ADVERTISEMENT

ದೂಳಿಲ್ಲದ ಗಿರಣಿಗೆ ವಿದ್ಯಾರ್ಥಿ ತಂತ್ರ!

ವಿದ್ಯಾರ್ಥಿ ತಂತ್ರಜ್ಞ

ರಿತೇಶ ಕೆ.ಆರ್.
Published 26 ಫೆಬ್ರುವರಿ 2013, 19:59 IST
Last Updated 26 ಫೆಬ್ರುವರಿ 2013, 19:59 IST
ದೂಳಿಲ್ಲದ ಗಿರಣಿಗೆ ವಿದ್ಯಾರ್ಥಿ ತಂತ್ರ!
ದೂಳಿಲ್ಲದ ಗಿರಣಿಗೆ ವಿದ್ಯಾರ್ಥಿ ತಂತ್ರ!   

ಬತ್ತ ಗಿರಣಿಯಲ್ಲಿ ಅಕ್ಕಿಯಾಗಿ ಹೊರಬರುವ ಪ್ರಕ್ರಿಯೆ, ಪೋರಿಂಗ್, ಸ್ಟೀಮಿಂಗ್, ಮಿಲ್ಲಿಂಗ್, ಡಿ-ಸ್ಟೋನಿಂಗ್, ಪಾಲಿಷಿಂಗ್, ಪ್ಯಾಕಿಂಗ್ ಎಂಬ 6 ಹಂತಗಳಲ್ಲಿ ನಡೆಯುತ್ತದೆ.

ಈ ಆರೂ ಹಂತಗಳ ಚಟುವಟಿಕೆಯಲ್ಲಿಯೂ ಗಿರಣಿ ತುಂಬೆಲ್ಲಾ ದೂಳು ವಿಪರೀತವಾಗಿ ಆವರಿಸಿಕೊಳ್ಳುತ್ತದೆ. ಈ ದೂಳು ಗಾಳಿಯಲ್ಲಿ ತೂರುತ್ತಾ ಗಿರಣಿಯ ಅಕ್ಕಪಕ್ಕದ ಪ್ರದೇಶಗಳಿಗೂ ಹರಡುತ್ತದೆ. ಜನರ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ಹಾಗಾಗಿಯೇ ಅಕ್ಕಿ ಗಿರಣಿಗಳನ್ನು ಆದಷ್ಟೂ ಜನರ ವಾಸ ಸ್ಥಳದಿಂದ ದೂರದಲ್ಲಿ ನೆಲೆಗೊಳಿಸಲಾಗುತ್ತದೆ.

ತುಮಕೂರಿನ `ಸಿದ್ದಾರ್ಥ ಎಂಜಿನಿಯರಿಂಗ್ ಕಾಲೇಜಿನ' ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಕೆ.ಎಂ.ಚೇತನ್, ಕೆ.ನಾಸಿರುದ್ದೀನ್ ಹಾಗೂ ಪಿ.ರೂಪ, ಅಕ್ಕಿ ಗಿರಣಿಯ ದೂಳಿನ ಸಮಸ್ಯೆಗೆ ಪರಿಸರ ಸ್ನೇಹಿ ಪರಿಹಾರ ಸೂತ್ರ ಅಭಿವೃದ್ಧಿಪಡಿಸಿದ್ದಾರೆ. 
`ಸೈಕ್ಲೋನ್ ಸಪರೇಟರ್ ವಿಥ್ ಟ್ರೈ ಚೇಂಬರ್ಡ್‌ ಫಿಲ್ಟರ್ ಯೂನಿಟ್' ಎಂಬುದು ವಿದ್ಯಾರ್ಥಿ ತಂತ್ರಜ್ಞರು ತಮ್ಮ ಈ ಸೂತ್ರಕ್ಕೆ ಕೊಟ್ಟಿರುವ ಹೆಸರು. ಈ ತಂತ್ರಜ್ಞಾನ ಬಳಸಿ ಅಕ್ಕಿ ಗಿರಣಿಗಳಲ್ಲಿ ದೂಳು ಕಡಿಮೆ ಮಾಡಬಹುದು. ಅಷ್ಟೇ ಅಲ್ಲ, ಜನರ ಶ್ವಾಸಕೋಶಕ್ಕೆ  ಅಪಾಯ ತಂದೊಡ್ಡಬಲ್ಲ ದೂಳು ವಾತಾವರಣಕ್ಕೆ ಸೇರದಂತೆಯೂ ತಡೆಯಬಹುದು.

