ADVERTISEMENT

ದೂಳೀಪಟವಾದ ಧೂಮಕೇತು

ಬಿ.ಎಸ್.ಶೈಲಜಾ
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST

ಕಳೆದ ಡಿಸೆಂಬರ್‌ನಲ್ಲಿ ರಷ್ಯಾದ ಲಿಯೋನಿಡ್ ಎಲಿನಿನ್ ಹೊಸ ಚುಕ್ಕೆಯೊಂದನ್ನು ಗುರುತಿಸಿ ಅದರ ಚಲನವಲನದ ಮೇಲೆ ಕಣ್ಣಿಟ್ಟ. ಅದು ಧೂಮಕೇತು ಎಂದು ಪತ್ತೆಯಾಯಿತು. ಮೊದಲ ಬಾರಿಗೆ ಸೂರ್ಯನನ್ನು ಪ್ರದಕ್ಷಿಣೆ ಮಾಡಲು ಹೊರಟಿದೆ ಎಂದೂ ತಿಳಿಯಿತು.

ಎಲ್ಲ ವೀಕ್ಷಕರ ಹಾಗೆ ಆತನೂ ಧೂಮಕೇತು ಕಂಡು ಹಿಡಿದ ಸಂತೋಷದಲ್ಲಿ ಮುಳುಗಿಹೋದ. ಬ್ಯೂರೋ ಆಫ್ ಟೆಲಿಗ್ರಾಂಸ್ ಎಂಬ ಸಂಸ್ಥೆ ಇಂತಹ ವೀಕ್ಷಣೆಗಳನ್ನು ಒಟ್ಟುಗೂಡಿಸಿ  ಲೆಕ್ಕ ಹಾಕಿತು. ಸುಮಾರು 10,000 ವರ್ಷಗಳಿಗೊಮ್ಮೆ ಎಲಿನಿನ್ ಧೂಮಕೇತು ಸೂರ್ಯನನ್ನು ಸಮೀಪಿಸುವುದು ಎಂದು ತಿಳಿಸಿತು.
 
ಅದು 2011ರ ಸೆಪ್ಟೆಂಬರ್10 ರಂದು ಸುಮಾರು 75 ದಶಲಕ್ಷ ಕಿ.ಮೀ (ಸೂರ್ಯ ಭೂಮಿ ಅಂತರದ ಅರ್ಧದಷ್ಟು ದೂರ) ದೂರದಿಂದ ಸೂರ್ಯನನ್ನು ಸಮೀಪಿಸುವುದು.  ಹಿಂದಿರುಗುವಾಗ ಸೆಪ್ಟೆಂಬರ್ 16ರ ಹೊತ್ತಿಗೆ ಭೂಮಿಯನ್ನು ಸಮೀಪಿಸಿ (35 ದಶಲಕ್ಷ ಕಿಮೀ ಅಂತರ ಮಾತ್ರ!) ಬರಿಗಣ್ಣಿಗೆ ಕಾಣುವಂತಾಗಬಹುದು ಎಂಬ ಸಂಗತಿಯನ್ನೂ ಪ್ರಕಟಿಸಿತು.

ಖಗೋಳತಜ್ಞರಿಗೆ ಇಂತಹ ಲೆಕ್ಕಗಳು ಹೊಸತೇನಲ್ಲ. ವರ್ಷಕ್ಕೆ 20 -30 ಧೂಮಕೇತುಗಳು ಬಂದು ಹೋಗುವವು. ಪ್ರತಿಯೊಂದಕ್ಕೂ ಇಂತಹ ಲೆಕ್ಕ ನಡೆದೇ ನಡೆಯುತ್ತವೆ. ಫಲಿತಾಂಶಗಳು ಪ್ರಕಟವಾಗುತ್ತಲೇ ಇರುತ್ತವೆ.

