ADVERTISEMENT

ಟಿ20 ಕ್ರಿಕೆಟ್: ಆಸ್ಟ್ರೇಲಿಯಾದಲ್ಲಿ ಜಯದ ಇತಿಹಾಸ ಬರೆಯುವತ್ತ ಹರ್ಮನ್ ಪಡೆ ಚಿತ್ತ

ಸರಣಿ ಜಯದ ದಾಖಲೆಯ ಮೇಲೆ ಭಾರತ ಕಣ್ಣು

ಪಿಟಿಐ
Published 20 ಫೆಬ್ರುವರಿ 2026, 23:30 IST
Last Updated 20 ಫೆಬ್ರುವರಿ 2026, 23:30 IST
ಹರ್ಮನ್‌ಪ್ರೀತ್ ಕೌರ್ 
ಹರ್ಮನ್‌ಪ್ರೀತ್ ಕೌರ್    

ಅಡಿಲೇಡ್: ಆಸ್ಟ್ರೇಲಿಯಾದ ನೆಲದಲ್ಲಿ ಮೊದಲ ಬಾರಿಗೆ ಮಹಿಳೆಯರ ಟಿ20 ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡುವ ಅವಕಾಶದ ಹೊಸ್ತಿಲಲ್ಲಿ ಭಾರತ ತಂಡ ಇದೆ. 

ಮೂರು ಪಂದ್ಯಗಳ ಈ ಸರಣಿಯಲ್ಲಿ ಉಭಯ ತಂಡಗಳು 1–1ರ ಸಮಬಲ ಸಾಧಿಸಿವೆ.  ಕೊನೆಯ ಪಂದ್ಯವು ಶನಿವಾರ ಇಲ್ಲಿ ನಡೆಯಲಿದೆ. ಭಾರತ ತಂಡವು ಈ ಹಿಂದೆಯೂ ಕೆಲವು ಪಂದ್ಯಗಳಲ್ಲಿ ಜಯಿಸಿದೆ. ಆದರೆ, ಸರಣಿ ಗೆದ್ದಿಲ್ಲ.

ಇದಕ್ಕಾಗಿ ಭಾರತದ ಪ್ರಮುಖ ಬ್ಯಾಟರ್‌ಗಳು ತಮ್ಮ ನೈಜ ಸಾಮರ್ಥ್ಯ ಮೆರೆಯಬೇಕಾದ ಅಗತ್ಯವಿದೆ. ಅದರಲ್ಲೂ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಅವರು ಉತ್ತಮ ಆರಂಭ ನೀಡಿದರೆ ನಂತರದ ಕ್ರಮಾಂಕದ ಬ್ಯಾಟರ್‌ಗಳಿಗೆ ಸುಲಭವಾಗಲಿದೆ.

ADVERTISEMENT

ಎರಡನೇ ಪಂದ್ಯದಲ್ಲಿ 164 ರನ್‌ಗಳ ಗುರಿ ಬೆನ್ನಟ್ಟಿದ ಸಂದರ್ಭದಲ್ಲಿ ಸ್ಮೃತಿ ಮತ್ತು ಶಫಾಲಿ ಅವರು ಉತ್ತಮ ಆರಂಭ ನೀಡಲಿಲ್ಲ. ಆಸ್ಟ್ರೇಲಿಯಾ ತಂಡದ ಅನುಭವಿಗಳಾದ ಕಿಮ್ ಗಾರ್ಥ್, ಅನಾಬೆಲ್ ಸದರ್ಲೆಂಡ್ ಮತ್ತು ಸೋಫಿ ಮಾಲಿನೆ ಅವರು ಭಾರತ ತಂಡದ ಐದು ವಿಕೆಟ್‌ಗಳನ್ನು ಏಳು ರನ್‌ಗಳ ಅಂತರದಲ್ಲಿ ಉರುಳಿಸಿದ್ದರು. 

ಆದರೆ ಅಡಿಲೇಡ್ ಮೈದಾನದಲ್ಲಿ ಉತ್ತಮ ಔಟ್‌ಫೀಲ್ಡ್ ಇದೆ. ಬ್ಯಾಟರ್‌ಗಳಿಗೆ ಹೆಚ್ಚು ನೆರವು ನೀಡುವ ಲಕ್ಷಣಗಳಿವೆ. ಇದರಿಂದಾಗಿ ಭಾರತ ತಂಡದ ನಾಯಕಿ ಹರ್ಮನ್‌ಪ್ರೀಥ್ ಕೌರ್, ಜಿಮಿಮಾ ರಾಡ್ರಿಗಸ್ ಮತ್ತು ರಿಚಾ ಘೋಷ್ ಅವರಿಗೆ ರನ್ ಗಳಿಸಲು ಉತ್ತಮ ಅವಕಾಶಗಳಿವೆ. ಮಧ್ಯಮವೇಗಿಗಳಾದ ರೇಣುಕಾ ಸಿಂಗ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್ ಮತ್ತು ಅಮನ್ಜೋತ್‌ ಕೌರ್ ಅವರ ಮುಂದೆ ಆಸ್ಟ್ರೇಲಿಯಾದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲು ಇದೆ. ಸ್ಪಿನ್ನರ್ ದೀಪ್ತಿ ಶರ್ಮಾ ಮತ್ತು ಶ್ರೀ ಚರಣಿ ಅವರೂ ತಮ್ಮ ಕೈಚಳಕ ತೋರಿದರೆ ಬೌಲಿಂಗ್ ವಿಭಾಗದ ಶಕ್ತಿ ಹೆಚ್ಚಬಹುದು.

ಆತಿಥೇಯ ತಂಡದ ಯುವ ಆಟಗಾರ್ತಿ ಜಾರ್ಜಿಯಾ ವೊಲ್ ಅವರಿಗೆ ತಡೆಯೊಡ್ಡುವುದೇ ಪ್ರಮುಖ ಸವಾಲಾಗಲಿದೆ. 22 ವರ್ಷದ ಜಾರ್ಜಿಯಾ ಅವರು ಕಳೆದ ಪಂದ್ಯದಲ್ಲಿಯೂ ಮಿಂಚಿದ್ದರು. ಅವರು ಮತ್ತು ಬೆತ್ ಮೂನಿ ಅವರು ಸೇರಿ ಉತ್ತಮ ಆರಂಭ ನೀಡಿದ್ದರು. ಇವರಲ್ಲದೇ ಅನಾಬೆಲ್ ಸದರ್ಲೆಂಡ್ ಹಾಗೂ ಆ್ಯಷ್ಲೆ ಗಾರ್ಡನರ್ ಅವರು ರನ್‌ ಹೊಳೆ ಹರಿಸುವ ಸಮರ್ಥರಾಗಿದ್ದಾರೆ. 

ಪಂದ್ಯ ಆರಂಭ: ಮಧ್ಯಾಹ್ನ 1.45

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.