ADVERTISEMENT

ಅತ್ಯಾಚಾರ ತಡೆಗೆ `ಫೈಟ್ ಬ್ಯಾಕ್' ಅಪ್ಲಿಕೇಷನ್

ಪ್ರಜಾವಾಣಿ ವಿಶೇಷ
Published 9 ಜನವರಿ 2013, 20:24 IST
Last Updated 9 ಜನವರಿ 2013, 20:24 IST

ಇತ್ತೀಚೆಗೆ ದೆಹಲಿಯಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆ ದೇಶದಾದ್ಯಂತ ಆಕ್ರೋಶ, ತಲ್ಲಣ ಉಂಟು ಮಾಡಿರುವುದರ ಜತೆಗೆ, ದಿನೇ ದಿನೇ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಹಾಗೂ `ಬೀದಿ ಕಾಮಣ್ಣ'ರ ಕೀಟಲೆಗಳಿಗೆ ಕಡಿವಾಣ ಹಾಕುವ ತಂತ್ರಗಳ ಆನ್ವೇಷಣೆ ನಿಟ್ಟಿನಲ್ಲಿ ಸಾರ್ವತ್ರಿಕವಾದ ಒಂದು ಚಿಂತನೆಗೆ ದಾರಿ ಮಾಡಿಕೊಟ್ಟಿದೆ.

ಈ ನಿಟ್ಟಿನಲ್ಲಿ ದೆಹಲಿ ಮೂಲದ `ವೈಪೋಲ್' ಎಂಬ ಎನ್‌ಜಿಒ, ಅತ್ಯಾಚಾರದಂತಹ ಅಪಾಯಕಾರಿ ಸನ್ನಿವೇಶಕ್ಕೆ ಸಿಲುಕುವ ಮಹಿಳೆಯರ ಸಹಾಯಕ್ಕಾಗಿ `ಫೈಟ್ ಬ್ಯಾಕ್' ಎಂಬ ಮೊಬೈಲ್ ಅಪ್ಲಿಕೇಷನ್ ಪರಿಚಯಿಸಿದೆ. ಈ ಅಪ್ಲಿಕೇಷನ್‌ನ ಮೊಬೈಲ್ ಹೊಂದಿರುವ ಮಹಿಳೆ, ಅಪಾಯಕಾರಿ ಸನ್ನಿವೇಶಕ್ಕೆ ಸಿಲುಕಿದಾಗ ಮೊಬೈಲ್‌ನಲ್ಲಿ `ಅಪಾಯದ ಕರೆ ಗಂಟೆ'ಯ ಬಟನ್ ಒತ್ತಿದರೆ ಸಾಕು ತಕ್ಷಣವೇ ಅವರ ಕುಟುಂಬ ವರ್ಗ, ಸ್ನೇಹಿತರ ವಲಯ, ಪೊಲೀಸ್ ಠಾಣೆ ಸೇರಿದಂತೆ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಕ್ಕೆ `ಅಪಾಯದ ಸಂದೇಶ' ರವಾನೆಯಾಗಿ ಸಕಾಲದಲ್ಲಿ ಅವರಿಗೆ ರಕ್ಷಣೆ ದೊರೆಯುತ್ತದೆ ಎನ್ನುತ್ತಾರೆ ವೈಪೋಲ್‌ನ ಸಹ ಸಂಸ್ಥಾಪಕರಾದ ಶ್ವೇತಾ ಪೂಂಜ್.

ನಾನು ಬೆಳೆದದ್ದು ಯಾವಾಗಲೂ ಅಸುರಕ್ಷಿತ ವಾತಾವರಣವಿರುವ ದೆಹಲಿಯಲ್ಲಿ. ಇದು ಇತ್ತೀಚಿನ ದಿನಗಳಲ್ಲಂತೂ ತುಂಬಾ ಕುಲಗೆಟ್ಟು ಹೋಗಿದೆ. ಇಂತಹ ಅಸುರಕ್ಷಿತ ವಾತಾವರಣದಲ್ಲಿ ಬದುಕುವ ಮಹಿಳೆಯರ ಸುರಕ್ಷತೆಗಾಗಿ ಏನಾದರೂ ಮಾಡಬೇಕೆಂಬ ತುಡಿತದ ಫಲವೇ `ಫೈಟ್ ಬ್ಯಾಕ್' ಅಪ್ಲಿಕೇಷನ್' ಎನ್ನುತ್ತಾರೆ ಶ್ವೇತಾ. ಮೊಬೈಲ್ ಪೋನ್ ಅಪ್ಲಿಕೇಷನ್ ಅಭಿವೃದ್ಧಿಪಡಿಸುವ ಕಂಪೆನಿ `ಕ್ಯಾನ್ವಾಸ್ ಎಂ' ಸಹಯೋಗದಲ್ಲಿ ವೈಪೋಲ್ ಸಂಸ್ಥೆ ಪರಿಚಯಿಸಿರುವ ಈ ಅಪ್ಲಿಕೇಷನ್ ಎಸ್‌ಎಂಎಸ್, ಜಿಪಿಎಸ್, ಲೊಕೇಷನ್ ಮ್ಯಾಪ್, ಜಿಪಿಆರ್‌ಎಸ್ ಸೇವೆ ಹಾಗೂ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳೊಂದಿಗೂ ಸಂಪರ್ಕ ಬೆಸೆದುಕೊಂಡಿದೆ.ಮಹಿಳೆಯರ ಸುರಕ್ಷತೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾದ ದೇಶದ ಮೊದಲ ಮೊಬೈಲ್ ಅಪ್ಲಿಕೇಷನ್ ಎಂಬ ಶ್ರೇಯ ಹೊಂದಿರುವ `ಫೈಟ್ ಬ್ಯಾಕ್' ಬಳಕೆದಾರ ಸ್ನೇಹಿಯಾಗಿದ್ದು, ವಾರ್ಷಿಕ ಶುಲ್ಕ ಕೇವಲ 100 ರೂಪಾಯಿ ಮಾತ್ರ!