ವಾಯು ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ವರದಿ ನೀಡುವಂತೆ ಸಿದ್ದಾರ್ಥ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಟಿ.ಕೆ.ಚಂದ್ರಶೇಖರ್ ಮತ್ತು ಆರ್.ಹರೀಶ್ ಕುಮಾರ್ ಅವರನ್ನು `ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ' ಕೋರಿತ್ತು. ಇದಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸುತ್ತಿರುವಾಗ ಇಬ್ಬರೂ ಪ್ರಾಧ್ಯಾಪಕರ ಕಣ್ಣಿಗೆ ಅಕ್ಕಿ ಗಿರಣಿಯ ದೂಳು ಕಿರಿಕಿರಿ ಉಂಟು ಮಾಡಿತ್ತು.

ಸಾಮಾನ್ಯವಾಗಿ ಗಿರಣಿಗಳಲ್ಲಿ ದೂಳು ನಿಯಂತ್ರಿಸಲು `ಸೈಕ್ಲೋನ್' ಎಂಬ ಯಂತ್ರ ಬಳಸುತ್ತಾರೆ. ಆದರೆ, ಇದು ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವುದಿಲ್ಲ. ಈ ಅಂಶವನ್ನು  ಖಚಿತ ಪಡಿಸಿಕೊಂಡ ಪ್ರಾಧ್ಯಾಪಕರು, ಅತಿ ಸೂಕ್ಷ್ಮ ದೂಳಿನ ಕಣಗಳು ವಾತಾವರಣ ಸೇರದಂತೆ ತಡೆಯುವ ಯಂತ್ರ ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ಆರಂಭಿಸಿದರು.

ತಮ್ಮದೇ ವಿಭಾಗದ ವಿದ್ಯಾರ್ಥಿಗಳಿಗೆ ಇಂಥದೊಂದು ಯಂತ್ರ ರೂಪಿಸುವತ್ತ ಗಮನ ಹರಿಸುವಂತೆ ಸೂಚಿಸಿದರು. ಹೀಗೆ ಗುರುಗಳ ಸೂಚನೆ ಮತ್ತು ವಿದ್ಯಾರ್ಥಿ ತಂತ್ರಜ್ಞರ ಪರಿಶ್ರಮದ ಪರಿಣಾಮವಾಗಿ ಸಿದ್ಧವಾಗಿದ್ದೇ `ಸೈಕ್ಲೋನ್ ಸೆಪರೇಟರ್ ವಿಥ್ ಟ್ರೈ ಚೇಂಬರ್ಡ್‌ ಫಿಲ್ಟರ್ ಯೂನಿಟ್'.

ಅಸಲಿಗೆ ಈ ಯೂನಿಟ್ ವಿಚಾರ ಪ್ರಾಧ್ಯಾಪಕರಿಗೆ ನಾಲ್ಕು ವರ್ಷಗಳ ಹಿಂದೆಯೇ ಹೊಳೆದಿತ್ತು. ಆದರೆ, ಆ ವರ್ಷ 7ನೇ ಸೆಮಿಸ್ಟರ್‌ನಲ್ಲಿದ್ದು, ಪ್ರಾಜೆಕ್ಟ್ ಸಿದ್ಧಪಡಿಸುತ್ತೇವೆ ಎಂದು ಮುಂದೆ ಬಂದಿದ್ದ ವಿದ್ಯಾರ್ಥಿಗಳು ಕೈಬಿಟ್ಟಿದ್ದರಿಂದ ಇಡೀ ಯೋಜನೆ ನೆನೆಗುದಿಗೆ ಬಿದ್ದಿತ್ತು. ಅಂತಿಮವಾಗಿ 2012-13ನೇ ಸಾಲಿನ ಎಂ.ಟೆಕ್ ವಿದ್ಯಾರ್ಥಿಗಳು ಈ ಯೋಜನೆ ಕೈಗೆತ್ತಿಗೊಂಡು ಯಶಸ್ವಿಯಾದರು.

