ADVERTISEMENT

ಫೋಟೊ ಕಳ್ಳತನ ತಡೆಯಲು ಪಿಕ್ಸಿ

ರಶ್ಮಿ ಕಾಸರಗೋಡು
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST
ಫೋಟೊ ಕಳ್ಳತನ ತಡೆಯಲು ಪಿಕ್ಸಿ
ಫೋಟೊ ಕಳ್ಳತನ ತಡೆಯಲು ಪಿಕ್ಸಿ   

ನೀವು ಕ್ಲಿಕ್ಕಿಸಿದ ಫೋಟೊಗಳನ್ನು ಸಾಮಾಜಿಕ ತಾಣದಲ್ಲಿ ಶೇರ್ ಮಾಡುತ್ತೀರಿ. ಈ ಫೋಟೊಗಳಿಗೆ ಲೈಕ್ ಕಾಮೆಂಟ್ ಮೂಲಕ ಮೆಚ್ಚುಗೆಗಳು ವ್ಯಕ್ತವಾಗುವುದರ ಜತೆಗೆ ಫೋಟೊ ಕಳ್ಳತನ ಆಗುವ ಸಂದರ್ಭವೂ ಇರುತ್ತದೆ. ವಾಟರ್ ಮಾರ್ಕ್ ಹಾಕಿ ಫೋಟೊ ಕಳ್ಳತನಕ್ಕೆ ನಿಯಂತ್ರಣ ಹೇರಬಹುದಾದರೂ ಎಲ್ಲರೂ ವಾಟರ್ ಮಾರ್ಕ್ ಹಾಕಿಯೇ ಫೋಟೊ ಶೇರ್ ಮಾಡುವುದಿಲ್ಲ, ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡಿದ ಫೋಟೊ ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಕಳ್ಳತನ ಆಗಬಹುದು ಮತ್ತು ಇದು ನಮಗೆ ಗೊತ್ತಾಗುವುದೂ ಇಲ್ಲ.

ಹೀಗಿರುವಾಗ ಫೋಟೊ ಕಳ್ಳತನವಾದರೆ ನಿಮ್ಮ ಫೋಟೊ ಕಳ್ಳತನವಾಗಿದೆ ಮತ್ತು ಕಳ್ಳತನ ಮಾಡಿದವರ ವಿರುದ್ಧ ದೂರು ದಾಖಲಿಸಿ, ನಷ್ಟ ಪರಿಹಾರ ಪಡೆಯಲು www.pixsy.com ಎಂಬ ವೆಬ್‍ಸೈಟ್ ಸಹಾಯ ಮಾಡುತ್ತದೆ.

ಪ್ರಮುಖ ಫೋಟೊ ಶೇರಿಂಗ್ ವೆಬ್‍ಸೈಟ್‍ಗಳೊಂದಿಗೆ ಸಂಪರ್ಕ ಹೊಂದಿರುವ ಪಿಕ್ಸಿ ಡಾಟ್ ಕಾಂ ಎಂಬ ವೆಬ್‌ಸೈಟ್, ನಾವು ಕ್ಲಿಕ್ಕಿಸಿದ ಫೋಟೊಗಳನ್ನು ಇನ್ಯಾರಾದರೂ ಕದ್ದು ಬಳಕೆ ಮಾಡಿದ್ದರೆ ಆ ವಿಷಯವನ್ನು ತಕ್ಷಣ ನಮ್ಮ ಗಮನಕ್ಕೆ ತರುತ್ತದೆ. ಫೋಟೊಗ್ರಾಫರ್‍‍ಗಳು ಕ್ಲಿಕ್ಕಿಸಿದ ಫೋಟೊಗಳನ್ನು ನಾವು ಸಂರಕ್ಷಿಸುತ್ತೇವೆ ಎಂದು ಪಿಕ್ಸಿ ಭರವಸೆ ನೀಡುತ್ತದೆ.

ADVERTISEMENT

ಇದು ಹೇಗೆ ಕಾರ್ಯವೆಸಗುತ್ತದೆ?