ಅಪ್ಲಿಕೇಷನ್ ಪಡೆಯುವುದು ಹೇಗೆ?
ಈ ಅಪ್ಲಿಕೇಷನ್ ಬೇಕಾದರೆ fightbackmobile.com ವೆಬ್ ಪೊರ್ಟ್ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದಕ್ಕೂ ಮುನ್ನ ಸೇವಾ ಶುಲ್ಕ ಪಾವತಿಸಬೇಕು ಹಾಗೂ ಆನ್‌ಲೈನ್ ನೋಂದಣಿ ಅರ್ಜಿಯಲ್ಲಿ ವೈಯಕ್ತಿಕ ಮಾಹಿತಿ ಜತೆಗೆ ತುರ್ತು ಕಾಲದ ಸಹಾಯಕ್ಕಾಗಿ ಬೇಕಾಗುವ ಕುಟುಂಬ ಸದಸ್ಯರು, ಸ್ನೇಹಿತರು ಸೇರಿದಂತೆ ಆಯ್ದ ಐವರು ಆಪ್ತರ ಮೊಬೈಲ್ ಸಂಖ್ಯೆಗಳನ್ನು ನೋಂದಾಯಿಸುವ ಮೂಲಕ ಬಳಕೆದಾರರ ಖಾತೆ (ಯೂಸರ್ ಅಕೌಂಟ್) ತೆರೆದಿರಬೇಕು. ಅಪ್ಲಿಕೇಷನ್ ಕಾರ್ಯನಿರ್ವಹಣೆ
ಮೊಬೈಲ್‌ನಲ್ಲಿ ಅಪ್ಲಿಕೇಷನ್ ಅನುಸ್ಥಾಪಿಸಿದ (ಇನ್‌ಸ್ಟಾಲ್) ನೋಂದಾಯಿತ ಬಳಕೆದಾರರು, ಅಪಾಯದ ಸನ್ನಿವೇಶದಲ್ಲಿ ಅಪ್ಲಿಕೇಷನ್‌ನಲ್ಲಿರುವ ಅಪಾಯ ಸೂಚಕ ಗುಂಡಿ (ಪ್ಯಾನಿಕ್ ಬಟನ್) ಒತ್ತಿದ ತಕ್ಷಣವೇ ಅಪಾಯದ ಸಂದೇಶವನ್ನು ಸ್ವೀಕರಿಸುವ ಪೋರ್ಟಲ್, ತಕ್ಷಣವೇ ತನ್ನ ಡಾಟಾಬೇಸ್‌ನಲ್ಲಿ ಬಳಕೆದಾರರು ಇರುವ ಸ್ಥಳದ ಮಾಹಿತಿಯನ್ನು ಅಪಡೇಟ್ ಮಾಡುತ್ತದೆ.

ಜತೆಗೆ ಅಪಾಯ ಸೂಚಕ ಪುಟವು (ಅಲರ್ಟ್ ಪೇಜ್) ಪರಿಷ್ಕರಣೆಗೊಳ್ಳುವುದರೊಂದಿಗೆ ಇತರೆ ಬಳಕೆದಾರರೆಲ್ಲರಿಗೂ ಅಪಾಯಕ್ಕೆ ಸಿಲುಕಿರುವ ಬಳಕೆದಾರರು ಇರುವ ಸ್ಥಳವನ್ನು ಗೂಗಲ್ ನಕ್ಷೆಯಲ್ಲಿ ತೋರಿಸುತ್ತದೆ. ಅಷ್ಟೇ ಅಲ್ಲದೇ, ಅಪಾಯಕ್ಕೆ ಸಿಲುಕಿದವರು ನೋಂದಾಯಿಸಿರುವ ಆಯ್ದ ಐದು ಮೊಬೈಲ್ ಸಂಖ್ಯೆಗಳಿಗೆ ಎಸ್‌ಎಂಎಸ್ ರವಾನಿಸುವುದರೊಂದಿಗೆ ಈ ಅಪ್ಲಿಕೇಷನ್ ಬಳಕೆದಾರರ ಫೇಸ್‌ಬುಕ್ ಖಾತೆಗೂ ಕೂಡ `ಎಚ್ಚರಿಕೆ ಸಂದೇಶ' ರವಾನಿಸುತ್ತದೆ. ಈ ಸಂದೇಶವನ್ನು ಬಳಕೆದಾರರ ಫೇಸ್‌ಬುಕ್ ಖಾತೆಯ ಸ್ನೇಹಿತರೂ ವೀಕ್ಷಿಸಬಹುದಾಗಿದೆ.