ಕೆ.ಎಂ.ಚೇತನ್ ನೇತೃತ್ವದ ತಂಡ  9 ತಿಂಗಳಲ್ಲಿ ಈ ಯಂತ್ರ ಅಭಿವೃದ್ಧಿಪಡಿಸಿದೆ. ಪ್ರಾಧ್ಯಾಪಕರ ಮಾರ್ಗದರ್ಶನ ಇದ್ದರೂ ಮೂವರು ವಿದ್ಯಾರ್ಥಿಗಳ ಪರಿಶ್ರಮ ಅದನ್ನು ಮೀರುವಂತಿತ್ತು. ಮೂರು ಜಿಲ್ಲೆಗಳ 20 ಅಕ್ಕಿ ಗಿರಣಿಗಳಿಗೆ ಭೇಟಿ ನೀಡಿದ ವಿದ್ಯಾರ್ಥಿ ತಂತ್ರಜ್ಞರು, ಅಲ್ಲಿನ ನೈಜ ಪರಿಸ್ಥಿತಿ ಅಧ್ಯಯನ ನಡೆಸಿ ನಂತರ ಯಂತ್ರ ರೂಪಿಸುವಲ್ಲಿ ಮಗ್ನರಾದರು.

ಏನಿದು ತಂತ್ರಜ್ಞಾನ?
ಅಕ್ಕಿ ಗಿರಣಿಗಳಲ್ಲಿ ಬ್ಲೋವರ್ ಅಥವಾ ಸೈಕ್ಲೋನ್ ಯಂತ್ರ ಇದ್ದರೂ, ಅದು ಹೆಚ್ಚಿನ ದೂಳನ್ನು ಪರಿಣಾಮಕಾರಿಯಾಗಿ ತಡೆಗಟ್ಟದು. ಈ ವಿಚಾರದಲ್ಲಿ ವಿದ್ಯಾರ್ಥಿ ತಂತ್ರಜ್ಞರ ತಾಂತ್ರಿಕತೆ ವಿಭಿನ್ನವಾಗಿದೆ. ಒಂದನೇ ಹಂತ ಬ್ಲೋವರ್, ಎರಡನೇ ಹಂತ ಸೈಕ್ಲೋನ್, ಮೂರನೇ ಹಂತದಲ್ಲಿ ಸೈಕ್ಲೋನ್ ಔಟ್‌ಲುಕ್‌ಗೆ ಫಿಲ್ಟರ್ ಯೂನಿಟ್ ಜೋಡಿಸಲಾಗಿದೆ. ಇದರಿಂದ ಸೈಕ್ಲೋನ್ ಮತ್ತು ಬ್ಲೋವರ್‌ನಿಂದ ಬಂದಿರುವ ಕಣಗಳನ್ನು ಸೋಸಿ ಬೇರ್ಪಡಿಸುವ ಕೆಲಸವನ್ನು ಈ ಯಂತ್ರ ಪರಿಣಾಮಕಾರಿಯಾಗಿ ಮಾಡುತ್ತದೆ.