ಆದರೆ ಈ ಧೂಮಕೇತು ಮಾತ್ರ ಹೊಸ ಹೊಸ ಸುದ್ದಿಗಳನ್ನು ಸೃಷ್ಟಿಸಿತು. 2012ರ `ಪ್ರಳಯಕ್ಕೆ~ ಇದೇ ಕಾರಣವಾಗುತ್ತದೆ; ಅಷ್ಟೇ ಅಲ್ಲ, ಭೂಮಿಯ ಮೇಲೆ ಭೂಕಂಪ, ಅಗ್ನಿ ಪರ್ವತ ಸ್ಫೋಟ ಮುಂತಾದ ಎಲ್ಲ ಅನಾಹುತಗಳಿಗೂ ಕಾರಣವಾಗುತ್ತದೆ ಎಂಬ ವದಂತಿಗಳು ಹುಟ್ಟಿಕೊಂಡವು.

ಸೆಪ್ಟೆಂಬರ್ 16ರಂದು ಎಲ್ಲರೂ ಸುರಕ್ಷಿತ ಸ್ಥಳಗಳಲ್ಲಿ ಅಡಗಿಕೊಳ್ಳಬೇಕು ಎಂದು ಒಂದು ವೆಬ್ ಸೈಟ್ ಎಚ್ಚರಿಕೆ ಕೊಟ್ಟಿತ್ತು. ಅದೃಷ್ಟವಶಾತ್ ಈ ಸುದ್ದಿಗಳು ಸೃಷ್ಟಿಯಾಗುತ್ತಲೇ ಅಡಗಿಹೋದವು - ಟಿ ವಿ ಚಾನೆಲ್‌ಗಳನ್ನು ಆಕರ್ಷಿಸಲಿಲ್ಲ.

ವಾಸ್ತವದಲ್ಲಿ ನಡೆದದ್ದೆ ಬೇರೆ. 10 ಕಿಮೀಗಳಿಗಿಂತಲೂ ಕಡಿಮೆ ಗಾತ್ರದ ಈ ಪುಟ್ಟ ಕಾಯ ಸೂರ್ಯನತ್ತ ಸಾಗುತ್ತಿತ್ತು. ಅದು ಬಹಳ ಕ್ಷೀಣವಾಗಿದ್ದುದರಿಂದ ಸೂರ್ಯನನ್ನು ಸುತ್ತಿ ಬಂದ ಮೇಲೆ ಯಶಸ್ವಿಯಾಗಿ ಹಿಂದಿರುಗಬಲ್ಲುದೇ ಎಂಬುದರ ಬಗ್ಗೆ ವಿಜ್ಞಾನಿಗಳಿಗೆ ಸಂಶಯವಿತ್ತು.

ಅನೇಕ ಧೂಮಕೇತುಗಳು ಸೂರ್ಯನನ್ನು ಅಪ್ಪಳಿಸುತ್ತವೆ; ಇನ್ನು ಕೆಲವು ಛಿದ್ರಛಿದ್ರವಾಗಿ ಹೋಗುತ್ತವೆ. ಈ ವರ್ಗದ ಧೂಮಕೇತುಗಳು ಭೂಮಿಗೆ ಸಮೀಪವಾಗಿ ಹಾದು ಹೋದಾಗಲೂ ನಮಗೆ ಕಂಡಿರುವುದಿಲ್ಲ. ಆದರೆ ಸೂರ್ಯನ ಸಮೀಪ ಅವುಗಳ ಬಾಲ ಅತಿ ಉದ್ದವಾಗಿ ಬೆಳೆದು (ಅಂದರೆ ಎಲ್ಲ ವಸ್ತುವೂ ಆವಿಯಾಗಿ) ಕಾಣತೊಡಗುತ್ತವೆ.

ನಮ್ಮ ಕಣ್ಣಿಗಲ್ಲ. ಬಾಹ್ಯಾಕಾಶ ನೌಕೆಗಳಿಗೆ. ಸೋಹೋ ಎಂಬ ಬಾಹ್ಯಾಕಾಶ ನೌಕೆ ಇದುವರೆಗೆ 1000ಕ್ಕೂ ಹೆಚ್ಚು ಧೂಮಕೇತುಗಳ ಚಿತ್ರಗಳನ್ನು ತೆಗೆದಿದೆ. ಅದು ಕಳುಹಿಸುವ ಚಿತ್ರಗಳು ಇಂಟರ್‌ನೆಟ್‌ನಲ್ಲಿ ಎಲ್ಲರಿಗೂ ಲಭ್ಯವಿವೆ.

