ADVERTISEMENT

ಎಂಎಸ್‌ಗೆ ಕಾನ್‌ಫಿಕರ್ ವರ್ಮ್ ಭೀತಿ!

​ಪ್ರಜಾವಾಣಿ ವಾರ್ತೆ
Published 1 ಮೇ 2012, 19:30 IST
Last Updated 1 ಮೇ 2012, 19:30 IST

`ಒಂದು ಕಂಪ್ಯೂಟರ್ ಖರೀದಿಸಿದರೆ ಭರ್ತಿ ವೈರಸ್ ಫ್ರೀ~...
ಇದೊಂದು ಹಳೆ ಜೋಕು. ಆದರೆ, ಇದರ ತಾತ್ಪರ್ಯ ಮಾತ್ರ ಅಕ್ಷರಶಃ ನಿಜ.
`ಮೂಗು ಇದ್ದ ಮೇಲೆ ನೆಗಡಿ ಖಂಡಿತ~ ಎಂಬ ಮಾತಿನಂತೆ ಕಂಪ್ಯೂಟರ್ ಇದ್ದಲ್ಲಿ ವೈರಸ್ ಹಾವಳಿಯೂ ಖಚಿತ.ಕಳೆದ ವಾರ ಮೈಕ್ರೊಸಾಫ್ಟ್ ಕಂಪನಿ ಬಹಿರಂಗಪಡಿಸಿದ ಹೊಸ ಸಮಾಚಾರವೆಂದರೆ `ಕಾನ್‌ಫಿಕರ್ ವರ್ಮ್~!

ಮೈಕ್ರೊಸಾಫ್ಟ್ ವಿಂಡೋಸ್ ಆಪರೇಟಿಂಗ್ ಸಿಸ್ಟಮನ್ನೇ ಗುರಿಯಾಗಿಟ್ಟುಕೊಂಡಿದ್ದ ಹೊಸ ಕಂಪ್ಯೂಟರ್ ವರ್ಮ್ ಕಳೆದ ಎರಡೂವರೆ ವರ್ಷಗಳಲ್ಲಿ ಅಂದಾಜು 22 ಕೋಟಿಯಷ್ಟು ಬಾರಿ ಗಣಕ ಯಂತ್ರಗಳ ಒಳನುಸುಳಿರುವುದು ಪತ್ತೆಯಾಗಿದೆ.

ಈ `ಕಾನ್‌ಫಿಕರ್ ವರ್ಮ್~ ಕಂಪ್ಯೂಟರ್‌ಗಳಲ್ಲಿ ಅಡಗಿ ಕುಳಿತು ಎಂಎಸ್ ವಿಂಡೋಸ್ ಒಎಸ್ ನಾಶಕ್ಕಾಗಿ ಕಾಯುತ್ತಿರುತ್ತಿತ್ತು. ಇದು ಸದ್ಯ ಗಣಕಯಂತ್ರವನ್ನು ಅವಲಂಬಿಸಿದ ಉದ್ಯಮ ಲೋಕಕ್ಕೆ ಎದುರಾಗಿರುವ ಅತಿದೊಡ್ಡ ಅಪಾಯವಾಗಿದೆ ಎಂದಿದೆ ಮೈಕ್ರೊಸಾಫ್ಟ್ ಸೆಕ್ಯುರಿಟಿ ಇಂಟಲಿಜೆನ್ಸ್‌ನ ವರದಿಯ 12ನೇ ಸಂಪುಟ(ಎಸ್‌ಐಆರ್‌ವಿ12).

ಈ ಕಂಪ್ಯೂಟರ್ ಕಾರ್ಯ ವ್ಯವಸ್ಥೆಯ ವಿನಾಶಕ ಕ್ರಿಮಿ `ಕಾನ್‌ಫಿಕರ್ ವರ್ಮ್, ಎಷ್ಟು ಕೋಟಲೆ ನೀಡುವಂತಹುದಾಗಿದೆ ಎಂದರೆ ಒಂದು ಕಂಪ್ಯೂಟರ್‌ನಿಂದ ಇನ್ನೊಂದು ಕಂಪ್ಯೂಟರ್‌ಗೆ ಬಹಳ ಸುಲಭವಾಗಿ ಹೊಕ್ಕು ಸಮಸ್ಯೆ ಉಂಟುಮಾಡುವಂತಹುದಾಗಿದೆ. ಬಹಳ ದುರ್ಬಲವಾದ ಹಾಗೂ ನಕಲು ಮಾಡಿದ ಪಾಸ್‌ವರ್ಡ್ ಹೊಂದಿದ ಕಂಪ್ಯೂಟರ್‌ಗಳಿಗೆ ಈ ಕ್ರಿಮಿ ಸುಲಭವಾಗಿ ದಾಳಿ ಮಾಡುತ್ತದೆ.

