ಚಹಾ, ಕಾಫಿ, ಹಾಲು ಕುದಿಸಲು ಒಲೆಯ ಮೇಲಿಟ್ಟು ಬೇರೆ ಕೆಲಸದಲ್ಲಿ ಮೈಮರೆತು, ನಂತರ ಅದು ಉಕ್ಕಿ ಹರಿದು, ವಾಸನೆ ಹರಡಿದಾಗ ಮರೆವಿಗೆ ಹಿಡಿಶಾಪ ಹಾಕುವವರೆಷ್ಟಿಲ್ಲ!
ಇಂತಹ ಸಮಸ್ಯೆಗಳಿಗೆ ಪರಿಹಾರ ವೊಂದನ್ನು ಹುಡುಕಿರುವ ಲಂಡನ್‌ನ ತಂತ್ರಜ್ಞರು, ವೈಫೈ ಸೌಲಭ್ಯವುಳ್ಳ ಕುದಿಸುವ ಕೆಟಲ್‌ವೊಂದನ್ನು ಸಿದ್ಧ ಪಡಿಸಿದ್ದಾರೆ. ಇದನ್ನು ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಸಹಾಯದಿಂದ ಮನೆಯ ಯಾವುದೇ ಭಾಗದಿಂದ ನಿಯಂತ್ರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ.
ತುಕ್ಕುಹಿಡಿಯದಂತಹ ಉಕ್ಕಿನಿಂದ ತಯಾರಿಸಲಾದ 1.8 ಲೀಟರ್ ಸಾಮರ್ಥ್ಯದ ಈ ಕೆಟಲ್, ‘ವಿಶ್ವದ ಮೊದಲ ವೈಫೈ ಕೆಟಲ್’ ಎಂದು ಬಣ್ಣಿಸಲಾಗಿದೆ.
ನಿಸ್ತಂತು ತಂತ್ರಜ್ಞಾನವುಳ್ಳ ಈ ಕೆಟಲನ್ನು ಮನೆ ಯಾವುದೇ ಭಾಗ ದಲ್ಲಿಟ್ಟು ಬಳಸಬಹುದು. ಅಲ್ಲದೇ, ಸ್ಮಾರ್ಟ್ ಫೋನ್‌ನಲ್ಲಿರುವ ಇದಕ್ಕೆ ಸಂಬಂಧಿತ ಅಪ್ಲಿಕೇಷನ್‌ನ ಸಹಾಯದಿಂದ ಮನೆಯ ಯಾವುದೇ ಮೂಲೆಯಲ್ಲಿದ್ದುಕೊಂಡು ಈ ಕೆಟಲ್ ನಿಯಂತ್ರಿಸಬಹುದು ಎನ್ನುತ್ತಾರೆ ಇದನ್ನು ಅಭಿವೃದ್ಧಿ ಪಡಿಸಿದ ತಂತ್ರಜ್ಞರು.
ಬಳಕೆದಾರರು ಕೆಟಲ್ ಹಾಗೂ ಸ್ಮಾರ್ಟ್ಫೋನ್‌ಗೆ ಒಂದೇ ನೆಟ್‌ವರ್ಕ್ ಬಳಸಬೇಕು. ಆಗಷ್ಟೇ ಈ ಅಪ್ಲಿಕೇಷನ್ ಕಾರ್ಯನಿರ್ವಹಿಸುತ್ತದೆ.
