ADVERTISEMENT

ಏರ್‌ಟೆಲ್ ಡಿಟಿಎಚ್: ಹೊಸ ಮೈಲಿಗಲ್ಲು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 19:30 IST
Last Updated 22 ಫೆಬ್ರುವರಿ 2011, 19:30 IST

ಟೆಲಿವಿಷನ್ ಕಾರ್ಯಕ್ರಮಗಳನ್ನು ಮನೆಗೆ ನೇರ ಪ್ರಸಾರ (ಡಿಟಿಎಚ್) ಮಾಡುವ ಸೌಲಭ್ಯ ಬಳಕೆಗೆ ಬಂದ ನಂತರ ವೀಕ್ಷಕರ ದಿನನಿತ್ಯದ ಚಟುವಟಿಕೆಗಳ ವೇಳಾಪಟ್ಟಿಯಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದಿದೆ. ಅಚ್ಚುಮೆಚ್ಚಿನ ಕಾರ್ಯಕ್ರಮಗಳು ಪ್ರಸಾರವಾಗುವಾಗ ಮನೆಯಲ್ಲಿ ಇರದಿದ್ದರೂ ಸೆಟ್ ಟಾಪ್ ಬಾಕ್ಸ್ ರೆಕಾರ್ಡರ್ ನೆರವಿನಿಂದ ರೆಕಾರ್ಡ್ ಮಾಡಿಕೊಂಡು ಅನುಕೂಲಕರ ಸಮಯದಲ್ಲಿ ವೀಕ್ಷಿಸಬಹುದಾಗಿದೆ. ಇಷ್ಟವಾಗದ ಜಾಹೀರಾತುಗಳನ್ನು ಓಡಿಸಿ ಬರೀ ಕಾರ್ಯಕ್ರಮಗಳನ್ನಷ್ಟೆ ಕಡಿಮೆ ಅವಧಿಯಲ್ಲಿ ವೀಕ್ಷಿಸಲೂ  ಸಾಧ್ಯವಾಗಿದೆ. ಅಮೆರಿಕದಲ್ಲಿ ನಡೆದ ಸಮೀಕ್ಷೆಯಲ್ಲಿ, ಸೆಟ್ ಟಾಪ್ ಬಾಕ್ಸ್ ರೆಕಾರ್ಡರ್ ಅತ್ಯಂತ ಜನಪ್ರಿಯ ಗೃಹೋಪಯೋಗಿ ಸಾಧನವಾಗಿ  ಗ್ರಾಹಕರ ಮನ ಗೆದ್ದಿದೆ. ಇದರ ಬಳಕೆಯಿಂದಾಗಿ ‘ಪ್ರೈಮ್ ಟೈಮ್’ ಪರಿಕಲ್ಪನೆಯೂ ಅರ್ಥ ಕಳೆದುಕೊಂಡಿದೆ.

ಟೆಲಿವಿಷನ್ ಕಾರ್ಯಕ್ರಮಗಳನ್ನು ಮನೆಗೆ ನೇರ ಪ್ರಸಾರ (ಡಿಟಿಎಚ್) ಮಾಡುವ 5ನೇ ಸಂಸ್ಥೆಯಾಗಿ 2008ರಲ್ಲಿ ಮಾರುಕಟ್ಟೆ ಪ್ರವೇಶಿಸಿದ ಏರ್‌ಟೆಲ್ ಡಿಟಿಎಚ್,  ಅಲ್ಪಾವಧಿಯಲ್ಲಿ 50 ಲಕ್ಷ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದೆ. ಸಂಸ್ಥೆಯ ಪಾಲಿಗೆ ಇದೊಂದು ಹೊಸ ಮೈಲಿಗಲ್ಲು. ಅತ್ಯುತ್ತಮ ತಂತ್ರಜ್ಞಾನ, ಮಾಹಿತಿ, ಸೇವೆ, ಗ್ರಾಹಕರನ್ನು ತಲುಪುವುದು, ಲಭ್ಯತೆ ಮತ್ತಿತರ ‘ಡಿಟಿಎಚ್’ನ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳುವಲ್ಲಿ ಮುಂಚೂಣಿಯಲ್ಲಿ ಇದೆ ಎಂದು  ದಕ್ಷಿಣ ಭಾರತದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಒಒ) ವಿ. ರವಿಗಣೇಶ ಅಭಿಪ್ರಾಯಪಡುತ್ತಾರೆ.

