ADVERTISEMENT

Tokyo Olympics| ಈಜು: ಒಬ್ಬೊಬ್ಬರಿಗೆ ಒಂದೊಂದು ಸ್ಪರ್ಧೆ ಇಷ್ಟ

ಏಜೆನ್ಸೀಸ್
Published 21 ಜುಲೈ 2021, 18:54 IST
Last Updated 21 ಜುಲೈ 2021, 18:54 IST
ಟೋಕಿಯೊ ಅಕ್ವಾಟಿಕ್ ಕೇಂದ್ರದಲ್ಲಿ ಡೈವಿಂಗ್ ಅಭ್ಯಾಸದಲ್ಲಿ ತೊಡಗಿರುವ ಈಜುಪಟುಗಳು –ಎಎಫ್‌ಪಿ ಚಿತ್ರ
ಟೋಕಿಯೊ ಅಕ್ವಾಟಿಕ್ ಕೇಂದ್ರದಲ್ಲಿ ಡೈವಿಂಗ್ ಅಭ್ಯಾಸದಲ್ಲಿ ತೊಡಗಿರುವ ಈಜುಪಟುಗಳು –ಎಎಫ್‌ಪಿ ಚಿತ್ರ   

ಟೋಕಿಯೊ: ಒಲಿಂಪಿಕ್ಸ್ ಸೇರಿದಂತೆ ಯಾವುದೇ ಕ್ರೀಡಾಕೂಟಗಳಲ್ಲಿ ಅತಿ ಹೆಚ್ಚು ಪದಕಗಳನ್ನು ಗೆಲ್ಲುವ ಅವಕಾಶಗಳಿರುವ ಸ್ಪರ್ಧೆ ಈಜು. ಹೆಚ್ಚು ವಿಭಾಗಗಳು ಇರುವುದೇ ಇದಕ್ಕೆ ಕಾರಣ. ಆದರೂ ಕೆಲವು ದೇಶಗಳು ನಿರ್ದಿಷ್ಟ ವಿಭಾಗಕ್ಕೆ ಹೆಚ್ಚು ಒತ್ತು ನೀಡುವುದನ್ನು ಕಾಣಬಹುದಾಗಿದೆ. ಹಂಗೇರಿಯಲ್ಲಿ ಮೆಡ್ಲೆ ಪ್ರಸಿದ್ಧವಾಗಿದ್ದರೆ, ನೆದರ್ಲೆಂಡ್ಸ್‌ನಲ್ಲಿ ಸ್ಪ್ರಿಂಟ್ ವಿಭಾಗಗಳಲ್ಲಿ ಪಾಲ್ಗೊಳ್ಳಲು ಬಹುತೇಕರು ಬಯಸುತ್ತಾರೆ. ಜಪಾನಿಯರಿಗೆ ಬ್ಯಾಕ್‌ಸ್ಟ್ರೋಕ್ ಇಷ್ಟ; ಸ್ವೀಡನ್‌ ಈಜುಪಟುಗಳಿಗೆ ಬಟರ್‌ಫ್ಲೈ ಮುದ ನೀಡುತ್ತದೆ.

ಟೋಕಿಯೊ ಒಲಿಂಪಿಕ್ಸ್‌ನ ಈಜಿನಲ್ಲಿ ಒಟ್ಟು 35 ವಿಭಾಗಗಳಲ್ಲಿ ಸ್ಪರ್ಧೆಗಳು ಇವೆ. ಒಂದೊಂದು ದೇಶದಲ್ಲಿ ಕೆಲವು ಸ್ಪರ್ಧೆಗಳು ಮುನ್ನೆಲೆಗೆ ಬರಲು ಆ ವಿಭಾಗದಲ್ಲಿ ಮಿಂಚಿರುವ ಯಾವುದಾದರೂ ಈಜುಪಟು ಕೂಡ ಕಾರಣರಾಗುತ್ತಾರೆ. ಸ್ವೀಡನ್‌ನಲ್ಲಿ ಥೆರೀಸ್ ಅಲ್ಶಮರ್‌, ಅನಾ ಕರೀನ್‌, ಜೊಸೆಫಿನ್ ಲಿಲೇಜ್‌, ಹಂಗೇರಿಯಲ್ಲಿ ಥಮಾಸ್ ಡರ್ನಿ, ಕ್ರಿಸ್ಟಿನಾ ಎಜೆರ್‌ಸೆಗಿ ಮುಂತಾದವರು ಇಂಥ ‘ರೋಲ್ ಮಾಡೆಲ್‌’ಗಳಲ್ಲಿ ಕೆಲವರು.