2011ನೇ ವರ್ಷದ ಕಡೆಯ ಮೂರು ತಿಂಗಳಲ್ಲಿಯೇ ಈ ಕಾನ್‌ಫಿಕರ್ ಕ್ರಿಮಿ ವಿಶ್ವದಾದ್ಯಂತದ 17 ಲಕ್ಷ ಕಂಪ್ಯೂಟರ್‌ಗಳಲ್ಲಿ ಅಡಗಿದ್ದುದು ಪತ್ತೆಯಾಗಿದೆ.
`ಕಾನ್‌ಫಿಕರ್ ಈಗ ನಮ್ಮ ಕಂಪ್ಯೂಟರ್ ಸುರಕ್ಷತಾ ವ್ಯವಸ್ಥೆಗೆ ಬಹು ದೊಡ್ಡ ಆತಂಕವನ್ನೇ ತಂದೊಡ್ಡಿದೆ. ಹಾಗಿದ್ದೂ ಅದನ್ನು ನಿಯಂತ್ರಿಸುವ ಯತ್ನವೂ ಮುಂದುವರಿದಿದೆ~ ಎನ್ನುತ್ತಾರೆ ಮೈಕ್ರೊಸಾಫ್ಟ್ ಟ್ರಸ್ಟ್‌ವರ್ಥಿ ಕಂಪ್ಯೂಟಿಂಗ್ ಸಂಸ್ಥೆಯ ನಿರ್ದೇಶಕ ಟಿಮ್ ರೇನ್ಸ್.ಮಾತಿನ ಕಡೆಗೆ, `ಏನೇ ಇದ್ದರೂ ಈ ಕಾನ್‌ಫಿಕರ್ ಬಗ್ಗೆ ದೊಡ್ಡ ಕಂಪನಿಗಳು ಬಹಳ ಎಚ್ಚರದಿಂದ ಇರುವುದು ಒಳಿತು~ ಎಂದು ಗಮನ ಸೆಳೆಯುತ್ತಾರೆ.

`ಕಂಪ್ಯೂಟರ್ ವ್ಯವಸ್ಥೆ ಸುರಕ್ಷತೆಗಾಗಿ ಬಲಿಷ್ಠ ಪಾಸ್‌ವರ್ಡ್ ಹೊಂದಿರಬೇಕು, ಸಿಸ್ಟಂಆಗ್ಗಿದ್ದಾಗ್ಗೆ ಅಪ್‌ಡೇಟ್ ಮಾಡುತ್ತಿರಬೇಕು, ಮುಖ್ಯವಾಗಿ ಬಹಳ ವಿಶ್ವಾಸಾರ್ಹವಾದ ಆಂಟಿ ವೈರಸ್ಸನ್ನು ಕಂಪ್ಯೂಟರ್‌ಗಳಲ್ಲಿ ಅಳವಡಿಸಿಕೊಳ್ಳಬೇಕು.

ಕಂಪ್ಯೂಟರ್ ವ್ಯವಸ್ಥೆ ಮತ್ತು ಆಪರೇಟಿಂಗ್ ಸಿಸ್ಟಂ ಸುರಕ್ಷತೆ ದೃಷ್ಟಿಯಿಂದ ಇಷ್ಟೆಲ್ಲ ಸುರಕ್ಷತಾ ಕ್ರಮ ಅನುಸರಿಸುವುದು ಉತ್ತಮ ಹಾಗೂ ಅತ್ಯಗತ್ಯ ಎಂದು ಕಿವಿಮಾತು ಹೇಳಿದೆ ಮೈಕ್ರೊಸಾಫ್ಟ್.

ಮೊನ್ನೆ ಈ `ಕಾನ್‌ಫಿಕರ್ ವರ್ಮ್~ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಗೆಳೆಯನೊಬ್ಬ ತನ್ನ ಕಂಪ್ಯೂಟರ್‌ನಲ್ಲಿ ಇರುವ ಎಲ್ಲ ಫೈಲ್‌ಗಳ, ಫೋಲ್ಡರ್‌ಗಳ, ಕೆಲವು ಅಪ್ಲಿಕೇಷನ್‌ಗಳ `ತದ್ರೂಪಿ~ ಸೃಷ್ಟಿಯಾಗಿದೆ ಎಂದು ಗಮನ ಸೆಳೆದ.

