ADVERTISEMENT

ಫೇಸ್‌ಬುಕ್ ಆಲ್ಬಂಗೆ ಹೊಸರೂಪ

ಈರಪ್ಪ ಹಳಕಟ್ಟಿ
Published 24 ಸೆಪ್ಟೆಂಬರ್ 2013, 19:59 IST
Last Updated 24 ಸೆಪ್ಟೆಂಬರ್ 2013, 19:59 IST
ಫೇಸ್‌ಬುಕ್ ಆಲ್ಬಂಗೆ ಹೊಸರೂಪ
ಫೇಸ್‌ಬುಕ್ ಆಲ್ಬಂಗೆ ಹೊಸರೂಪ   

ಯುವಜನತೆಯನ್ನು ಸೂಜಿಗಲ್ಲಿನಂತೆ ಸೆಳೆಯುವ ಮೂಲಕ ಜಗತ್ತಿನ ಅತಿ ದೊಡ್ಡ ಸಾಮಾಜಿಕ ಜಾಲತಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಫೇಸ್‌ಬುಕ್  ತನ್ನ ಬಳಕೆದಾರರ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಮೈಗೂಡಿಸಿ ಕೊಳ್ಳುತ್ತಲೇ ಬಂದಿದೆ.

ಇದೀಗ ಬಳಕೆದಾರರಿಗೆ ಸುಲಭ ವಾಗುವಂತೆ ಆಲ್ಬಂ ಚಹರೆಯನ್ನು ಬದಲಿ ಮಾಡಿರುವ ಫೇಸ್‌ಬುಕ್ ಹೊಸ  ವೈಶಿಷ್ಟ್ಯವನ್ನು ಸೇರಿಸುವ ಮೂಲಕ ‘ಹಂಚಿಕೆ ಆಲ್ಬಂ’ (Shared album) ಎಂಬ ಪರಿಕಲ್ಪನೆ ರೂಪಿಸಿದೆ.

ಈ ಹೊಸ ಆಲ್ಬಂಗೆ  ಹಲವು ಬಳಕೆದಾರರು ವಿವಿಧ ಬಗೆಯ ಸಂವಹನ ಮಾಧ್ಯಮಗಳ ಮೂಲಕ  ತಮ್ಮ ಫೋಟೊಗಳನ್ನು  ಸುಲಭವಾಗಿ ಸೇರಿಸಬಹುದಾಗಿದೆ.
ಇಲ್ಲಿಯವರೆಗೆ ಫೇಸ್‌ಬುಕ್ ಬಳಕೆ ದಾರರು ತಮ್ಮ ಸ್ವಂತ ಆಲ್ಬಂಗೆ ಮಾತ್ರ ಅಪ್‌ಲೋಡ್ ಮಾಡಬಹುದಾಗಿತ್ತು. ಇಲ್ಲವೇ, ತಮ್ಮ ಸ್ನೇಹಿತರ ವಾಲ್ ಮೇಲೆ ಪೊಸ್ಟ್‌ ಮಾಡಿ ಕಾಮೆಂಟ್ ಹಾಕ ಬಹುದಾಗಿತ್ತು. ಜತೆಗೆ ಬಳಕೆದಾರರು ಸ್ನೇಹಿತರನ್ನು/ಪುಟಗಳನ್ನು ಟ್ಯಾಗ್ ಮಾಡಬಹುದಾಗಿತ್ತು ಅಥವಾ  ಸ್ನೇಹಿತ ರಲ್ಲದವರು ಹಾಗೂ ಸಾರ್ವಜನಿಕರು ಆ ಚಿತ್ರಗಳನ್ನು ಹಂಚಿಕೊಳ್ಳಲು ಅನುವಾಗು ವಂತೆ ಆಲ್ಬಂ / ಚಿತ್ರದ ಕೆಳಗೆ ವಿಶೇಷ ‘ಯೂಆರ್‌ಎಲ್’ ಬಳಕೆ ಮಾಡಬೇಕಿತ್ತು. ಹಂಚಿಕೆ ಆಲ್ಬಂನಲ್ಲಿ ಈ ಸಮಸ್ಯೆಗಳಿಲ್ಲ. ಹಲವಾರು ಸ್ನೇಹಿತರು ಒಂದೇ ಆಲ್ಬಂಗೆ ತಮ್ಮ ಫೋಟೊಗಳನ್ನು ಸೇರಿಸ ಬಹುದಾಗಿದೆ.

