ADVERTISEMENT

ಮಾರ್ಕೆಟ್: ಅತಂತ್ರ ಅಡಿಕೆ ಬೆಳೆಗಾರ

ಪ್ರಕಾಶ ಕುಗ್ವೆ
Published 22 ಫೆಬ್ರುವರಿ 2011, 19:30 IST
Last Updated 22 ಫೆಬ್ರುವರಿ 2011, 19:30 IST
ಮಾರ್ಕೆಟ್: ಅತಂತ್ರ ಅಡಿಕೆ ಬೆಳೆಗಾರ
ಮಾರ್ಕೆಟ್: ಅತಂತ್ರ ಅಡಿಕೆ ಬೆಳೆಗಾರ   

ಪ್ರತಿ ವರ್ಷ ಈ ಸುಗ್ಗಿ ಸಮಯದಲ್ಲಿ ಅಡಿಕೆ ಬೆಳೆಗಾರರ ಮೇಲೆ ಗದಾಪ್ರಹಾರ ಸಾಮಾನ್ಯ. ಅಡಿಕೆ ಬೆಲೆ ಮಾರುಕಟ್ಟೆಯಲ್ಲಿ ತುಸು ಏರಿಕೆ ಕಂಡಾಗಲೆಲ್ಲ ಈ ರೀತಿಯ ಬಿಕ್ಕಟ್ಟು ಸಹಜ ಪ್ರಕ್ರಿಯೆ ಆಗಿದೆ. ಈಗ ಗುಟ್ಕಾ ಸ್ಯಾಚೆಟ್ ನಿಷೇಧ ನೆಪ ಮಾತ್ರ. ಈ ಹಿಂದೆಯೇ ಸುಪ್ರೀಂಕೋರ್ಟ್ ಗುಟ್ಕಾ ಸ್ಯಾಚೆಟ್ ನಿಷೇಧಿಸುವಂತೆ ಸೂಚಿಸಿತ್ತು. ಅಡಿಕೆ ವಹಿವಾಟಿಗೂ, ಗುಟ್ಕಾ ಸ್ಯಾಚೆಟ್ ನಿಷೇಧಕ್ಕೂ ಅಂತಹ ನೇರ ಸಂಬಂಧ ಇಲ್ಲದಿದ್ದರೂ ಇಡೀ ಅಡಿಕೆ ಮಾರುಕಟ್ಟೆ ದಿಕ್ಕೆಟ್ಟಿದ್ದು ಮಾತ್ರ ವಾಸ್ತವ ಸತ್ಯ.

ಕಳೆದ ಎರಡು ವಾರಗಳಿಂದ ರಾಜ್ಯದ ಬಹುತೇಕ ಅಡಿಕೆ ಮಾರುಕಟ್ಟೆಗಳು ಅಘೋಷಿತ ಬಂದ್ ಆಚರಿಸಿವೆ. ಮಲೆನಾಡಿನ ಬಹುಮುಖ್ಯ ಅಡಿಕೆ ಮಾರುಕಟ್ಟೆಗಳಾದ ಶಿವಮೊಗ್ಗ, ಸಾಗರ, ಶಿರಸಿ, ಉಡುಪಿಗಳಲ್ಲಿ ವ್ಯಾಪಾರ ಸಂಪೂರ್ಣ ಬಂದ್ ಆಗಿದೆ. ಮಾರುಕಟ್ಟೆಯಲ್ಲಿ ಎದ್ದ ಈ ಕೋಲಾಹಲದಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ; ವರ್ತಕರು ದಾರಿ ಕಾಣದಾಗಿದ್ದಾರೆ. 

ಕೇವಲ ಎರಡು ವಾರದ ಹಿಂದೆ ಕ್ವಿಂಟಲ್‌ಗೆ ರೂ.26ಸಾವಿರ  ಇದ್ದ ಕೆಂಪು ಅಡಿಕೆ ಬೆಲೆ ರೂ 20ಸಾವಿರಕ್ಕೆ, ್ಙ 16,500  ಇದ್ದ ಚಾಲಿ ಅಡಿಕೆ ಬೆಲೆ ್ಙ10ರಿಂದ  ್ಙ12ಸಾವಿರಕ್ಕೆ ಕುಸಿದಿದೆ. ಉಳಿದಂತೆ ಸರಕು, ಸಿಪ್ಪೆಗೋಟಿನ ಬೆಲೆಯೂ ಅಗಾಧವಾಗಿ ಕುಸಿತ ಕಂಡಿದೆ.

