ನಿತ್ಯದ ಜಂಜಾಟದ ಮಧ್ಯೆ ನಿಯಮಿತವಾಗಿ ಮೊಬೈಲ್ ಫೋನ್‌ನ ಬ್ಯಾಟರಿ ಚಾರ್ಜ್ ಮಾಡುವುದನ್ನೇ ಮರೆಯುವ ಜನರೆಷ್ಟಿಲ್ಲ! ಕೆಲವು ತುರ್ತು ಸಂದರ್ಭಗಳಲ್ಲಿ ಬ್ಯಾಟರಿ ಬರಿದಾಗಿ ಕೆಲಸಕ್ಕೆ ಬಾರದಂತಾಗುವ ಮೊಬೈಲ್ ಫೋನ್ ನೋಡಿದಾಗ ಹಿಡಿಶಾಪ ಹಾಕುವವರಿಗಂತೂ ಲೆಕ್ಕವೇ ಇಲ್ಲ.
ಇನ್ನು ಆ ಚಿಂತೆ, ಒತ್ತಡ ಬೇಕಿಲ್ಲ. ಬ್ಯಾಟರಿಯಿಂದ ವೇಗವಾಗಿ ಶಕ್ತಿ ಸೋರಿಕೆಯಾಗುವ ಭಯವಿಲ್ಲದೆ ನಿಶ್ಚಿಂತೆಯಿಂದ ನೀವು ಮೊಬೈಲ್ ಉಪಯೋಗಿಸಬಹುದು ಎನ್ನುತ್ತಾರೆ ಇದಕ್ಕೊಂದು ಪರಿಹಾರ ಕಂಡು ಹಿಡಿದಿರುವ ವಾಷಿಂಗ್ಟನ್ ವಿಶ್ವವಿದ್ಯಾಯದ ಸಂಶೋಧಕರು.
`ಆ್ಯಂಬಿಯೆಂಟ್ ಬ್ಯಾಕ್‌ಸ್ಕ್ಯಾಟರ್' ಎಂಬ ಬ್ಯಾಟರಿ ಮುಕ್ತ ಸಂವಹನ ಸಾಧನವೊಂದನ್ನು ರೂಪಿಸಿರುವ ಈ ಸಂಶೋಧಕರು ಇದನ್ನು ಮೊಬೈಲ್‌ನಲ್ಲಿ ಅಳವಡಿಸಿಕೊಳ್ಳುವ ಮೂಲಕ ಬ್ಯಾಟರಿ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುತ್ತಾರೆ.
`ನಮ್ಮ ಸುತ್ತ ಆವರಿಸಿಕೊಂಡಿರುವ ಶಕ್ತಿಮೂಲ ಮತ್ತು ಸಂವಹನ ಮಾಧ್ಯಮಗಳ ನಿಸ್ತಂತು ತರಂಗಗಳನ್ನು ನಾವು ಮರು ಉದ್ದೇಶಕ್ಕಾಗಿ ಈ ತಂತ್ರಜ್ಞಾನದಲ್ಲಿ ಬಳಸಿಕೊಂಡಿದ್ದೇವೆ' ಎನ್ನುತ್ತಾರೆ ಸಂಶೋಧನಾ ತಂಡದ ನೇತೃತ್ವ ವಹಿಸಿದ್ದ ಭಾರತೀಯ ಮೂಲದ ವಿಜ್ಞಾನಿ ಶ್ಯಾಮ್ ಗುಲ್‌ಕೊಟಾ.
ಈ ವಿನೂತನ ವ್ಯವಸ್ಥೆಯಲ್ಲಿ ಬ್ಯಾಟರಿಯ ಸಹಾಯವೇ ಇಲ್ಲದೆ ನಮ್ಮನ್ನು ಸುತ್ತುವರಿದಿರುವ ಟಿ.ವಿ ಮತ್ತು ಪ್ರಸರಣ ಕೋಶಗಳ(ಸೆಲ್ಯುಲರ್ ಟ್ರಾನ್ಸ್‌ಮಿಷನ್ಸ್) ತರಂಗಗಳನ್ನು ಪ್ರತಿಫಲಿಸುವ ಅಥವಾ ಹೀರಿಕೊಳ್ಳುವ ಮೂಲಕ ಮಾಹಿತಿ ವಿನಿಮಯ ಕಾರ್ಯ ನಡೆಯುತ್ತದೆ.
ಸಂಶೋಧಕರು ಇದಕ್ಕಾಗಿ ಆ್ಯಂಟೆನಾ ಹೊಂದಿರುವ ಬ್ಯಾಟರಿ ರಹಿತ ಪುಟ್ಟ ಸಾಧನವೊಂದನ್ನು ರೂಪಿಸಿದ್ದು, ಇದು ಟಿ.ವಿಯ ತರಂಗಗಳನ್ನು ಬಳಸಿಕೊಂಡು ತನ್ನಂತುಹುದೇ ಮಾದರಿಯ ಇನ್ನೊಂದು ಸಾಧನಕ್ಕೆ ಸಂದೇಶ ರೂಪದಲ್ಲಿ ರವಾನಿಸುತ್ತದೆ.