ಇಲ್ಲಿ ಸೋಸುವಿಕೆಯ ಮೂರು ಹಂತಗಳಿವೆ. ಒಂದನೇ ಹಂತದ ಸೋಸುವಿಕೆಯಲ್ಲಿ ದೊಡ್ಡ ಕಣಗಳು ಪ್ರತ್ಯೇಕಗೊಂಡರೆ, ಎರಡನೇ ಹಂತದಲ್ಲಿ ಉಳಿದ ಕಣಗಳು ಹಾಗೂ ಮಧ್ಯಮ ಗಾತ್ರದ ಕಣಗಳನ್ನು ಪ್ರತ್ಯೇಕಿಸಲಾಗುತ್ತದೆ. ಕೊನೆಯಲ್ಲಿ ಉಳಿಯುವ ಅತಿ ಸೂಕ್ಷ್ಮ ಗಾತ್ರದ ಕಣಗಳು ಅಂದರೆ 10 ಮೈಕ್ರಾನ್‌ಗಿಂತ ಕಡಿಮೆ ಇರುವ ಕಣಗಳನ್ನು ಈ ಘಟಕ ಪೂರ್ಣವಾಗಿ ತಡೆಯುತ್ತದೆ. ಅಲ್ಲಿಗೆ ದೂಳಿಲ್ಲದ ಗಾಳಿ ಕೊಳವೆ ಮೂಲಕ ಹೊರಹೋಗುತ್ತದೆ.

ಒಂದು ಮತ್ತು ಎರಡನೇ ಭಾಗಗಳಲ್ಲಿ ಮೆಸ್ ಸಾಮಾನ್ಯವಾಗಿದ್ದರೆ, ಮೂರನೇ ಹಂತದಲ್ಲಿ ಸ್ಕ್ವೇರ್ ಪೈಪ್‌ನಲ್ಲಿ ಜಿಯೋ ಟೆಕ್ಸ್ಟ್ ಮೆಟರಿಯಲ್ ಅಳವಡಿಸಲಾಗಿದೆ. ಇದು ದೂಳಿನ ಕಣಗಳನ್ನು ಹಿಡಿದಿಡುತ್ತದೆ. 2 ಮಿಲಿಮೀಟರ್‌ನಿಂದ 10 ಮೈಕ್ರಾನ್‌ವರೆಗಿನ ಅತಿ ಸೂಕ್ಷ್ಮ ಕಣಗಳನ್ನು ಫಿಲ್ಟರ್ ಯೂನಿಟ್ ತಡೆಯುತ್ತದೆ.

`ಜಿಯೋಟೆಕ್ಸ್ಟ್ ಮೆಟೀರಿಯಲ್' (ನೀರು ಸೊಸಲು ಬಳಸುವ ಸಣ್ಣ ಬಿಳಿ ವಸ್ತ್ರದಂತೆ ಇರುತ್ತದೆ) ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಈ ಯೂನಿಟ್ಟನ್ನು ಗಿರಣಿಯ ಬಾಯ್ಲರ್ ಸ್ಥಳಗಳಲ್ಲಿ ಅಳವಡಿಸಬಹುದಾಗಿದ್ದು, ಎಲ್ಲಿ ಹೆಚ್ಚು ದೂಳು ಆವರಿಸಿಕೊಳ್ಳುತ್ತದೆ ಎಂಬುದನ್ನು ಖಚಿತಪಡಿಸಿಕೊಂಡು, ಅಲ್ಲಿಂದ ಪೈಪ್‌ಗಳ ಮೂಲಕ ಯೂನಿಟ್‌ಗೆ ಸಂಪರ್ಕ ಕಲ್ಪಿಸಬಹುದು.  ಗಿರಣಿ ಒಳ-ಹೊರಗೆ ದೂಳಿನ ಕಣಗಳು ಹರಡದಂತೆ ಶೇ 96ರಷ್ಟು ಸಮರ್ಥವಾಗಿ ಯಂತ್ರ ಕಾರ್ಯನಿರ್ವಹಿಸುತ್ತದೆ ಎನ್ನುತ್ತಾರೆ ವಿದ್ಯಾರ್ಥಿ ಕೆ.ಎಂ.ಚೇತನ್(ಮೊ: 8971695655).

ಈ ಯೂನಿಟ್ 15ರಿಂದ 20 ಕೆ.ಜಿ ತೂಕವಿದ್ದು, ಮೂರೂವರೆ ಅಡಿ ಉದ್ದ, ಒಂದೂವರೆ ಅಡಿ ಅಗಲ ಇದೆ. ಜರ್ಮನ್ ತಾಂತ್ರಿಕತೆಗಿಂತ ಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ.