ಈ ಬೆಳವಣಿಗೆಯಿಂದ ಮಾರುಕಟ್ಟೆಗೆ ಬಂದ ಅಡಿಕೆಯನ್ನು ವರ್ತಕರು ಖರೀದಿಸುತ್ತಿಲ್ಲ. ಆದರೆ, ಮಾರುಕಟ್ಟೆಗೆ ಅಡಿಕೆ ತಂದ ಬೆಳೆಗಾರರು ಮಾತ್ರ ಆತಂಕಗೊಂಡಿದ್ದಾರೆ.

ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ 28 ಜಿಲ್ಲೆಗಳಲ್ಲಿ ಸುಮಾರು 5.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ವರ್ಷದಲ್ಲಿ 20 ಸಾವಿರ ಕೋಟಿ ರೂ ಮೌಲ್ಯದ 6.86 ಮೆಟ್ರಿಕ್ ಟನ್ ಅಡಿಕೆ ಬೆಳೆ ಬರುತ್ತದೆ. 60 ಲಕ್ಷ ಕುಟುಂಬಗಳು ಅಡಿಕೆ ಉದ್ಯಮ ನಂಬಿಕೊಂಡಿವೆ. ಈ ಉದ್ಯಮದಲ್ಲಿ ನೇರ ಮತ್ತು ಪರೋಕ್ಷ ಸೇರಿ ಒಟ್ಟು 2ಲಕ್ಷ ಕೋಟಿ ರೂ ಬಂಡವಾಳ ಹೂಡಿಕೆಯಾಗುತ್ತದೆ. ಇಂತಹ ಬೃಹತ್ ಉದ್ಯಮ ಈಗ ಕಂಪಿಸುತ್ತಿದೆ.

ಈ ಬಾರಿ ಮಳೆ ದೀರ್ಘಾವಧಿ ಕಾಡಿದ್ದರಿಂದ ಮಲೆನಾಡು ಸೇರಿದಂತೆ ಬಹುತೇಕ ಎಲ್ಲ ಕಡೆ ಈಗ ಅಡಿಕೆ ಸುಗ್ಗಿ. ಫಸಲು ಕೊಯ್ದು, ಸಂಸ್ಕರಿಸಿ ಅಡಿಕೆಯನ್ನು ಮಾರುಕಟ್ಟೆಗೆ ತರುವ ಕಾಲ. ಇಂತಹ ಸಂದರ್ಭದಲ್ಲಿ ಅಡಿಕೆ ಕೊಳ್ಳುವವರು ಇಲ್ಲದಿರುವುದು ಬೆಳೆಗಾರರ ಕಷ್ಟ ದುಪ್ಪಟ್ಟಾಗಿದೆ. ಸಾಲ-ಸೋಲ ಮಾಡಿಕೊಂಡವರು ಸಹಕಾರಿ ಸಂಘಗಳಿಗೆ ಕೊನೆ ಪಕ್ಷ ಬಡ್ಡಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಬೆಳೆಗಾರರನ್ನೇ ನಂಬಿಕೊಂಡಿದ್ದ ಸಹಕಾರಿ ಸಂಘಗಳು ಈಗ ಈ ಬೆಳವಣಿಗೆಯಿಂದ ಕಣ್-ಕಣ್ ಬಿಡುವಂತಾಗಿದೆ.     