ಸದ್ಯ ಕ್ರೆಡಿಟ್ ಕಾರ್ಡ್ ಅಳತೆಯಲ್ಲಿ ಪ್ರಾಯೋಗಿಕ ಮಾದರಿ ಸಾಧನವನ್ನು ತಯಾರಿಸಲಾಗಿದ್ದು, ಪರೀಕ್ಷೆಯನ್ನೂ ನಡೆಸಲಾಗಿದೆ. ಸಾಮಾನ್ಯ ಸರ್ಕಿಟ್ ಬೊರ್ಡ್ ಬಳಸಿ ಅದಕ್ಕೆ ಆ್ಯಂಟೆನಾ ಅಳವಡಿಸಿದ್ದು, ಮೊದಲಿನದರಂತೆಯೇ ಇರುವ ಮಾದರಿಯ ಇನ್ನೊಂದು ಸಾಧನವು ತನ್ನ ವ್ಯಾಪ್ತಿಯೊಳಕ್ಕೆ ಬಂದಾಗ ಈ ಸಾಧನದಲ್ಲಿ `ಎಲ್‌ಇಡಿ' ಬೆಳಕು ಹೊಮ್ಮುವ ವ್ಯವಸ್ಥೆಯಿದೆ.
ಈ ಸಾಧನವನ್ನು ಟಿ.ವಿ ಗೋಪುರಗಳಿಂದ ಸುಮಾರು 6.5 ಮೈಲಿಗಳಷ್ಟು ದೂರದ ಅಪಾರ್ಟ್‌ಮೆಂಟ್ ಕಟ್ಟಡದೊಳಗೆ, ಎತ್ತರದ ಕಟ್ಟಡಗಳ ಮೇಲಿನ ಪಾರ್ಕಿಂಗ್ ಸ್ಥಳಗಳಲ್ಲಿ, ಬೀದಿಗಳಲ್ಲಿ ಅಳವಡಿಸಿ ಸಂಶೋಧಕರು ಪರೀಕ್ಷೆಗೆ ಒಳಪಡಿಸಿದ್ದಾರೆ.
ಎಲ್ಲೆದಂರಲ್ಲಿ ಒಯ್ಯಬಹುದಾದ ಸಂವಹನ ಸಾಧನಗಳು, ಸ್ಮಾರ್ಟ್ ಹೊಮ್‌ಗಳು ಮತ್ತು ಸ್ವಾವಲಂಬಿ ಸಂವೇದಕ ಜಾಲಗಳಲ್ಲಿ ಸುಲಭವಾಗಿ ಅಳವಡಿಸಬಹುದಾದ ಈ ಸಾಧನವು ಭವಿಷ್ಯದ ಭರವಸೆಯ ತಂತ್ರಜ್ಞಾನವಾಗಿದೆ ಎನ್ನುತ್ತಾರೆ ಶ್ಯಾಮ್.
ಬ್ಯಾಟರಿಯನ್ನು ಅವಲಂಬಿಸಿರುವ ಸ್ಮಾರ್ಟ್ ಪೋನ್‌ಗಳಂತಹ ಸಾಧನಗಳಲ್ಲಿ ಈ ಉಪಕರಣವನ್ನು ಅಳವಡಿಸಲು ಚಿಂತನೆ ನಡೆಸಿದ್ದು, ಇದರಿಂದ ಮೊಬೈಲ್ ಬ್ಯಾಟರಿ ಕೈಕೊಟ್ಟಾಗಲೂ ಕೂಡ ನೀವು ಸಂದೇಶಗಳನ್ನು ಮತ್ತು ಇ-ಮೇಲ್‌ಗಳಲ್ಲಿ ಮಾಹಿತಿಗಳ ವಿನಿಮಯ ಕಾರ್ಯ ನಡೆಸಬಹುದಾಗಿದೆ.
ಭವಿಷ್ಯದ ಮೇಲೆ ಕಣ್ಣಿಟ್ಟಿರುವ ಸಂಶೋಧಕರು ಮುಂಬರುವ ದಿನಗಳಲ್ಲಿ ಉನ್ನತಮಟ್ಟದ `ಆ್ಯಂಬಿಯೆಂಟ್ ಬ್ಯಾಕ್‌ಸ್ಕ್ಯಾಟರ್'ಗಳ ಸಂವಹನ ಜಾಲವೊಂದನ್ನು ರೂಪಿಸುವ ಯೋಜನೆ ಹಾಕಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.