝೆಕ್ ಆಟಗಾರ್ತಿ ಮೇರಿ ಬೌಝ್ಕೋವಾ ಅವರಿಂದ ನಿರೀಕ್ಷೆಗಿಂತ ಹೆಚ್ಚಿನ ಹೋರಾಟ ಎದುರಿಸಿದರು. ಅಂತಿಮವಾಗಿ 7–6 (4), 6–4 ರಿಂದ ಜಯಗಳಿಸಿದ ಬೆಲರೂಸ್‌ನ ಆಟಗಾರ್ತಿ ಮೂರನೇ ಸುತ್ತಿಗೆ ಮುನ್ನಡೆದರು.
ಇನ್ನಷ್ಟು ಅಚ್ಚರಿಯ ಫಲಿತಾಂಶಗಳು ಹೊರಬರಲಿಕ್ಕಿಲ್ಲ ಎಂಬ ವಿಶ್ವಾಸ ಹೊಂದಿರುವುದಾಗಿ ಗೆಲುವಿನ ನಂತರ ಸಬಲೆಂಕಾ ಪ್ರತಿಕ್ರಿಯಿಸಿದರು.
ಎರಡನೇ ಶ್ರೇಯಾಂಕದ ಕೊಕೊ ಗಾಫ್, ಮೂರನೇ ಶ್ರೇಯಾಂಕದ ಜೆಸಿಕಾ ಪೆಗುಲಾ, ಐದನೇ ಶ್ರೇಯಾಂಕದ ಝೆಂಗ್ ಕ್ವಿನ್ವೆನ್ ಮತ್ತು ಒಂಬತ್ತನೇ ಶ್ರೇಯಾಂಕದ ಪೌಲಾ ಬಡೋಸಾ ಅವರು ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಇದರಿಂದ ಸಬಲೆಂಕಾ ಅವರಿಗೆ ಇಲ್ಲಿ ಮೊದಲ ಸಲ ಪ್ರಶಸ್ತಿ ಗೆಲ್ಲುವ ಅವಕಾಶವೂ ಉಜ್ವಲವಾಗಿದೆ.
ಬಿಸಿಲಿನ ಕಣ್ಣಾಮುಚ್ಚಾಲೆ ಕಂಡ ಸೆಂಟರ್‌ಕೋರ್ಟ್‌ನಲ್ಲಿ ಸಬಲೆಂಕಾ ಅವರಿಗೆ ಮೊದಲ ಸೆಟ್ ಸುಲಭವಾಗಿ ಗೆಲ್ಲುವ ಅವಕಾಶವಿತ್ತು. ಆದರೆ ಪ್ರತಿಬಾರಿ ಬೌಝ್ಕೋವಾ ಪ್ರತಿರೋಧ ತೋರಿದರು. 11ನೇ ಗೇಮ್‌ನಲ್ಲಿ ಸಬಲೆಂಕಾ ಡಬಲ್‌ಫಾಲ್ಟ್ ಎಸಗಿ ಸರ್ವ್ ಕಳೆದುಕೊಂಡರು. ಹೀಗಾಗಿ 48ನೇ ಕ್ರಮಾಂಕದ ಮೇರಿ ಅವರಿಗೆ ಸೆಟ್‌ಗಾಗಿ ಸರ್ವ್ ಮಾಡುವ ಅವಕಾಶ ಒದಗಿತು.
ಈ ಗೇಮ್‌ನಲ್ಲಿ ಒಮ್ಮೆ ಬ್ರೇಕ್ ಪಾಯಿಂಟ್ ಅವಕಾಶ ಕಳೆದುಕೊಂಡ ಸಬಲೆಂಕಾ ಹತಾಶರಾಗಿ ಚೀರಿದರು ಸಹ. ಆದರೆ ಬೇಗನೇ ಶಾಂತಚಿತ್ತರಾದ 27 ವರ್ಷದ ಆಟಗಾರ್ತಿ ಬ್ಯಾಕ್‌ಹ್ಯಾಂಡ್ ವಿನ್ನರ್ ಮೂಲಕ ಎದುರಾಳಿಯ ಸರ್ವ್ ಬ್ರೇಕ್ ಮಾಡಿ ಮೊದಲ ಸೆಟ್‌ಅನ್ನು ಟೈಬ್ರೇಕರಿಗೆ ಬೆಳೆಸಿ ನಂತರ ಹಿಡಿತ ಸಾಧಿಸಿದರು. ಎರಡನೇ ಸೆಟ್‌ನ ಐದನೇ ಗೇಮ್‌ನಲ್ಲಿ ಮೇರಿ ಎಸಗಿದ ತಪ್ಪಿನಿಂದ ಸರ್ವಿಸ್ ಬ್ರೇಕ್ ಮಾಡಿದ ಸಬಲೆಂಕಾ ನಂತರ ಪಂದ್ಯವನ್ನು ನಿಯಂತ್ರಣಕ್ಕೆ ಪಡೆದರು.
ಮೂರು ಸಲದ ಗ್ರ್ಯಾನ್‌ಸ್ಲಾಮ್ ವಿಜೇತ ಆಟಗಾರ್ತಿ ಮುಂದಿನ ಪಂದ್ಯದಲ್ಲಿ ಆತಿಥೇಯ ಬ್ರಿಟನ್ ಆಟಗಾರ್ತಿ ಎಮ್ಮಾ ರಾಡುಕಾನು –2023ರ ಚಾಂಪಿಯನ್ ಮಾರ್ಕೆತಾ ವೊಂದ್ರುಸೋವಾ (ಝೆಕ್ ರಿಪಬ್ಲಿಕ್) ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.