ಈ ಹೊಸ ವೈಶಿಷ್ಟ್ಯವುಳ್ಳ ಆಲ್ಬಂ ಅನ್ನು ಸೃಷ್ಟಿಸಿದ ಬಳಕೆದಾರನು ಅದನ್ನು 50 ಕೊಡುಗೆದಾರರೊಂದಿಗೆ (contributors) ಅದನ್ನು ಹಂಚಿ ಕೊಳ್ಳಬಹುದಾಗಿದ್ದು, ಪ್ರತಿಯೊಬ್ಬ ಕೊಡುಗೆದಾರನು ಸುಮಾರು 200 ಫೋಟೊಗಳನ್ನು ಆಲ್ಬಂಗೆ ಸೇರಿಸ ಬಹುದಾಗಿದೆ.

ಕೊಡುಗೆದಾರರು ಕೇವಲ ಫೋಟೊ ಗಳನ್ನು ಆಲ್ಬಂಗೆ ಸೇರಿಸುವುದು, ಎಡಿಟ್ ಮಾಡುವುದಷ್ಟೆ ಅಲ್ಲದೇ, ಇತರೆ ಕೊಡುಗೆದಾರರನ್ನು ನಿಮ್ಮ ಆಲ್ಬಂಗೆ ಸೇರಿಸಬಹುದಾಗಿದೆ. ಹೀಗಾದಾಗ ನಿಮ್ಮ ಹಂಚಿಕೆ ಆಲ್ಬಂನಲ್ಲಿರುವ ಜನರ ಜಾಲವು ವಿಸ್ತರಿಸುತ್ತಾ ಹೋಗುತ್ತದೆ.

ಆಲ್ಬಂ ಸೃಷ್ಟಿಸಿದ ಬಳಕೆದಾರನು ತನ್ನ ಕೊಡುಗೆದಾರರು ಇತರನ್ನು ಆಲ್ಬಂಗೆ ಆಹ್ವಾನಿಸುವ ಅವಕಾಶ ನೀಡಬಹುದು ಅಥವಾ ಎಲ್ಲ  ಚಟುವಟಿಕೆ ಮೇಲೆ ಸಂಪೂರ್ಣ ನಿಯಂತ್ರಣ ಹೊಂದ ಬಹುದಾಗಿದೆ.

ಈ ಹಿಂದೆ ಫೇಸ್‌ಬುಕ್ ಬಳಕೆದಾರ ನೊಬ್ಬ ತಾನು ಸೃಷ್ಟಿಸಿದ ಆಲ್ಬಂಗೆ ಮಾತ್ರ ಫೋಟೊಗಳನ್ನು ಸೇರಿಸಬಹುದಾಗಿದೆ. ಅದರಲ್ಲಿ ಕೂಡ ಪ್ರತಿ ಆಲ್ಬಂಗೆ ಒಂದು ಸಾವಿರ ಫೋಟೊಗಳನ್ನು ಮಾತ್ರ ಸೇರಿಸಬಹುದಾಗಿತ್ತು.