ಅನೇಕರು ಅವುಗಳಲ್ಲಿ ಧೂಮಕೇತುಗಳನ್ನು ಹುಡುಕುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಭಾರತದ ಮುಂಬೈನ ಶಿಶಿರ್ ದೇಶ್‌ಮುಖ್  ಆರು ಧೂಮಕೇತುಗಳನ್ನು ಯಶಸ್ವಿಯಾಗಿ ಪತ್ತೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಎಲಿನಿನ್ ಧೂಮಕೇತುವಿನ ವಿಷಯಕ್ಕೆ ಹಿಂದಿರುಗೋಣ. ಇದೂ ಬಹಳ ಸಣ್ಣ ಕಾಯವೇ. ಕಳೆದ ತಿಂಗಳು ಅದರ ಚಲನವಲನವನ್ನು ಗಮನಿಸುತ್ತಿದ್ದ ತಂಡವು ಪ್ರಕಾಶದಲ್ಲಿ ಅರ್ಧಕ್ಕರ್ಧದಷ್ಟು ಇಳಿತವನ್ನು ವರದಿ ಮಾಡಿದರು.
 
`ಸೋಹೋ~ದ ಚಿತ್ರಗಳನ್ನು ಪರಿಶೀಲಿಸಿದ ಕೆಲವರು ಇದು ಇನ್ನೂ ದೂರದಲ್ಲಿದ್ದಾಗಲೇ ಸೌರ ಮಾರುತದ ದಾಳಿಗೆ ಸಿಕ್ಕಿತು ಎಂದು ವರದಿ ಮಾಡಿದರು. ಹೊಸ ಬಾಹ್ಯಾಕಾಶ ನೌಕೆ ಸ್ಟೀರಿಯೋ (ಸೋಲಾರ್ ಟೆರೆಸ್ಟ್ರಿಯಲ್ ರಿಲೇಷನ್ಸ್ ಅಬ್ಸರ್ವೇಟರಿ) ಆಗಸ್ಟ್ ತಿಂಗಳಲ್ಲಿ ಧೂಮಕೇತುವಿನ ಚಿತ್ರಗಳನ್ನು ತೆಗೆಯಿತು.

ಈ ಚಿತ್ರಗಳಲ್ಲಿ ಅದರ ಒಂದು ಪಾರ್ಶ್ವ ಮಾತ್ರ ವಿಕೃತಗೊಳ್ಳುತ್ತಿದ್ದುದನ್ನು ತೋರಿಸಿ ಧೂಮಕೇತು ಸಿಡಿದು ಹೋಗಿರಬಹುದು ಎಂದರು. ಅದರ ಪ್ರಕಾಶ ಕಡಿಮೆ ಆಗಿರುವುದಕ್ಕೆ ಇದೇ ಕಾರಣವಿರಬಹುದು.

ಹೇಗಾದರೂ ಸರಿ ಈ ಧೂಮಕೇತು ಈಗ ಬರಿಗಣ್ಣಿಗೆ ಕಾಣುವ ಸಾಧ್ಯತೆಗಳು ಇಲ್ಲವೇ ಇಲ್ಲ. ಅಲ್ಲದೆ ಕ್ಷೀಣವಾಗಿ ಚಿಂದಿ ಚಿಂದಿಯಾಗಿ ಹೋಗಿರುವ ಇದು ಮತ್ತೆಕಾಣಿಸಿಕೊಳ್ಳುವ ಸಾಧ್ಯತೆಯೂ ಇಲ್ಲ. ಇದು ಹವ್ಯಾಸಿ ವೀಕ್ಷಕರಿಗೆ ತೀವ್ರ ನಿರಾಸೆಯನ್ನುಂಟು ಮಾಡಿದೆ. 
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.