ಆ `ತದ್ರೂಪಿ~ಗಳು ಮೂಲ ಫೈಲ್, ಫೋಲ್ಡರ್, ಅಪ್ಲಿಕೇಷನ್‌ನ ಹೆಸರನ್ನೇ ಹೊಂದಿದ್ದವು. ಫೈಲ್‌ನೇಮ್‌ನ ಕಡೆಗೆ `.ಇಎಕ್ಸ್‌ಇ~ ಎಂಬ ಮೂರು ಅಕ್ಷರಗಳನ್ನೂ (ಎಕ್ಸ್‌ಟೆಂಡೆಂಡ್ ಎಂಬರ್ಥದಲ್ಲಿ) ಒಳಗೊಂಡಿದ್ದವು. ಸಿ ಫೋಲ್ಡರ್‌ನಲ್ಲಿದ್ದ ಅಪ್ಲಿಕೇಷನ್ ಫೈಲ್‌ಗಳ ನಕಲನ್ನೂ ಸೃಷ್ಟಿ ಮಾಡಿದ್ದವು. ಎಲ್ಲ ಫೈಲ್, ಫೋಲ್ಡರ್, ಅಪ್ಲಿಕೇಷನ್ಸ್ ತದ್ರೂಪಿ ಸೃಷ್ಟಿಯಿಂದ ಕಂಪ್ಯೂಟರ್‌ನಲ್ಲಿ ಹೊಸ ಡಾಟಾ ಸ್ಟೋರ್ ಮಾಡಲು ಸ್ಥಳವೇ ಇಲ್ಲದಂತಾಗಿದೆ. ಈ `.ಇಎಕ್‌ಇ~ ಫೈಲ್‌ಗಳನ್ನೆಲ್ಲ ಹುಡುಕಿ ಒಂದೆಡೆಯಿಂದ ಡಿಲಿಟ್ ಮಾಡುತ್ತಾ ಬಂದರೂ ಮರುಕ್ಷಣದಲ್ಲೇ ಮತ್ತೆ ಮೊದಲಿದ್ದ ಜಾಗದಲ್ಲಿಯೇ ಅವತರಿಸುತ್ತಿದ್ದವು ಎಂದು ಹೇಳಿದ.

ಕಂಪ್ಯೂಟರ್ ತಜ್ಞರೊಬ್ಬರನ್ನು ಸಂಪಿರ್ಕಿಸಿದಾಗ ಅದು `ವೈರಸ್~ ಎನ್ನುವುದು ಖಚಿತವಾಯಿತು.ಈ ವೈರಸ್ ನಿವಾರಣೆಗೆ `ಕ್ವಿಕ್ ಹೀಲ್~ ಎಂಬ ಆಂಟಿ ವೈರಸ್ ಅಳವಡಿಸಿಕೊಳ್ಳುವಂತೆಯೂ ಆ ತಜ್ಞರು ಸಲಹೆ ನೀಡಿದರು. ಅದರಂತೆಯೇ ಅಂತರ್ಜಾಲದಿಂದ `ಕ್ವಿಕ್ ಹೀಲ್~ ಆಂಟಿ ವೈರಸ್ (286 ಎಂಬಿ ಫೈಲ್) ಡೌನ್‌ಲೋಡ್ ಮಾಡಿಕೊಂಡು ಕಂಪ್ಯೂಟರ್‌ಗೆ ಅಳವಡಿಸಿದೆ ಎಂದು ಹೇಳಿದೆ.ಫಲಿತಾಂಶ ಏನಾಯಿತು? ಎಂಬ ಪ್ರಶ್ನೆಗೆ, `ಆ .ಇಎಕ್ಸ್‌ಇ ವೈರಸ್ ಅದೆಷ್ಟು ಗಟ್ಟಿಕುಳ ಅಂತೀಯಾ. ಕ್ವಿಕ್ ಹೀಲ್ ಫೈಲನ್ನೇ ಕ್ಷಣಾರ್ಧದಲ್ಲಿ ವೈರಸ್ ಫೈಲ್ ಆಗಿ ಪರಿವರ್ತಿಸಿತು~ ಎಂದು ನಿಟ್ಟುಸಿರುಬಿಟ್ಟ!
                     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.