ಜಿಂಬಾಬ್ವೆಯಿಂದ ಕಪ್ಪುವರ್ಣೀಯ ಈಜುಪಟು: ಆಫ್ರಿಖಾ ಖಂಡದ ದಕ್ಷಿಣದ ದೇಶವಾದ ಜಿಂಬಾಬ್ವೆ ಇದೇ ಮೊದಲ ಬಾರಿ ಒಲಿಂಪಿಕ್ಸ್‌ಗೆ ಕಪ್ಪುವರ್ಣೀಯ ಈಜುಪಟುವನ್ನು ಕಳುಹಿಸುತ್ತಿದೆ. ಆಫ್ರಿಕಾ ಯೂತ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದಿರುವ ಮತ್ತು ಯೂತ್‌ ವಿಭಾಗದ ದಾಖಲೆಗಳನ್ನು ಮುರಿದಿರುವ ಡೊನಾಟ ಕತಾಯಿ ಈ ಅಪರೂಪದ ಕ್ರೀಡಾಪಟು. ವಿಶೇಷವೆಂದರೆ, ಅವರ ವಯಸ್ಸು ಈಗ 17.

ADVERTISEMENT

ಆಫ್ರಿಕಾ ಖಂಡದ ಹೆಸರಾಂತ ಈಜುಪಟು, ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್‌ ಕ್ರಿಸ್ಟಿ ಕೊವೆಂಟ್ರಿ ಅವರ ಹೆಸರಿನಲ್ಲಿದ್ದ ಯೂತ್ ವಿಭಾಗದ ದಾಖಲೆಯನ್ನು ಡೊನಾಟ ಮುರಿದಿದ್ದರು. ಆ ಯಶಸ್ಸಿನ ಭರವಸೆಯೊಂದಿಗೆ ಟೋಕಿಯೊಗೆ ಬಂದಿರುವ ಅವರು ಒಲಿಂಪಿಕ್ಸ್‌ನಲ್ಲೂ ಪದಕ ಗೆದ್ದು ಸಾಧನೆಯ ಮತ್ತೊಂದು ಮೆಟ್ಟಿಲು ಏರಲು ಸಿದ್ಧರಾಗಿದ್ದಾರೆ. ಜಿಂಬಾಬ್ವೆ ಜನಸಂಖ್ಯೆಯ 99 ಶೇಕಡಾ ಮಂದಿ ಕಪ್ಪುವರ್ಣೀಯರು. ಆದರೂ ಒಲಿಂಪಿಕ್ಸ್‌ನಲ್ಲಿ ಅವರನ್ನು ಪ್ರತಿನಿಧಿಸುವ ಒಬ್ಬರು ಈಜುಪಟುವನ್ನು ನೋಡಲು ಇಷ್ಟು ವರ್ಷ ಕಾಯಬೇಕಾಗಿ
ಬಂದಿತ್ತು.

ಉದ್ಘಾಟನಾ ಸಮಾರಂಭಕ್ಕೆ 30 ಮಂದಿ ಮಾತ್ರ: ಒಲಿಂಪಿಕ್ಸ್‌ಗೆ ಇಂಗ್ಲೆಂಡ್‌ನಿಂದ 376 ಕ್ರೀಡಾಪಟುಗಳನ್ನು ಕಳುಹಿಸಲಾಗಿದೆ. ಆದರೆ ಉದ್ಘಾಟನಾ ಸಮಾರಂಭದಲ್ಲಿ 30 ಮಂದಿ ಮಾತ್ರ ಪಾಲ್ಗೊಳ್ಳಲಿದ್ದಾರೆ. ಕೋವಿಡ್‌ ಹರಡುವ ಭೀತಿಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.