ಕಳೆದ ಹತ್ತು ವರ್ಷಗಳಲ್ಲಿ ನಿರಂತರವಾಗಿ ಏಳು ತಿಂಗಳ ಕಾಲ ಅಡಿಕೆ ಬೆಲೆ ಸ್ಥಿರವಾಗಿದ್ದು ಇದೇ ಮೊದಲು. ಈ ಬಾರಿ ಉತ್ತಮ ಧಾರಣೆ ಇದ್ದ ಕಾರಣ ಬೆಳೆಗಾರರಿಗೂ ಉತ್ತಮ ಬೆಲೆ ಸಿಗುತ್ತದೆಂಬ ನಂಬಿಕೆ ಮಾರುಕಟ್ಟೆಯಲ್ಲಿತ್ತು. ಆದರೆ, ಮಾರುಕಟ್ಟೆಯಲ್ಲಿ ಸೃಷ್ಟಿಯಾದ ದಿಢೀರ್ ಬೆಳವಣಿಗೆಯಿಂದ ಬೆಳೆಗಾರರ ಆಸೆಗಳೆಲ್ಲ ಮಕಾಡೆ ಮಲಗಿವೆ.

ಸುಪ್ರೀಂಕೋರ್ಟ್ ಗುಟ್ಕಾ ಸ್ಯಾಚೆಟ್ ಅನ್ನು ಇದೇ ಮಾರ್ಚ್ 1ರಿಂದ ನಿಷೇಧಿಸುವಂತೆ ಆದೇಶಿಸಿದ್ದರಿಂದ ಗುಟ್ಕಾ ಕಂಪೆನಿಗಳಿಗೆ ಕಾನೂನಿನ ಭಯ ಆವರಿಸಿದೆ. ಹಾಗಾಗಿ, ಗುಟ್ಕಾ ಬೆಲೆ ದುಪ್ಪಟ್ಟಾಗಿದೆ. ಈಗ ಮಾರುಕಟ್ಟೆಯಲ್ಲಿ ಗುಟ್ಕಾ ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗುತ್ತಿಲ್ಲ.

ಸರ್ವ ಉತ್ಪನ್ನಗಳೂ ಇಂದು ಪ್ಲಾಸ್ಟಿಕ್‌ನಲ್ಲಿ ಸಿಗುತ್ತಿರುವಾಗ ಗುಟ್ಕಾಕ್ಕೆ ಮಾತ್ರ ಈ ಮೂಗುದಾರ ಏಕೆ ಎಂಬ ಪ್ರಶ್ನೆ ಬೆಳೆಗಾರರದ್ದು. ತುಂಬಾಕು ಹಾನಿಕರ ಎಂದು ಸರ್ಕಾರವೇ ಘೋಷಣೆ ಮಾಡಿದರೂ ಅದನ್ನು ಇನ್ನೂ ನಿಷೇಧಿಸಲು ಸಾಧ್ಯವಾಗಲಿಲ್ಲ. ಈ ನಡುವೆ ಗುಟ್ಕಾ ಸ್ಯಾಚೆಟ್ ನಿಷೇಧ ಮಾತುಗಳೂ ಏಕೆ ಇವೆ.

ನಿರಂತರ ಬೆಂಬಲ ಬೆಲೆ
ಪ್ರತಿ ವರ್ಷ ಬೆಂಬಲ ಬೆಲೆ ಘೋಷಣೆಯಾದರೆ ಮಾತ್ರ ಅಡಿಕೆ ಮಾರುಕಟ್ಟೆಯ ಅಸ್ಥಿರತೆಗೆ ಕೊನೆ ಹಾಡಬಹುದು. ಸರ್ಕಾರ ನಿರಂತರ ಬೆಂಬಲ ಬೆಲೆ ಘೋಷಿಸಬೇಕು. ಎಲ್ಲರೂ ಇದೇ ಬೆಲೆಗೆ ಮಾರಾಟ ಮಾಡುತ್ತಾರೆಂದು ಅರ್ಥವಲ್ಲ; ಬದಲಿಗೆ ಮಾರುಕಟ್ಟೆಯಲ್ಲಿ ಧಾರಣೆ ಹೆಚ್ಚಾಗುತ್ತದೆ. ಬೆಳೆಗಾರನಿಗೆ ಉತ್ಪಾದನಾ ವೆಚ್ಚವಾದರೂ ಉಳಿಯುತ್ತದೆ ಎಂಬ ಅಭಿಪ್ರಾಯ ಮ್ಯಾಮ್‌ಕೋಸ್ ಉಪಾಧ್ಯಕ್ಷ ನರಸಿಂಹನಾಯಕರದ್ದು.

