ADVERTISEMENT

ವಿಶ್ವಕಪ್‌ 1999: ಏಕಮುಖಿ ಫೈನಲ್‌ನಲ್ಲಿ ಮಿಂಚಿದ ಶೇನ್ ವಾರ್ನ್

​ಪ್ರಜಾವಾಣಿ ವಾರ್ತೆ
Published 13 ಮೇ 2019, 1:54 IST
Last Updated 13 ಮೇ 2019, 1:54 IST
   

ಪಾಕಿಸ್ತಾನ ತೋರಿದ್ದ ಖದರು ಒಂದು ಕಡೆ. ಅತ್ತಿತ್ತಲಾಗಿದೆಯೇನೊ ಎನ್ನುವಂತೆ ತಡಕಾಡುತ್ತಲೇ ಬಂದ ಆಸ್ಟ್ರೇಲಿಯಾ ಇನ್ನೊಂದು ಕಡೆ. ಇವೆರಡೂ ತಂಡಗಳು 1999ರ ವಿಶ್ವಕಪ್ ಫೈನಲ್ಸ್‌ನಲ್ಲಿ ಮುಖಾಮುಖಿಯಾದದ್ದು ಜೂನ್ 10ರಂದು ಲಂಡನ್‌ನಲ್ಲಿ. ಟಾಸ್ ಗೆದ್ದು ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡಾಗ ಆ ತಂಡವೇ ಗೆಲ್ಲಬಹುದೇನೊ ಎಂದು ಅನೇಕರು ಅಂದುಕೊಂಡಿದ್ದರು.

* ಹೊಸ ಬಿಳಿ ಚೆಂಡಿನಲ್ಲಿ ಗ್ಲೆನ್ ಮೆಕ್‌ಗ್ರಾ ಕರಾಮತ್ತು ತೋರಲಾರಂಭಿಸಿದರು. ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳಿಗೆ ಮೊದಲಿನಿಂದಲೇ ಪೀಕಲಾಟ.

* 21 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಾಗಲೇ ಆಸ್ಟ್ರೇಲಿಯಾ ಮೇಲುಗೈ ಕಾಣಲಾರಂಭಿಸಿತು.

ADVERTISEMENT

* ಅಬ್ದುಲ್ ರಜಾಕ್ ಹಾಗೂ ಇಜಾಜ್ ಅಹಮದ್ ಚೆಂಡಿನ ತಿರುವು, ಗತಿ ಎಲ್ಲವನ್ನೂ ಅಳೆದೂ ತೂಗಿ ಮೂರನೇ ವಿಕೆಟ್‌ಗೆ 47 ರನ್‌ಗಳ ಜತೆಯಾಟ ಆಡಿದರು. ಟಾಮ್ ಮೂಡಿ ಎಸೆತವನ್ನು ಡ್ರೈವ್ ಮಾಡಲು ಹೋಗಿ ರಜಾಕ್ ಕವರ್ಸ್‌ನಲ್ಲಿದ್ದ ಸ್ಟೀವ್ ವಾ ಕೈಗೆ ಕ್ಯಾಚಿತ್ತರು. ಅಲ್ಲಿಂದ ಪಾಕಿಸ್ತಾನದ ಆತ್ಮವಿಶ್ವಾಸಕ್ಕೇ ಕೊಡಲಿ ಪೆಟ್ಟು ಬಿತ್ತು.

* ರೈಪಾಲ್ ಎಸೆತವನ್ನು ಕೆಣಕುವ ವಿಫಲ ಯತ್ನದಲ್ಲಿ ಇಂಜಮಾಮ್ ಉಲ್ ಹಕ್ ವಿಕೆಟ್ ಕೀಪರ್ ಆ್ಯಡಂ ಗಿಲ್‌ಕ್ರಿಸ್ಟ್ ಪಡೆದ ಕ್ಯಾಚ್‌ಗೆ ಬಲಿಯಾದರು. ಆ ತೀರ್ಪಿನ ಕುರಿತು ಇಂಜಮಾಮ್ ಅವರಿಗೆ ತೃಪ್ತಿ ಇರಲಿಲ್ಲ. ಭಾರವಾದ ಹೆಜ್ಜೆ ಹಾಕುತ್ತಾ ಅವರು ನಡೆದಾಗ ಪಾಕಿಸ್ತಾನದ ಸ್ಕೋರ್ 31ನೇ ಓವರ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 107.