ಈ ಹೊಸ ಆಲ್ಬಂನಲ್ಲಿ ಸಾರ್ವ ಜನಿಕರು, ಕೊಡುಗೆದಾರರ ಸ್ನೇಹಿತರು ಹಾಗೂ ಕೊಡುಗೆದಾರರು ಎಂಬ ಮೂರು ರೀತಿಯ ಪ್ರೈವೆಸಿ ಸೆಟ್ಟಿಂಗ್‌ ಗಳಿದ್ದು, ಇವುಗಳ ಸಹಾಯ ದಿಂದ ಆಲ್ಬಂ ಸೃಷ್ಟಿಕರ್ತರು ಆಲ್ಬಂ ಮೇಲೆ ಸಂಪೂರ್ಣ ನಿಯಂತ್ರಣ ಹೊಂದ ಬಹುದಾಗಿದೆ ಎನ್ನುತ್ತಾರೆ ಫೇಸ್‌ಬುಕ್‌ ನಲ್ಲಿ ತಂತ್ರಾಂಶ ಎಂಜಿನಿಯರ್ ಆಗಿರುವ ಬಾಬ್ ಬಾಲ್ಡ್ವಿನ್.

ಆಲ್ಬಂ ತಯಾರಿಸಿದವರು ಆಲ್ಬಂ ನಲ್ಲಿರುವ ಫೋಟೊಗಳನ್ನು ಎಡಿಟ್ ಮಾಡುವ ಹಾಗೂ ಅಳಿಸಿ ಹಾಕುವ ಅಧಿಕಾರ ಹೊಂದಿರುತ್ತಾರೆ. ಆದರೆ ಕೊಡುಗೆದಾರರು ತಾವು ಅಪ್‌ಲೋಡ್ ಮಾಡಿದ ಚಿತ್ರಗಳನ್ನು ಮಾತ್ರ ಎಡಿಟ್ ಮಾಡಬಹುದಷ್ಟೇ. ಈ ವೈಶಿಷ್ಟ್ಯ ಪೇಜ್ ಆಲ್ಬಂಗೆ ಲಭ್ಯವಿಲ್ಲ ಎನ್ನುತ್ತಾರೆ ಫೇಸ್‌ಬುಕ್ ವಕ್ತಾರರು.

ಈ ಹಂಚಿಕೆಯ ಆಲ್ಬಂಗಳು ಪ್ರವಾಸ, ಮದುವೆ ಸಮಾರಂಭ, ಔತಣಕೂಟಗಳು ಹಾಗೂ ಕುಟುಂಬದ ಸಮಾರಂಭ ಹೀಗೆ ಗುಂಪು ಕಾರ್ಯಕ್ರಮಗಳಿಗೆ ಹೇಳಿ ಮಾಡಿಸಿದಂತಿವೆ.

ಪ್ರಸ್ತುತ ಒಬ್ಬ ವ್ಯಕ್ತಿಗಿರುವ 200 ಫೋಟೊಗಳ ಮಿತಿಯನ್ನು ಭವಿಷ್ಯದಲ್ಲಿ ಹೆಚ್ಚಿಸುವ ಯೋಚನೆಯಿದ್ದು, ಜತೆಗೆ ಮೊಬೈಲ್‌ನಲ್ಲಿ ಕೂಡ ಈ ಆಲ್ಬಂ ತಯಾರಿಸುವ ಸೌಲಭ್ಯವನ್ನು (ಸದ್ಯ, ಕೊಡುಗೆದಾರರು ಆಲ್ಬಂಗೆ ಮೊಬೈಲ್‌ ನಿಂದ ಕೇವಲ ಫೋಟೊಗಳನ್ನು ಮಾತ್ರ ಕಳುಹಿಸಬಹುದಾಗಿದೆ) ಒದಗಿಸುವ ಭರವಸೆ ವ್ಯಕ್ತಪಡಿಸುತ್ತಾರೆ ಫೇಸ್‌ಬುಕ್ ನಿರ್ವಾಹಕರು.

‘ನಮ್ಮ ಯೋಚನೆಗಿಂತಲೂ ಭಿನ್ನ ವಾಗಿ ಜನರು ಬಳಸಬಹುದಾದ ಈ ಆಲ್ಬಂ ಅನಾವರಣಗೊಳಿಸಲು ನಾವು ಉತ್ಸುಕರಾಗಿದ್ದೇವೆ’ ಎನ್ನುತ್ತಾರೆ ಬಾಲ್ಡ್ವಿನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.