ಜಪಾನ್, ಚೀನಾ, ಜರ್ಮನಿಯಲ್ಲಿ ಅಕ್ಕಿ ಗಿರಣಿಗಳಲ್ಲಿ ದೂಳನ್ನು ತಡೆಗಟ್ಟಲು ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದೆ. ಇವು ಬಹಳ ದುಬಾರಿ. ಭಾರತದಲ್ಲಿನ ಕೆಲವು ಗಿರಣಿಗಳಲ್ಲಿ ದೂಳು ತಡೆಯಲು ರೂ. 40 ಲಕ್ಷದವರೆಗೂ ವೆಚ್ಚ ಮಾಡಿ ಫಿಲ್ಟರ್ ಯೂನಿಟ್ ಅಳವಡಿಸಿಕೊಳ್ಳುತ್ತಾರೆ. ಆದರೆ, ನಾವು ಶೋಧಿಸಿರುವ `ಸೈಕ್ಲೋನ್ ಸಪರೇಟರ್ ವಿಥ್ ಟ್ರೈ ಚೇಂಬರ್ಡ್‌ ಫಿಲ್ಟರ್ ಯೂನಿಟ್' ಅನ್ನು ರೂ. 1 ಲಕ್ಷ ವೆಚ್ಚದಲ್ಲಿಯೇ ವೆಲ್ಡಿಂಗ್ ಶಾಪ್‌ಗಳಲ್ಲಿ ತಯಾರಿಸಬಹುದು.

`ಈ ದೂಳು ನಿಯಂತ್ರಕ ಘಟಕದ ಅಳವಡಿಕೆ ಕೂಡ ಬಹಳ ಸುಲಭ' ಎನ್ನುವುದು ಕೆ.ನಾಸಿರುದ್ದೀನ್ ವಿವರಣೆ.
`ಇದನ್ನು ಪ್ರಾಯೋಗಿಕವಾಗಿ ತುಮಕೂರಿನ ಮಂಜುನಾಥ ಅಕ್ಕಿ ಗಿರಣಿಯಲ್ಲಿ ಅಳವಡಿಸಲಾಗಿದೆ.  ಯಂತ್ರ ಅಳವಡಿಸಿದ ನಂತರ ದೂಳು ಸಾಕಷ್ಟು ಕಡಿಮೆಯಾಗಿದೆ' ಎಂಬುದು ಗಿರಣಿಯ ಅಪರೇಟರ್ ವೆಂಕಟೇಶನ್ ಅನುಭವದ ಮಾತು.

ನಾವಿದ್ದೇವೆ...
`ಸೈಕ್ಲೋನ್ ಸಪರೇಟರ್ ವಿಥ್ ಟ್ರೈ ಚೇಂಬರ್ಡ್‌ ಫಿಲ್ಟರ್ ಯೂನಿಟ್' ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ ನೆರವು ಲಭಿಸಿದೆ. ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಉತ್ತೇಜಿಸುವ ಕಾರ್ಯಕ್ರಮದ ಅಡಿ ಈ ನೆರವು ನೀಡಲಾಗುತ್ತಿದ್ದು, ಸಿದ್ದಾರ್ಥ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವಾಗಿ ರೂ. 67 ಸಾವಿರ ಲಭಿಸಿದೆ.  ಶೈಕ್ಷಣಿಕ ಅರ್ಹತೆ ಇದ್ದರೂ, ಇಲ್ಲದಿದ್ದರೂ ತಂತ್ರಜ್ಞಾನ ಆವಿಷ್ಕಾರಗಳಿಗೆ ಆರ್ಥಿಕ ನೆರವು ಲಭಿಸುತ್ತದೆ ಎನ್ನುತ್ತಾರೆ ಸಂಯೋಜನಾಧಿಕಾರಿ ಎಲ್.ಸಂಜೀವ್‌ಕುಮಾರ್(ಮೊ: 9845040167).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.