ADVERTISEMENT

ಉಸಿರಾಟದಿಂದಲೇ ರೋಗ ಪತ್ತೆ!

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 19:30 IST
Last Updated 4 ಮಾರ್ಚ್ 2014, 19:30 IST

ವ್ಯಕ್ತಿಯ ಉಸಿರಾಟದಿಂದಲೇ  ರೋಗ ಪತ್ತೆಹಚ್ಚಬಲ್ಲ ಲೇಸರ್ ಸಾಧನವೊಂದು ತಯಾರಾಗಿದೆ. ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್ ವಿಶ್ವವಿದ್ಯಾಲಯದ ಭೌತವಿಜ್ಞಾನಿಗಳು ಈ ಸಾಧನ ಅಭಿವೃದ್ಧಿಪಡಿಸಿದ್ದಾರೆ.

ಇತರೆ ಲೇಸರ್ ಸಾಧನಗಳಿಗಿಂತ ಇದು 25 ಪಟ್ಟು ಹೆಚ್ಚಿನ ಬೆಳಕನ್ನು ಹೊರಸೂಸಬಲ್ಲದು. ಅಲ್ಲದೆ ಮಧ್ಯಮ ಅತಿಗೆಂಪು ಬೆಳಕನ್ನು ಹೊರಸೂಸುವ ಲೇಸರ್ ಸಾಧನಗಳಿಗಿಂತ ಹೆಚ್ಚು ಶಕ್ತಿಶಾಲಿ ಮತ್ತು ದಕ್ಷತೆ ಹೊಂದಿದೆ ಎನ್ನುವುದು ಸಂಶೋಧಕ ಓರಿ ಹೆಂಡರ್ಸನ್ ಸಪಿರ್ ಅವರ ಅಭಿಮತ.

ಫೈಬರ್ ಲೇಸರ್ ಸಾಧನದಲ್ಲಿ ಮಧ್ಯ ಅತಿಗೆಂಪು ಬೆಳಕನ್ನು ಹೊರಸೂಸಲು ಇದ್ದ ತಾಂತ್ರಿಕ ದೋಷಗಳನ್ನು ನಿವಾರಿಸಿ ಈ ಸಾಧನ ಸಿದ್ಧಪಡಿಸಲಾಗಿದೆ. ಇದು ಹೈಡ್ರೋಕಾರ್ಬನ್ ಅನಿಲಗಳು ಬೆಳಕನ್ನು ಹೀರಿಕೊಳ್ಳುವ ಮಾದರಿಯಲ್ಲಿ ಕೆಲಸ ಮಾಡುತ್ತದೆ ಎನ್ನುತ್ತಾರೆ ಅವರು.

ಕಡಿಮೆ ತೂಕದು, ಸುಲಭವಾಗಿ ಹೊತ್ತೊಯ್ಯ­ಬಹುದಾದ ಈ ಸಾಧನ  ಕೊಠಡಿಯ ತಾಪಮಾ­ನದಲ್ಲಿ 3.6ಮೈಕ್ರೋನ್ಸ್‌ನಷ್ಟು ಮಧ್ಯಮ ಅತಿಗೆಂಪು ಬೆಳಕನ್ನು ಹೊರಸೂಸಬಲ್ಲ ಸಾಮರ್ಥ್ಯ ಹೊಂದಿದೆ. ಮಧುಮೇಹ ಇರುವ ರೋಗಿ ಉಸಿರಾಟ ನಡೆಸಿದಾಗ ಅಸೆಟಾನ್ (ಸುಡುವು ದ್ರವ) ಹೊರಬರುತ್ತದೆ. ಹೀಗೆಯೇ ವ್ಯಕ್ತಿಯು ಉಸಿರಾಡುವಾಗ ಅದನ್ನು ಈ ಲೇಸರ್ ಸಾಧನದಿಂದ ಪರೀಕ್ಷಿಸುವ ಮೂಲಕ ರೋಗಲಕ್ಷಣಗಳನ್ನು ತಿಳಿಯಬಹುದು ಎನ್ನುತ್ತಾರೆ ತಜ್ಞರು.

ಇಷ್ಟೇ ಅಲ್ಲದೆ  ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿರುವ ವಾತಾವರಣದಲ್ಲಿರುವ ಮೀಥೇನ್ ಮತ್ತು ಈಥೇನ್ ಅನಿಲಗಳ ಪತ್ತೆಹಚ್ಚಲು, ಹಸಿರುಮನೆ ಅನಿಲಗಳಿಂದ ಎದುರಾಗುವ ಸಮಸ್ಯೆಗಳನ್ನು ನಿರ್ದಿಷ್ಟವಾಗಿ ಗುರುತಿಸಲು ಈ ನೂತನ ಸಾಧನ ಹೆಚ್ಚು ಉಪಯುಕ್ತವಾಗಲಿದೆ ಎನ್ನುವುದು ತಂತ್ರಜ್ಞರ ಅಭಿಮತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.