ಅಷ್ಟೇ ಅಲ್ಲದೇ, ಈ ಅಪ್ಲಿಕೇಷನ್ ಬೆಳಗಿನ ಜಾವ ಗಡಿಯಾರದ ಅಲಾರಾಂನಂತೆ ಕಾರ್ಯ ನಿರ್ವಹಿಸಲಿದ್ದು, ‘ಗುಡ್ ಮಾರ್ನಿಂಗ್, ನಾನು ಕೆಟಲ್ ಸ್ವಿಚ್ ಆನ್ ಮಾಡುವುದನ್ನು ಬಯಸುವಿರಾ?’ ಎಂದು ಧ್ವನಿ ಮಾಡಿ ಎಚ್ಚರಿಸುತ್ತದೆ. ಬಳಕೆದಾರರು ಈ ಸೇವೆಗಾಗಿ ಇದರಲ್ಲಿರುವ ‘ಬೇಕು’ ಅಥವಾ ‘ಬೇಡ’ ಎಂಬ ಆಯ್ಕೆಗಳನ್ನು ಬಳಸಬಹುದಾಗಿದೆ.
ಒಂದೊಮ್ಮೆ ನೀವು ‘ಬೇಕು’ ಎಂಬ ಬಟನ್ ಒತ್ತಿದರೆ, ಬೆಳಗಿನ ಜಾವ ನಿಗದಿತ ಸಮಯಕ್ಕೆ ಈ ಕೆಟಲ್‌ನಲ್ಲಿರುವ ನೀರು ಕುದಿಯಲು ಪ್ರಾರಂಭ ವಾಗುತ್ತದೆ.
ಕೆಟಲ್‌ನಲ್ಲಿರುವ ನೀರು ಒಂದು ಹಂತಕ್ಕೆ ಬಿಸಿಯಾದ ತಕ್ಷಣ ಅದನ್ನು ಬಳಸಲು ಬಳಕೆದಾರರು ಸಿದ್ಧ ವಾಗಿದ್ದಾರಾ ಅಥವಾ ಅದನ್ನು ಹಾಗೆಯೇ ಬಿಸಿಯಾಗಿಟ್ಟುಕೊಳ್ಳಬೇಕೆ ಎಂಬುದನ್ನು ಸಹ ಈ ಕೆಟಲ್ ಬಳಕೆದಾರರಿಗೆ ಕೇಳುತ್ತದೆ.
ಈ ಸಾಧನದ ಇನ್ನೊಂದು ವೈಶಿಷ್ಟ್ಯವೆಂದರೆ ದಿನಪೂರ್ತಿ ದುಡಿದು ಸಂಜೆ ಸುಸ್ತಾಗಿ ಮನೆಗೆ ಬರುವ ತನ್ನ ಮಾಲೀಕರನ್ನು ಸ್ವಾಗತಿಸುವ ಜತೆಗೆ ಅವರಿಗೆ ಬಿಸಿ ಪಾನಿಯ ಬೇಕೆ ಎನ್ನುವುದನ್ನು ಕೂಡ ಇದು ವಿಚಾರಿಸಿ ಕೊಳ್ಳುತ್ತದೆ. ‘ಅಲಾರಾಂ’ ಹಾಗೂ ‘ಸ್ವಾಗತದ ಕರೆ’ಗಾಗಿ ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ನಿರ್ದಿಷ್ಟ ಸಮಯವನ್ನು ಮೊದಲೇ ಈ ಕೆಟಲ್‌ನಲ್ಲಿ ಆಯ್ಕೆ ಮಾಡಿರಬೇಕು.
ಲಂಡನ್‌ನಲ್ಲಿ ಚಿಲ್ಲರೆ ವಹಿವಾಟು ನಡೆಸುವ Firebox.com ನಿಂದ ‘ಕುದಿಸುವ ಸೇವಕ’ ಎಂಬ ಅಡ್ಡ ಹೆಸರು ಪಡೆದಿರುವ ಈ ಕೆಟಲ್ ಎಲ್‌ಇಡಿ ಬ್ಯಾಕ್‌ಲಿಟ್ ಕಂಟ್ರೊಲ್ ಪ್ಯಾನೆಲ್, ಮೆದುವಾದ ರಬ್ಬರ್ ಹ್ಯಾಂಡಲ್ ಜತೆಗೆ ಫಿಲ್ಟರ್‌ವುಳ್ಳ ನಾಳ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.