* ತಿರುವು ಪಡೆಯುತ್ತಿದ್ದ ಪಿಚ್‌ನಲ್ಲಿ ಶೇನ್ ವಾರ್ನ್ 4 ವಿಕೆಟ್ ಗಳಿಸಿ ಬೀಗಿದರು. ಪಾಕಿಸ್ತಾನ ಬರೀ 132 ರನ್‌ಗಳಿಗೆ 40 ಓವರ್ ಒಳಗೇ ಧೂಳೀಪಟ. ಮೆಕ್ ಗ್ರಾ ಹಾಗೂ ಮೂಡಿ ಬುಟ್ಟಿಗೆ ತಲಾ ಎರಡು ವಿಕೆಟ್‌ಗಳು ಬಿದ್ದವು.

* ಪಾಕಿಸ್ತಾನದ ಪರವಾಗಿ ಇಜಾಜ್ ಅಹಮದ್ ಮಾತ್ರ 22 ರನ್ ಗಳಿಸಿದರು. ಉಳಿದ ಯಾರು ಕೂಡ 20ರ ಗಡಿಯನ್ನೇ ದಾಟಲಿಲ್ಲ.

* ಆ್ಯಡಂ ಗಿಲ್‌ಕ್ರಿಸ್ಟ್ ತಮ್ಮ ಬ್ಯಾಟ್ ಬೀಸಲು ಬೇಕಾದ ಪರವಾನಗಿಯನ್ನು ಪಾಕ್‌ನ ಅಲ್ಪ ಮೊತ್ತ ಒದಗಿಸಿತು. ಲೀಲಾಜಾಲವಾಗಿ ಡ್ರೈವ್, ಪುಲ್‌ಗಳನ್ನು ಮಾಡುತ್ತಾ ಅವರು ಪಾಕಿಸ್ತಾನದ ವೇಗಿಗಳ ಬೆವರಿಳಿಸಿದರು. 8 ಬೌಂಡರಿ, 1 ಸಿಕ್ಸರ್ ಸೇರಿದ್ದ 54 ರನ್‌ಗಳನ್ನು ಅವರು ಬರೀ 36 ಎಸೆತ ಗಳಲ್ಲಿ ಗಳಿಸಿ ಔಟಾದರು. 10.1 ಓವರ್‌ಗಳಲ್ಲಿ ಆಸ್ಟ್ರೇಲಿಯಾ ಸ್ಕೋರ್ ಆಗ 75 ರನ್‌ಗಳಾಗಿತ್ತು.

* ರಿಕಿ ಪಾಂಟಿಂಗ್ ಕೂಡ ಪಟಪಟನೆ 24 ರನ್‌ ದಾಖಲಿಸಿ ಔಟಾಗುವಷ್ಟರಲ್ಲಿ ಆಸ್ಟ್ರೇಲಿಯಾ ಗೆಲುವಿನ ಮನೆಯ ತಲೆಬಾಗಿಲಿನ ಎದುರಲ್ಲಿತ್ತು.

* ಮಾರ್ಕ್ ವಾ ಎಲ್ಲರ ಬ್ಯಾಟಿಂಗ್‌ ಕಣ್ತುಂಬಿಕೊಂಡು ಔಟಾಗದೆ 37 ರನ್ ಗಳಿಸಿದರು. ಕೇವಲ 20.1 ಓವರ್‌ಗಳಲ್ಲಿ ಎರಡೇ ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾ ಸಲೀಸಾಗಿ ಗುರಿ ಮುಟ್ಟಿತು.

* ಆ ದಿನ ಮಳೆ ಸುರಿದಿದ್ದರಿಂದ ಪಂದ್ಯ ಅರ್ಧ ಗಂಟೆ ತಡವಾಗಿ ಶುರುವಾಗಿತ್ತು. ಆದರೆ, ನಿಗದಿತ ಅವಧಿಗಿಂತ ಸಾಕಷ್ಟು ಬೇಗ ಮುಗಿಯಿತು.

* ಶೇನ್ ವಾರ್ನ್ ಪಂದ್ಯ ಪುರುಷೋತ್ತಮ ಎನಿಸಿದರು. ಲ್ಯಾನ್ಸ್ ಕ್ಲೂಸ್ನರ್ ಸರಣಿ ಶ್ರೇಷ್ಠ ಎನಿಸಿಕೊಂಡರು. ರಾಹುಲ್ ದ್ರಾವಿಡ್ ಅತಿ ಹೆಚ್ಚು (461) ರನ್ ಗಳಿಸಿದ ಬ್ಯಾಟ್ಸ್‌ಮನ್ ಆದರೆ, ನ್ಯೂಜಿಲೆಂಡ್‌ನ ಜೆಫ್ ಅಲಾಟ್ ಹಾಗೂ ವಾರ್ನ್ ತಲಾ 20 ವಿಕೆಟ್‌ಗಳೊಂದಿಗೆ ಅಗ್ರ ಬೌಲರ್‌ಗಳೆಂಬ ಗೌರವ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.