ಕೀಸ್ ಮುನ್ನಡೆ: ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಮ್ಯಾಡಿಸನ್ ಕೀಸ್ ಎರಡನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ 6–4, 6–2 ರಿಂದ ಓಲ್ಗಾ ದಾನಿಲೊವಿಕ್ ಅವರನ್ನು ಸೋಲಿಸಿದರು.
ಒಂದೇ ವರ್ಷ ಆಸ್ಟ್ರೇಲಿಯನ್ ಓಪನ್ ಮತ್ತು ವಿಂಬಲ್ಡನ್ ಸಿಂಗಲ್ಸ್ ಗೆದ್ದು ‘ವಿರಳ ಡಬಲ್’ ಸಾಧಿಸುವ ಯತ್ನದಲ್ಲಿ ಆರನೇ ಶ್ರೇಯಾಂಕದ ಅಮೆರಿಕದ ಆಟಗಾರ್ತಿ ಇದ್ದಾರೆ. ಇದೇ ದೇಶದ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಕೊನೆಯ ಬಾರಿ (2009ರಲ್ಲಿ) ಈ ಸಾಧನೆಗೆ ಪಾತ್ರರಾಗಿದ್ದರು.
ನೋರಿ ಮುನ್ನಡೆ: ಬ್ರಿಟನ್‌ನ ಕ್ಯಾಮೆರಾನ್ ನೋರಿ ತಮ್ಮ ನೆಚ್ಚಿನ ಅಂಕಣದಲ್ಲಿ 12ನೇ ಶ್ರೇಯಾಂಕದ ಫ್ರಾನ್ಸಿಸ್ ಟಿಯಾಫೊ (ಅಮೆರಿಕ) ಅವರನ್ನು 4–6, 6–4, 6–3, 7–5 ರಿಂದ ಸೋಲಿಸಿ ಪುರುಷರ ಸಿಂಗಲ್ಸ್ ಮೂರನೇ ಸುತ್ತಿಗೆ ಮುನ್ನಡೆದರು.
2022ರಲ್ಲಿ ಒಂದನೇ ಕೋರ್ಟ್‌ನಲ್ಲಿ ಮೂರು ಪಂದ್ಯಗಳನ್ನು ಗೆದ್ದಿದ್ದ ಎಡಚ ನೋರಿ, ಆ ಬಾರಿ ಸೆಮಿಫೈನಲ್ ತಲುಪಿದ್ದರು.
ಗಾಫ್‌ಗೂ ಆಘಾತ: ಕಳೆದ ತಿಂಗಳು ರೋಲಂಡ್ ಗ್ಯಾರೋಸ್‌ನಲ್ಲಿ ಚಾಂಪಿಯನ್ ಆಗಿದ್ದ ಕೊಕೊ ಗಾಫ್ ಇಲ್ಲಿ ಬಲುಬೇಗ ನಿರಾಶೆ ಅನುಭವಿಸಬೇಕಾಯಿತು. ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಉಕ್ರೇನಿನ ಡಯಾನಾ ಯಸ್ಟ್ರೆಮ್‌ಸ್ಕಾ ಅವರನ್ನು 6–7 (3) 1–6 ರಿಂದ ಅಮೆರಿಕದ ಆಟಗಾರ್ತಿಯನ್ನು ಸೋಲಿಸಿದರು.
ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್ಸ್
ಭಾರತದ ಯುಕಿ ಭಾಂಬ್ರಿ ಮತ್ತು ಅಮೆರಿಕದ ರಾಬರ್ಟ್ ಗ್ಯಾಲೊವೆ ಜೋಡಿ ನೇರ ಸೆಟ್‌ಗಳ ಗೆಲುವಿನೊಡನೆ ವಿಂಬಲ್ಡನ್ ಚಾಂಪಿಯನ್‌ಷಿಪ್ ಪುರುಷರ ಡಬಲ್ಸ್ ಎರಡನೇ ಸುತ್ತನ್ನು ತಲುಪಿತು.
16ನೇ ಶ್ರೇಯಾಂಕ ಪಡೆದಿರುವ ಭಾಂಬ್ರಿ– ಗ್ಯಾಲೊವೆ ಜೋಡಿ ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 7–6 (10–8), 6–4 ರಿಂದ ಫ್ರಾನ್ಸ್‌ನ ಮಾನ್ಯುಯೆಲ್ ಗಿನಾರ್ಡ್– ಮೊನಾಕೊದ ರೊಮೇನ್ ಅರ್ನೇಡೊ ಜೋಡಿಯನ್ನು 1 ಗಂಟೆ 49 ನಿಮಿಷಗಳ ಪಂದ್ಯದಲ್ಲಿ ಸೋಲಿಸಿತು.
ಆದರೆ ಭಾರತದ ರೋಹನ್ ಬೋಪಣ್ಣ ಮತ್ತು ಬೆಲ್ಜಿಯಂನ ಸ್ಯಾಂಡರ್ ಗಿಲ್ ಜೋಡಿ ಹೊರಬಿತ್ತು. ಈ ಜೋಡಿಯನ್ನು 6–3, 6–4ರಿಂದ ಸೋಲಿಸಿದ ಮೂರನೇ ಶ್ರೇಯಾಂಕದ ಕೆವಿನ್ ಕ್ರಾವೀಟ್ಜ್– ಟಿಮ್ ಪುಯೆಟ್ಜ್ (ಜರ್ಮನಿ) ಜೋಡಿ ಎರಡನೇ ಸುತ್ತು ತಲುಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.