ಅಡಿಕೆ ಬೆಳೆಗಾರ ಗುಟ್ಕಾ ಬೆಂಬಲಿಸುತ್ತಿಲ್ಲ. ಅಡಿಕೆಯ ಪರ್ಯಾಯ ಉಪಯೋಗಗಳ ಬಗ್ಗೆ ಸರ್ಕಾರ ನಡೆಸುತ್ತಿರುವ ಸಂಶೋಧನೆಗಳು ತ್ವರಿತಗತಿಯಲ್ಲಿ ನಡೆಯಬೇಕು ಎಂಬುದು ಬೆಳೆಗಾರರ ಒತ್ತಾಯ.

ಮಲೆನಾಡಿನಲ್ಲಿ ಅಡಿಕೆ ಬಿಟ್ಟರೆ ಬೇರೆ ಬೆಳೆ ಬೆಳೆಯಲು ಸಾಧ್ಯ ಇಲ್ಲ. ಇಲ್ಲಿ ಇಳುವರಿಯೂ ಕನಿಷ್ಠ ಪ್ರಮಾಣದ್ದು; ಅಡಿಕೆ ಸಂಸ್ಕರಣೆ ಈಗ ಬಹುದೊಡ್ಡ ಸಮಸ್ಯೆಯಾಗಿ ಬೆಳೆದಿದೆ. ಆದರೆ, ಇಲ್ಲಿನ ಜನಕ್ಕೆ ಈ ಬೆಳೆ ಬಿಟ್ಟು ಬೇರೆ ಗತ್ಯಂತರವಿಲ್ಲ. ಈಗ ಬಯಲುಸೀಮೆಯಲ್ಲೂ ಅಡಿಕೆ ವ್ಯಾಪಕವಾಗಿದೆ. ಅಲ್ಲಿ ಗುಡ್ಡ-ಬೆಟ್ಟಗಳನ್ನು ಅಗೆದು ಅಡಿಕೆ ಬೆಳೆಯಲಾಗಿದೆ. ಬೆಳೆ ಕುಸಿದರೆ ಅವರು ಬೇಕಾದರೆ ಅಡಿಕೆ ತೆಗೆದು ಬೇರೆ ಬೆಳೆ ಬೆಳೆಯಬಹುದು. ಆದರೆ ಮಲೆನಾಡಿನಲ್ಲಿ ಹಾಗಲ್ಲ. ಅಡಿಕೆ ಇಲ್ಲಿಯ ಜನಜೀವನದ ಜತೆ ಹಾಸುಹೊಕ್ಕಾಗಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಅಡಿಕೆ ಬೆಳೆಯನ್ನು ಸಾಂಸ್ಕೃತಿಕ ಬೆಳೆ ಎಂದು ಘೋಷಿಸಬೇಕು. ಮಗ್ಗದವರನ್ನು, ನೇಕಾರರನ್ನು ವಿಶೇಷತೆಯಿಂದ ನೋಡಿಕೊಳ್ಳುವಂತೆ ಅಡಿಕೆ ಬೆಳೆಗಾರರ ಬಗ್ಗೆ ಸರ್ಕಾರ ವಿಶೇಷ ಆಸಕ್ತಿ ವಹಿಸಬೇಕು. ಸರ್ಕಾರ ಸುಪ್ರೀಂಕೋರ್ಟ್‌ಗೆ ಹೆದರಿ ಗುಟ್ಕಾ ಸ್ಯಾಚೆಟ್ ನಿಷೇಧಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಕೇಂದ್ರ ಸರ್ಕಾರ ಮಧ್ಯಂತರ ಅರ್ಜಿ ಹಾಕಿ, ಸುಪ್ರೀಂಕೋರ್ಟ್ ತೀರ್ಪಿಗೆ ತಡೆ ತರಬೇಕು. ಇಲ್ಲದಿದ್ದರೆ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ, ತಾನು ಹೊರಡಿಸಿದ ಅಧಿಸೂಚನೆಗೆ ತಿದ್ದುಪಡಿ ತರಬೇಕು ಎಂಬ ಅಭಿಪ್ರಾಯವನ್ನು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.