ಭಾರ್ತಿ ಏರ್‌ಟೆಲ್‌ನ ಡಿಟಿಎಚ್ ಸೇವೆಯಾಗಿರುವ ‘ಏರ್‌ಟೆಲ್ ಡಿಟಿಎಚ್ ಟಿವಿ- ಗ್ರಾಹಕರಿಗೆ ಸದ್ಯಕ್ಕೆ ‘ಎಂಪಿಇಜಿ 4 ಮತ್ತು ಡಿವಿಬಿಎಸ್ 2’  ಡಿಜಿಟಲ್ ಪ್ರಸಾರ ತಂತ್ರಜ್ಞಾನದ ಮೂಲಕ ಚಾನೆಲ್‌ಗಳನ್ನು ಪ್ರಸಾರ ಮಾಡುತ್ತಿದೆ.

ಗ್ರಾಹಕರ ತೃಪ್ತಿಗೆ ಸಂಬಂಧಿಸಿದ ಸಮೀಕ್ಷೆಯಲ್ಲಿಯೂ ಏರ್‌ಟೆಲ್ ಡಿಜಿಟಲ್ ಟಿವಿ, ಅಚ್ಚುಮೆಚ್ಚಿನ ಡಿಟಿಎಚ್ ಸೇವಾ ಸಂಸ್ಥೆಯಾಗಿದೆ. ಸೇವಾ ಶುಲ್ಕ ಪಾವತಿ ಆಯ್ಕೆಗಳು,  ನವ ನವೀನ ಸೇವೆ, ತಡೆರಹಿತ ಸೇವೆ ಮತ್ತು ದೂರುಗಳ ಪರಿಹಾರ ವಿಷಯದಲ್ಲಿ ಮುಂಚೂಣಿಯಲ್ಲಿದೆ. ಟಿವಿ ಮತ್ತು ಸೆಟ್ ಟಾಪ್ ಬಾಕ್ಸ್‌ಗಳಿಗೆ  ಒಂದೇ ನಿಯಂತ್ರಣ ಸಾಧನ  ( ರಿಮೋಟ್ ಕಂಟ್ರೋಲ್) ಬಳಕೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗಿದೆ. ಇನ್‌ಫೋಟೇನ್‌ಮೆಂಟ್ ಚಾನೆಲ್‌ಗಳೂ ಹೆಚ್ಚು ಜನಪ್ರಿಯಗೊಳ್ಳುತ್ತಿವೆ.

ರಿಕಾರ್ಡರ್‌ಗೆ ಮೊಬೈಲ್ ಮೂಲಕವೇ ಸಂದೇಶ ಕಳಿಸಿ ನಿರ್ದಿಷ್ಟ ಕಾರ್ಯಕ್ರಮ ರೆಕಾರ್ಡ್ ಮಾಡುವ ಸೌಲಭ್ಯ, ಎಚ್‌ಡಿನಲ್ಲಿ ಡಿಜಿಟಲ್ ಡಲ್ಬಿ ಪ್ಲಸ್ ಧ್ವನಿ ಅನುಭವ ಮುಂತಾದವು ಗ್ರಾಹಕರಿಗೆ ಮೆಚ್ಚುಗೆಯಾಗಿವೆ.  ಹೀಗಾಗಿ ಹೊಸದಾಗಿ ಡಿಟಿಎಚ್ ಸಂಪರ್ಕ ಪಡೆಯುವ ಪ್ರತಿ  4 ಗ್ರಾಹಕರಲ್ಲಿ ಒಬ್ಬ ಗ್ರಾಹಕ ಏರ್‌ಟೆಲ್ ಡಿಜಿಟಲ್  ಆಯ್ಕೆ ಮಾಡಿಕೊಳ್ಳುತ್ತಿದ್ದಾನೆ.
 
ದಕ್ಷಿಣದ ನಾಲ್ಕು ರಾಜ್ಯಗಳಲ್ಲಿ 53 ಚಾನೆಲ್‌ಗಳನ್ನು ಒದಗಿಸಲಾಗುತ್ತಿದ್ದು, ಇನ್ನೂ 10 ಹೊಸ ಚಾನೆಲ್‌ಗಳನ್ನು ನೀಡಲಾಗುವುದು. ಸಂಸ್ಥೆ ಟ್ರಾನ್‌ಫಾಂಡರ್‌ನಲ್ಲಿ ಒಟ್ಟಾರೆ 515 ಚಾನೆಲ್‌ಗಳ ವೀಕ್ಷಣೆಗೆ ಅವಕಾಶ ಇದೆ ಎಂದೂ ರವಿ ಗಣೇಶ್ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.