ವೆಬ್‍ಸೈಟ್‍ನಲ್ಲಿ ಹೆಸರು ನೋಂದಾಯಿಸಿದ ಮೇಲೆ ಲಾಗಿನ್ ಆಗಿ. ನೀವು ಬೇರೆ ಯಾವುದಾದರೂ ವೆಬ್‍ಸೈಟ್‍ಗಳಲ್ಲಿ ಅಥವಾ ಸಾಮಾಜಿಕ ತಾಣಗಳಲ್ಲಿ ಅಪ್‍ಲೋಡ್ ಮಾಡಿದ್ದ ಫೋಟೊವನ್ನು ಬೇರೆ ಯಾರಾದರೂ ಬಳಸಿದ್ದಾರೆಯೇ ಎಂದು ಪರೀಕ್ಷಿಸುವುದಕ್ಕಾಗಿ (ಟ್ರ್ಯಾಕ್ ಮಾಡುವುದಕ್ಕಾಗಿ) ಆ ಫೋಟೊವನ್ನು ಪಿಕ್ಸಿಯಲ್ಲಿ ಅಪ್‍ಲೋಡ್ ಮಾಡಿ. ನೀವು ಅಪ್‍ಲೋಡ್ ಮಾಡಿದ ಆ ಫೋಟೊ ಬೇರೆ ಕಡೆ ಬಳಕೆಯಾಗಿದೆಯೇ ಎಂದು ಪಿಕ್ಸಿ ಚೆಕ್ ಮಾಡುತ್ತದೆ. ಹಾಗೆ ಎಲ್ಲಿಯಾದರೂ ಬಳಕೆಯಾಗಿರುವುದು ಕಂಡರೆ ತಕ್ಷಣವೇ ನಿಮಗೆ ಮಾಹಿತಿ ಒದಗಿಸುತ್ತದೆ.

ಕಾಪಿರೈಟ್ ನಿಯಮ ಉಲ್ಲಂಘನೆಯಾಗಿದ್ದರೆ ಅಲ್ಲಿಯೇ ದೂರು ನೀಡಲು ಅವಕಾಶವಿದೆ. ನೀವು ಕ್ಲಿಕ್ಕಿಸಿದ ಆ ಫೋಟೊವನ್ನು ಇನ್ನೊಂದು ವೆಬ್‍ಸೈಟ್‍ನಿಂದ ತೆಗೆದುಹಾಕುವುದರಿಂದ ಹಿಡಿದು ನಷ್ಟ ಪರಿಹಾರ ಪಡೆಯುವ ಕಾರ್ಯಗಳನ್ನೆಲ್ಲಾ ಪಿಕ್ಸಿ ಮಾಡುತ್ತದೆ. ನಿಮಗೆ ಸಿಕ್ಕಿದ ನಷ್ಟ ಪರಿಹಾರದ ಅರ್ಧ ಹಣ ಪಿಕ್ಸಿಗೆ ನೀಡಬೇಕು ಅಷ್ಟೇ. ಕಾನೂನು ಕ್ರಮಗಳನ್ನು ಕೈಗೊಂಡಿದ್ದಕ್ಕೆ ಖರ್ಚಾದ ಹಣವನ್ನು ಪಿಕ್ಸಿ ನಿಮಗೆ ಸಿಕ್ಕಿದ ನಷ್ಟ ಪರಿಹಾರ ಮೊತ್ತದಿಂದ ವಸೂಲಿ ಮಾಡುತ್ತದೆ. ನಷ್ಟ ಪರಿಹಾರದ ಮೊತ್ತ ನೇರವಾಗಿ ನಿಮ್ಮ ಖಾತೆಗೆ ಬಂದಿರುತ್ತದೆ.

500 ಫೋಟೊಗಳನ್ನು ಉಚಿತವಾಗಿ ಟ್ರ್ಯಾಕ್ ಮಾಡುವ ಅವಕಾಶ ಇಲ್ಲಿದೆ. ಈ ಮಿತಿ ದಾಟಿದರೆ ಫೋಟೊ ಟ್ರ್ಯಾಕ್ ಮಾಡುವುದಕ್ಕೆ ಹಣ ನೀಡಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.