ಅಪಾಯದ ಸಂದೇಶದಿಂದ ಎಚ್ಚೆತ್ತು ತೊಂದರೆಗೆ ಸಿಲುಕಿದವರ ರಕ್ಷಣೆಗೆ ಮುಂದಾಗುವವರು ಪೋರ್ಟಲ್‌ನಲ್ಲಿರುವ ಅಲರ್ಟ್ ಪೇಜ್‌ಗೆ ಭೇಟಿ ನೀಡಿದರೆ ಅವರಿಗೆ ಅಲ್ಲಿ ದಿನ, ವೇಳೆ ಸಹಿತ ಅಪಾಯಕ್ಕೆ ಸಿಲುಕಿದವರು ಇರುವ ಸ್ಥಳದ ಮಾಹಿತಿ ಗೂಗಲ್ ನಕ್ಷೆಯಲ್ಲಿ ಕಾಣಸಿಗುತ್ತದೆ. ಇದರಿಂದ ಅಪಾಯದಲ್ಲಿದ್ದವರ ರಕ್ಷಣೆಗೆ ಶೀಘ್ರವಾಗಿ ಧಾವಿಸಲು ಸಾಧ್ಯವಾಗುತ್ತದೆ. ನೋಂದಾಯಿತ ಬಳಕೆದಾರರಲ್ಲದವರು ಪೋರ್ಟಲ್‌ಗೆ ಭೇಟಿ ನೀಡಿ ಸಂದೇಶಗಳನ್ನು ನೋಡಬಹುದೇ ವಿನಃ ಯಾವುದೇ ಮಾಹಿತಿ ಪರಿಷ್ಕರಿಸಲು ಸಾಧ್ಯವಿಲ್ಲ.`ಭಾರತೀಯರು ತಮ್ಮ ಹತ್ತಿರದವರ ಹಾಗೂ ಆಪ್ತರ ಮೇಲೆ ತುಂಬಾ ಅವಲಂಬಿತರಾಗಿರುತ್ತಾರೆ. ಏಕೆಂದರೆ ಅಪಾಯದ ಸನ್ನಿವೇಶದಲ್ಲಿ ವ್ಯವಸ್ಥೆ ನಮ್ಮ ಸಹಾಯಕ್ಕೆ ಬರುತ್ತದೆ ಎಂಬುವುದರಲ್ಲಿ ನಮಗೆ ನಂಬಿಕೆಯಿಲ್ಲ' ಎನ್ನುತ್ತಾರೆ `ವೈಪೋಲ್' ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಹಿಂದೊಲ್ ಸೇನ್ ಗುಪ್ತಾ.

ಯಾವ ಪೋನ್‌ನಲ್ಲಿ ಬಳಕೆ?

ಬ್ಲ್ಯಾಕ್‌ಬೆರ‌್ರಿ, ಎಚ್‌ಟಿಸಿ, ಸ್ಯಾಂಸಂಗ್, ನೋಕಿಯಾ ಸ್ಮಾರ್ಟ್‌ಪೋನ್ ಸೇರಿದಂತೆ ಆಯ್ದ ಆಂಡ್ರಾಯ್ಡ ನಿರ್ವಹಣಾ ವ್ಯವಸ್ಥೆ ಇರುವ ಮೊಬೈಲ್‌ಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸಬಲ್ಲ ಈ ಅಪ್ಲಿಕೇಷನ್ ಸದ್ಯ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಬಳಕೆಗೆ ಲಭ್ಯ. ಮುಂಬರುವ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳಿಗೂ ಸೌಲಭ್ಯ ವಿಸ್ತರಿಸಲಾಗುವುದು. ಪ್ರಸ್ತುತ ದೆಹಲಿಗಷ್ಟೇ ಸಿಮೀತವಾಗಿರುವ ಈ ಸೇವೆಗೆ ಶೀಘ್ರವೇ ಒಂಬತ್ತು ಪ್ರಮುಖ ನಗರಗಳಲ್ಲಿ ಚಾಲನೆ ನೀಡಲಾಗುವುದು' ಎಂದಿದ್ದಾರೆ ಹಿಂದೊಲ್.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.